ಬೆಂಗಳೂರು
ರಣಂ ಸಿನೆಮಾ ಚಿತ್ರೀಕರಣದ ವೇಳೆ ಏರ್ ಕಂಪ್ರೆಸರ್‍ನ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ತಾಯಿ, ಮಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧ ಸಾಹಸ ನಿರ್ದೇಶಕ ಸುಭಾಷ್‍ನನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ..
ದುರಂತಕ್ಕೆ ಕಾರಣರಾದ ರಣಂ ನಿರ್ದೇಶಕ ವಿ. ಸಮುದ್ರಂ, ನಿರ್ವಪಕ ಆರ್. ಶ್ರೀನಿವಾಸ್ ಸೇರಿ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು ಅವರ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್‍ಕುಮಾರ್ ಸಿಂಗ್ ತಿಳಿಸಿದ್ದಾರೆ.
ಪ್ರಕರಣದ ಸಂಬಂಧ ನಟ ಚೇತನ್ ಹೇಳಿಕೆ ದಾಖಲಿಸಿ ನಿರ್ದೇಶಕ ನಿರ್ಮಾಪಕರ ತಂತ್ರಜ್ಞರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದ್ದು ಸಾಹಸ ನಿರ್ದೇಶಕ ಸುಭಾಷ್(55)ನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ ಎಂದರು.
ಆರೋಪಿಗಳ ಪತ್ತೆಗಾಗಿ ಡಿಸಿಪಿ ಕಲಾ ಕೃಷ್ಣಸ್ವಾಮಿ ಅವರು ಮೂರು ವಿಶೇಷ ತಂಡಗಳು ರಚಿಸಿದ್ದು ತಂಡಗಳು ಕಾರ್ಯಾಚರಣೆ ನಡೆಸುತ್ತಿದ್ದು, ತನಿಖೆ ಚುರುಕುಗೊಳಿಸಲಾಗಿದೆ. ದುರ್ಘಟನೆ ಸಂಭವಿಸಿದ ದಿನ ಸಂಜೆ 7 ಗಂಟೆಗೆ ಸಾಹಸ ನಿರ್ದೇಶಕ ವಿಜಯನ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಚೆನ್ನೈಗೆ ಹೋಗಲು ಟಿಕೆಟ್ ಕಾಯ್ದಿರಿಸಿದ್ದರು.
ದುರ್ಘಟನೆ ನಡೆದ ಕೆಲ ಹೊತ್ತಲ್ಲೇ ಈ ವಿಚಾರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಸಿಬ್ಬಂದಿಗೆ ಈ ಬಗ್ಗೆ ಮಾಹಿತಿ ನೀಡಿದ್ದೆವು. ಪೊಲೀಸರು ತಮ್ಮನ್ನು ಬೆನ್ನಟ್ಟುತ್ತಿರುವ ವಿಚಾರ ತಿಳಿದುಕೊಂಡಿದ್ದ ವಿಜಯನ್, ವಿಮಾನದಲ್ಲಿ ಹೋಗದೆ ತಲೆಮರೆಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಆರೋಪಿಗಳು ಚೆನ್ನೈ ಅಥವಾ ಹೈದ್ರಾಬಾದ್‍ಗೆ ರಸ್ತೆ ಮೂಲಕ ತೆರಳಿರುವ ಬಗ್ಗೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಪೊಲೀಸರ ಎರಡು ತಂಡಗಳು ಹುಡುಕಾಟ ನಡೆಸುತ್ತಿವೆ. ಯಾವುದೇ ಅನುಮತಿ ಪಡೆಯದೆ ಸಿನಿಮಾ ತಂಡದವರು ಸಾಹಸ ದೃಶ್ಯ ಚಿತ್ರೀಕರಿಸಿದ ಹಿನ್ನೆಲೆಯಲ್ಲಿ ದುರ್ಘಟನೆ ನಡೆದ ಸ್ಥಳದಲ್ಲಿದ್ದ ಸಿನಿಮಾ ತಂಡದ ಎಲ್ಲ ವಾಹನಗಳನ್ನೂ ಜಪ್ತಿ ಮಾಡಲಾಗಿದೆ ಎಂದರು.ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಮೃತರ ನಾಲ್ವರು ಸಂಬಂಧಿಗಳು ನಿನ್ನೆ ಮೊಬೈಲ್ ಟವರ್ ಏರಿ ಚಿತ್ರತಂಡದ ವಿರುದ್ಧ ಪ್ರತಿಭಟನೆ ನಡೆಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
