ಮೂಲಭೂತವಾದಿಗಳನ್ನು ಎದುರಿಸುವುದೇ ಮುಸ್ಲಿಂ ಬರಹಗಾರರ ದೊಡ್ಡ ಸವಾಲು

ದಾವಣಗೆರೆ:

     ಹೊರಗಿನ ಕೋಮುವಾದಿಗಳನ್ನು ಹಾಗೂ ಒಳಗಿನ ಮೂಲಭೂತವಾದಿಗಳನ್ನು ಎದುರಿಸಿ ಬರೆಯುವ ದೊಡ್ಡ ಸವಾಲು ಭಾರತೀಯ ಮುಸ್ಲಿಂ ಬರಹಗಾರರ ಎದುರಿಗಿದೆ ಎಂದು ಚಿಂತಕ ರಂಜಾನ್ ದರ್ಗಾ ಆತಂಕ ವ್ಯಕ್ತಪಡಿಸಿದರು.

      ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ಮುಸ್ಲಿಂ ಚಿಂತಕರ ಚಾವಡಿ ವತಿಯಿಂದ ಏರ್ಪಡಿಸಿದ್ದ ಕನ್ನಡದ ಪ್ರಮುಖ ಲೇಖಕರ ಕೃತಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರು ಉಪವಾಸ, ಪ್ರಾರ್ಥನೆ, ಧ್ಯಾನಕ್ಕಿಂತ ಉತ್ತಮ ಮನುಷ್ಯ ಸಂಬಂಧ ಹೊಂದುವುದು ದೊಡ್ಡದು ಎಂಬುದಾಗಿ ಭಾವಿಸಿದ್ದರು. ಆದರೆ, ಇದನ್ನು ಪ್ರಸ್ತುತ ಯಾರೂ ಅರಿಯದ ಕಾರಣ ದಂಗೆ, ಜಗಳ ಹೆಚ್ಚಾಗಿ ಮನುಷ್ಯ ಕುಲ ವಿನಾಷದತ್ತ ಸಾಗುತ್ತಿದೆ ಎಂದು ವಿಷಾಧ ವ್ಯಕ್ತಪಡಿಸಿದರು.

      ಪೈಗಂಬರ್ ಅವರು ಆತ್ಮಸಾಕ್ಷಿ, ನಿಸರ್ಗ ಸಂಬಂಧಕ್ಕೆ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನ ನೀಡಿ, ಖುರಾನ್‍ಗೆ ಮೂರನೇ ಸ್ಥಾನ ಕಲ್ಪಿಸಿದ್ದರು. ಈ ಚಿಂತನೆ ಅರಿಯದೇ ಇದ್ದರೆ, ಯಾವ ಧರ್ಮವೂ ನಮಗೆ ಅರ್ಥವಾಗುವುದಿಲ್ಲ ಎಂದು ಸೂಚ್ಯವಾಗಿ ನುಡಿದರು.
ಎ.ಎಸ್.ಮಕಾನ್‍ದಾರ್ ಅವರ ಅಕ್ಕಡಿ ಸಾಲು ಕವನ ಸಂಕಲ ಬಹುಸಂಖ್ಯಾತರು ಹಾಗೂ ಅಲ್ಪಸಂಖ್ಯಾತರು ಪರಸ್ಪರ ಸಹಕಾರ ನೀಡುವ ಮೂಲಕ ಬದುಕುವ ನಿಸರ್ಗ ಕ್ರಮನ್ನು ಅನಾವರಣಗೊಳಿಸಿದೆ.

       ಅದೇರೀತಿ ಬೋಡೆ ರಿಯಾಜ್ ಅಹಮದ್ ತಿಮ್ಮಾಪುರಿ ಅವರ ಪ್ರೇಮ, ಸೂಫಿ, ಬಂದೇನವಾಜ್ ಕೃತಿಯು ಲೌಕಿಕ ಆಕರ್ಷಣೆಯನ್ನು ಮೂಡಿಸುತ್ತದೆ. ಬಂದೇನವಾಜ್ ಅವರು ಗದ್ಯದಲ್ಲಿ ಸೂಫಿ ಸಾಹಿತ್ಯ ರಚಿಸಿದ ಜಗತ್ತಿನ ಮೊಟ್ಟಮೊದಲ ಸೂಫಿ ಸಂತರಾಗಿದ್ದಾರೆ. ಇವರು ತಮ್ಮ ಸೂಫಿ ಸಾಹಿತ್ಯದ ಮೂಲಕ ಜನರಿಗೆ ರಾಮಾಯಣ-ಮಹಾಭಾರತವನ್ನು ಹೇಳು ಕೊಡುವುದರ ಜೊತೆ, ಜೊತೆಯಾಗಿಯೇ ಸೂಫಿ ಚಿಂತನೆಯನ್ನು ಹೇಳುತ್ತಿದ್ದರವು ಎಂಬುದನ್ನು ಕವಿ ಈ ಕೃತಿಯಲ್ಲಿ ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆಂದು ಹೇಳಿದರು.

      ರಾಜಾಶ್ರಯ ಪಡೆದ ಮೊದಲ ಸೂಫಿಸಂತ ಬಂದೇನವಾಜ್ ಆಗಿದ್ದರೂ ಸಹ ಅವರನು ಕೊನೆಯ ವರೆಗೆ ರಾಜಾಶ್ರಯದಲ್ಲಿ ಉಳಿಯಲಾಗದೇ, ಜನಾಶ್ರಯದಲ್ಲಿ ಬಂದು ಚಿಸ್ತಿ ಪರಂರೆಯನ್ನು ಸಾರಿದ ಮಹಾನ್ ಸೂಫಿ ಸಂತರಾಗಿದ್ದಾರೆ ಎಂಬುದು ಕೃತಿಯಲ್ಲಿ ಲೇಖಕರು ಅರ್ಥಗರ್ಭಿತವಾಗಿ ನಿರೂಪಿಸಿದ್ದಾರೆ. ಇನ್ನೂ ಬೊಳುವಾರು ಮಹಮದ್ ಕುಂಞ ಅವರು ಉಮ್ಮಾ ಕಾದಂಬರಿಯ ಮೂಲಕ ಇಡೀ ಧರ್ಮವನ್ನು ಭೂಮಿಗೆ ತರುವ ಪ್ರಯತ್ನ ಮಾಡಿದ್ದಾರೆ. ಈ ಕೃತಿಯಲ್ಲಿ ಮಾನವೀಯ ವಿಮೋಚನೆಯ ಪ್ರಶ್ನೆ ಇದೆಯೇ ಹೊರತು, ಈ ಕಾದಂಬರಿಯಲ್ಲಿ ಎಲ್ಲೂ ಗಂಡಸಿನ ಕ್ರೌರ್ಯ, ಹೆಣ್ಣಿನ ಹೋರಾಟವಿಲ್ಲ. ಬದಲಿಗೆ ಜೀವನ ಹೋರಾಟವಿದೆ ಎಂದು ವಿಶ್ಲೇಷಿಸಿದರು.

       ಉಮ್ಮಾ ಕೃತಿಯು ಮೊಹಮದ್ ಪೈಗಂಬರ್ 12 ಪತ್ನಿಯರ ಕುರಿತು ಇದ್ದು, ಉಮ್ಮಾ ಎಂದರೆ, ಅಮ್ಮ ಎಂಬ ಅರ್ಥವನ್ನು ಕೊಡುತ್ತದೆ. ಪೈಗಂಬರರ ಮೊದಲ ಪತ್ನಿ ಆಯಿಷಾ ಪ್ರವಾದಿ ಪೈಗಂಬರರಿಗಿಂತ ಸುಮಾರು 15 ವರ್ಷ ದೊಡ್ಡವರಿದ್ದರು. ಅಲ್ಲದೆ, ಎರಡು ಬಾರಿ ವಿಧವೆಯಾಗಿದ್ದರು. ಪೈಗಂಬರರು ಸಮಾಜದಲ್ಲಿ ಶಾಂತಿ ಸಾರುವ ಉದ್ದೇಶದಿಂದ ಯಹೂದಿ, ಕ್ರೈಸ್ತರು ಹಾಗೂ ಬುಡಕಟ್ಟು ಸಮುದಾಯಗಳೊಂದಿಗೆ ವೈವಾಹಿಕ ಸಂಬಂಧ ಬೆಳೆಸಿ, 12 ಜನರನ್ನು ಮದುವೆಯಾಗಿದ್ದರು. ಇವರ ಪೈಕಿ ಅಫಿರಾ ಇನ್ನುಳಿದ 11 ಜನರ ತಾಯಿಯಂತೆ ನಡೆದುಕೊಂಡಿದ್ದರು. ಅಲ್ಲದೆ, 7ನೇ ಶತಮಾನದ ಹೆಣ್ಣು ಮಕ್ಕಳ ಸ್ಥಿತಿಯನ್ನು ಲೇಖಕರು ಅನಾವರಣಗೊಳಿಸಿದ್ದಾರೆಂದು ಹೇಳಿದರು.

       ಅಕ್ಕಡಿ ಸಾಲು ಕೃತಿ ಕುರಿತು ಮಾತನಾಡಿದ ಚಿಂತಕ ಡಾ.ಎ.ಬಿ.ರಾಮಚಂದ್ರಪ್ಪ, ಸಂಸ್ಕತಿಯ ಹೆಸರಿನಲ್ಲಿರುವ ಕೆಲ ವೇದಿಕೆಗಳು ಕೋಮುವಾದ ಹರಡುತ್ತಿರುವ ಸಂದರ್ಭದಲ್ಲಿ ಮುಸ್ಲಿಂ ಚಿಂತಕರ ಚಾವಡಿ ಸಾಂಸ್ಕತಿಕ ಮನಸ್ಸುಗಳನ್ನು ಬೆಸೆಯುತ್ತಿರುವುದು ಅತ್ಯಂತ ಶ್ಲಾಘನೀಯವಾಗಿದೆ. ಪೂರ್ವ ಕಾಲದಿಂದಲೂ ವರ್ಣ, ಜಾತಿ, ಧರ್ಮಗಳ ವಿರುದ್ಧ ಸಾಹಿತ್ಯ ವಲಯ ತಕರಾರರು ಎತ್ತುತ್ತಲೇ ಬಂದಿದೆ. ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕತಿಕ ತಲ್ಲಣಗಳು ನಮ್ಮನ್ನು ಅಪಾರವಾಗಿ ಬಾಧಿಸುತ್ತಿರುವ ಸಂದರ್ಭದಲ್ಲಿ ಕವಿಯೊಬ್ಬ ಸಾಂಸ್ಕತಿಕ ಮನಸ್ಸು ಬೆಸೆಯುವ ಕೆಲಸ ಮಾಡುತ್ತಿರುವುದು ನಿಜಕ್ಕೂ ಅರ್ಥಪೂರ್ಣವಾಗಿದೆ ಎಂದರು.

        ಜಾತಿವಾದ, ಹುಸಿಸಂಸ್ಕತಿ ಮೌಲ್ಯಗಳನ್ನು ವಿಜೃಂಭಿಸುತ್ತಿರುವ ಸಂದರ್ಭದಲ್ಲಿ ಕವಿ ಎ.ಎಸ್.ಮಕಾನ್‍ದಾರ್ ಅವರು ಅಕ್ಕಡಿಸಾಲು ಕೃತಿಯ ಮೂಲಕ ಸಾಂಸ್ಕತಿಕ ಮನಸ್ಸುಗಳನ್ನು ಬೆಸೆಯುವ ಪ್ರಯತ್ನಮಾಡಿದ್ದಾರೆ. ಬುದ್ಧನ ಆಲೋಚನೆಗಳ ಮೂಲಕ ಸಾಂಸ್ಕತಿಕ ನೆಲೆಗಟ್ಟನ್ನು ಗಟ್ಟಿಗೊಳಿಸುವ ಕೆಲಸ ಮಡಿದ್ದಾರೆ. ಪಂಪನಿಂದ ಹಿಡಿದು ಇಂದಿನ ಪ್ರಧಾನ ಕವಿಗಳ ವರೆಗೂ ಕನ್ನಡ ಮೀಮಾಂಸೆಯ ಮೂಲಕ ಕನ್ನಡ ಸಂವೇದನೆಯನ್ನು ಕಟ್ಟುವ ಪ್ರಯತ್ನ ಮಾಡಿದ್ದಾರೆ. ಅಕ್ಷರ ಸಹ ವರ್ಗ, ಪ್ರಭುತ್ವದ ಪರವಾಗಿ ಇರುವ ಕಾರಣ ಅಕ್ಷರ ಮೂಲಕ ನಮಗೆ ಸಿಗಬೇಕಾದ ಸಂವೇದನೆ ಇನ್ನೂ ಲಭ್ಯವಾಗಿಲ್ಲ. ಒಬ್ಬ ಕವಿ ಜಾತಿ, ಪ್ರಭುತ್ವದ ಆಚೆಗೆ ನಿಂತು ಸಾಂಸ್ಕತಿಕ ಬೇರುಗಳನ್ನು ಗಟ್ಟಿಗೊಳಿಸುವ ಪ್ರಯತ್ನ ಮಾಡಬೇಕೆಂದು ಹೇಳಿದರು.

        ಅಕ್ಕಡಿ ಸಾಲು ಕೃತಿ ಲೋಕಾರ್ಪಣೆ ಮಾಡಿದ ಜಿ.ಪಂ. ಸದಸ್ಯ ತೇಜಸ್ವಿ ಪಟೇಲ್ ಮಾತನಾಡಿ, ಕೃಷಿ ಮೂಲದಿಂದ ಬಂದಂಥಹ ನನ್ನಂತವರಿಗೆ ಅಕ್ಕಡಿಸಾಲು ಎಂದರೆ, ಒಂದೇ ಜಮೀನಿನಲ್ಲಿ ನಾಲ್ಕಾರು ಬೆಳೆ ಬೆಳೆಯುವ ಕೃಷಿ ವಿಧಾನವಾಗಿದ್ದು, ಈ ನಿಟ್ಟಿನಲ್ಲಿಯೇ ವಿವಿಧ ಜಾತಿ, ಆಚಾರ, ವಿಚಾರಗಳನ್ನು ಒಂದಾಗಿಸಿ ಪರಸ್ಪರ ಪ್ರೀತಿ, ಸಾಮರಸ್ಯ ಮೂಡಿಸುವ ಜಾತ್ಯಾತೀತ ಸಮಾಜ ನಿರ್ಮಾಣವೇ ಈ ಕೃತಿಯ ಉದ್ದೇಶವಾಗಿದೆ ಎಂದರು.

        ಬೋಡೆ ರಿಯಾಜ್ ಅಹಮದ್ ತಿಮ್ಮಾಪುರಿ ಅವರ “ಪ್ರೇಮ, ಸೂಫಿ, ಬಂದೇನವಾಜ್” ಕೃತಿಯ ಬಗ್ಗೆ ಮಾತನಾಡಿದ ಶಿಕ್ಷಕ ಆರ್.ಕೆ.ಬಾಗವಾನ್, ಬಂದೇನವಾಜ್ ಒಬ್ಬ ಸೂಫಿ ಸಂತ, ಸೂಫಿ ಸಂತರಬಗ್ಗೆ ಹಲವು ಕೃತಿಗಳು ಬೇರೆ, ಬೇರೆ ಭಾಷೆಗಳಲ್ಲಿ ಬಂದಿವೆ. ಆದರೆ, ತಿಮ್ಮಾಪುರಿಯವರು ಇದನ್ನು ಮೊಟ್ಟ ಮೊದಲಿಗೆ ಕನ್ನಡದಲ್ಲಿ ಬರೆದವರಾಗಿದ್ದಾರೆ. ಇದಲರಲ್ಲಿ ಐದು ಅಧ್ಯಾಯ ಮತ್ತು ಮೂರು ಅನುಬಂಧಗಳಿವೆ. ಈ ಪುಸ್ತಕದಲ್ಲಿ ಸೂಫಿ ಸಂತ ಬಂದೇನವಾಜ್ ಅವರ ಸಮಗ್ರ ವಿವರಣೆ ಇದೆ ಎಂದರು.

       ಬೊಳುವಾರು ಮಹಮದ್ ಕುಂಞ ಅವರ ಉಮ್ಮಾ ಕಾದಂಬರಿಯ ಕುರಿತು ಮಾತನಾಡಿದ ಹಿರಿಯ ಪತ್ರಕರ್ತ ಬಿ.ಎಂ.ಹನೀಫ್, ಬೊಳುವಾರು ಮೂಲತಃ ನಾಟಕಕಾರರಾಗಿದ್ದು, ಕಾದಂಬರಿಯೂ ಇದನ್ನು ಹೊರತಾಗಿಲ್ಲ. ಎಂಥಹ ಕಲ್ಲು ಮನಸ್ಸಿನ ಓದುಗನ ಕಣ್ಣಂಚಲಿ ನೀರು ಬರುವಂತೆ ಮಾಡುವ ಹೈಡ್ರಾಮಾ ಈ ಕಾದಂಬರಿಯಲ್ಲಿದೆ. ಸ್ವಗತದ ತಂತ್ರವನ್ನು ಕವಿ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಎಲ್ಲೂ ಸ್ವಾರಸ್ಯವನ್ನು ಕಡಸದೆಯೇ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದಾರೆ. 21ನೇ ಶತಮಾನದಲ್ಲಿ ನಿಂತು, 7ನೇ ಶತಮಾನದ ಹೆಣ್ಣುಮಕ್ಕಳು ಅನುಭವಿಸಬಹುದಾಗಿರುವ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಇದು ಬೈರಪ್ಪನವರ ಪರ್ವ ಕಾದಂಬರಿಗಿಂತಲೂ ಎತ್ತರದ ಸ್ಥಾನಕ್ಕೆ ನಿಲ್ಲುತ್ತದೆ ಎಂದರು.

       ಈ ಸಂದರ್ಭದಲ್ಲಿ ಲೇಖಕ ಬೊಳುವಾರು ಮಹಮದ್ ಕುಂಞ ಅವರ “ಉಮ್ಮಾ” ಕಾದಂಬರಿ, ಕಲ್ಬುರ್ಗಿಯ ಕವಿ ಬೋಡೆ ರಿಯಾಜ್ ಅಹ್ಮದ್ ಅವರ “ಪ್ರೇಮ, ಸೂಫಿ, ಬಂದೇನವಾಜ್” ಕೃತಿ ಹಾಗೂ ಗದಗಿನ ಕವಿ ಎ.ಎಸ್.ಮಕಾನ್‍ದಾರ್ ಅವರ “ಅಕ್ಕಡಿಸಾಲು” ಕವನ ಸಂಕಲನ ಬಿಡುಗಡೆಯಾದವು.

        ಕಾರ್ಯಕ್ರಮದಲ್ಲಿ ಲೇಖಕರಾದ ಬೊಳುವಾರು ಮಹಮದ್ ಕುಂಞ, ಬೋಡೆ ರಿಯಾಜ್ ಅಹ್ಮದ್ ತಿಮ್ಮಾಪುರಿ, ಎ.ಎಸ್.ಮಕಾನ್‍ದಾರ್, ಚಾವಡಿಯ ಡಾ.ಚಮನ್ ಫರ್ಜಾನ ಉಪಸ್ಥಿತರಿದ್ದರು. ಚಾವಡಿಯ ಜೆ.ಕಲೀಂಭಾಷ ಪ್ರಾಸ್ತಾವಿಕ ಮಾತನಾಡಿದರು. ಅನೀಸ್ ಪಾಷ ಸ್ವಾಗತಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ