22 ತೋಟಗಾರಿಕಾ ಬೆಳೆಗಳಿಗೆ ಆರ್ಥಿಕ ಸೌಲಭ್ಯ

ಬೆಂಗಳೂರು:

      ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಯೋಜನೆಯಡಿ 22 ತೋಟಗಾರಿಕಾ ಬೆಳೆಗಳಿಗೆ ಆರ್ಥಿಕ ಸೌಲಭ್ಯ ನೀಡಲು ನಿರ್ಧರಿಸಿದ್ದು, ಅದನ್ನು ರೈತರು ದೊಡ್ಡ ಪ್ರಮಾಣದಲ್ಲಿ ಬಳಸಿಕೊಳ್ಳಬೇಕೆಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ ಇಂದಿಲ್ಲಿ ಕರೆ ನೀಡಿದ್ದಾರೆ.

      ವಿಕಾಸಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ನರೇಗಾ ಯೋಜನೆಯಡಿ ತೋಟಗಾರಿಕಾ ಬೆಳೆಗಳಾದ ರೇಷ್ಮೆ, ಮಾವು, ಸೀಬೆ, ದ್ರಾಕ್ಷಿ, ಹಾಗೂ ಬಾಳೆ ಮುಂತಾದ 22 ಬೆಳೆಗಳಿಗೆ ಆರ್ಥಿಕ ಸೌಲಭ್ಯ ಒದಗಿಸಲು ಅವಕಾಶವಿದೆ. ವೃಕ್ಷದ ಮಾದರಿಯಲ್ಲಿ ಬೆಳೆಯುವ ತೋಟಗಾರಿಕಾ ಬೆಳೆಗಳಿಗೆ ಈ ಸೌಲಭ್ಯ ದೊರೆಯಲಿದೆ ಎಂದರು.

       ಪ್ರತಿ ಎಕರೆಗೆ 30 ರಿಂದ 90 ಸಾವಿರ ರೂ ವರೆಗೆ ನೆರವನ್ನು ಪಡೆದುಕೊಳ್ಳಬಹುದಾಗಿದೆ, ಆದರೆ ಈ ಬಗ್ಗೆ ರೈತರಲ್ಲಿ ಹಾಗೂ ಜನಸಾಮಾನ್ಯರಲ್ಲಿ ಸರಿಯಾದ ಮಾಹಿತಿ ಇಲ್ಲದಾಗಿದೆ. ಆದ್ದರಿಂದ ಎಲ್ಲಾ ಜಿಲ್ಲೆಗಳಲ್ಲಿಯೂ ಇದಕ್ಕೆ ದೊಡ್ಡ ಪ್ರಮಾಣದಲ್ಲಿ ಮಾಹಿತಿ ಅಭಿಯಾನವನ್ನು ಆಯೋಜಿಸಬೇಕು ಎಂದು ಅವರು ಸೂಚನೆ ನೀಡಿದರು.

      ನರೇಗಾ ಯೋಜನೆಯಡಿ ಈವರೆಗೆ ಶೇಕಡ 47ರಷ್ಟು ಪ್ರಗತಿ ಸಾಧಿಸಲಾಗಿದೆ. 3700 ಕೋಟಿ ರೂ.ಗಳ ಗುರಿಯಲ್ಲಿ 1776 ಕೋಟಿ ರೂ.ಗಳ ಗುರಿ ತಲುಪಿದೆ. 8.5 ಕೋಟಿ ರೂ.ಗಳ ಕಾಮಗಾರಿಗಳ ಗುರಿಯಲ್ಲಿ 3.36 ಕೋಟಿ ರೂ.ಗಳ ಗುರಿಯನ್ನು ತಲುಪಲಾಗಿದೆ ಎಂದು ಅವರು ಹೇಳಿದರು.

      ಈ ಕಾಮಗಾರಿಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಆಸ್ತಿ ಸೃಜನೆಗೆ ಒತ್ತು ನೀಡಬೇಕು ಅದಕ್ಕಾಗಿ ಚೆಕ್ ಡ್ಯಾಮ್ ನಿರ್ಮಾಣ, ಶಾಲಾ ಕಾಂಪೌಂಡ್ ನಿರ್ಮಾಣ, ಶಾಲಾ ಆಟದ ಮೈದಾನಗಳ ಅಭಿವೃದ್ದಿ, ಶೌಚಾಲಯ ಇಲ್ಲದಿರುವ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ, ಮಳೆ ನೀರು ಸಂರಕ್ಷಣೆಗೆ ಅಗತ್ಯವಾದ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು ವಿಶೇಷವಾಗಿ ಪಶು ಸಾಕಾಣಿಕೆಯಲ್ಲಿ ದನದ ಕೊಟ್ಟಿಗೆ, ಕುರಿ ದೊಡ್ಡಿಗಳ ನಿರ್ಮಾಣಕ್ಕೆ ಗಮನಹರಿಸಬೇಕು. ಈ ಬಗ್ಗೆ ರೈತರಿಗೆ ಮಾಹಿತಿ ನೀಡಿ ಕೊಟ್ಟಿಗೆಗಳ ನಿರ್ಮಾಣಕ್ಕೆ ದೊಡ್ಡ ಪ್ರಮಾಣದಲ್ಲಿ ಮುಂದಾಗಬೇಕು ಎಂದು ಸಚಿವರು ತಿಳಿಸಿದರು.

      ಚೆಕ್ ಡ್ಯಾಮ್‍ಗಳ ನಿರ್ಮಾಣದ ಸಮಯದಲ್ಲಿ ಉಪಗ್ರಹ ಆಧಾರಿತ ಚಿತ್ರಗಳ ಮಾಹಿತಿ ಪಡೆದು ನೀರು ಹರಿವಿನ ಪ್ರದೇಶಗಳನ್ನು ಗುರುತಿಸಿ ಜಿಪಿಎಸ್ ಮೂಲಕ ನಿರ್ದಿಷ್ಟ ಪಡಿಸಿದ ಸ್ಥಳಗಳಲ್ಲಿಯೇ ಚೆಕ್ ಡ್ಯಾಮ್ ನಿರ್ಮಿಸಬೇಕು ಎಂದು ಅವರು ಹೇಳಿದರು.

ವಸತಿ: ರಾಜ್ಯ ಸರ್ಕಾರ ವಿವಿಧ ಯೋಜನೆಯಗಳಡಿಯಲ್ಲಿ ಬಿ.ಪಿ.ಎಲ್ ಪಡಿತರದಾರರಿಗೆ ಒದಗಿಸುತ್ತಿರುವ ವಸತಿ ಸೌಲಭ್ಯ ಪಡೆದಿರುವ ಫಲಾನುಭವಿಗಳಿಗೆ ನರೇಗಾ ಯೋಜನೆಯಡಿ ಆದ್ಯತೆಯ ಮೇರೆಗೆ ನೆರವು ನೀಡಬೇಕು, ಪ್ರತಿ ಫಲಾನುಭವಿಗೆ 22000 ರೂ.ಗಳ ಆರ್ಥಿಕ ಸೌಲಭ್ಯ ಒದಗಿಸಲು ಅವಕಾಶವಿದೆ. ಇದರ ಬಗ್ಗೆ ಸಹ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಗಮನಹರಿಸಬೇಕು ಎಂದು ಹೇಳಿದರು.

      ಎಲ್ಲಾ ಜಿಲ್ಲೆಗಳ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಮಗೆ ನಿಗದಿಪಡಿಸಿರುವ ಗುರಿ ತಲುಪಲು ಬದ್ದತೆಯಿಂದ ಕೆಲಸ ಮಾಡಲು ಪ್ರತಿಯೊಂದು ಯೋಜನೆಗಳ ಅನುಷ್ಠಾನದ ಸಾಧ್ಯ-ಸಾಧ್ಯತೆಗಳ ಬಗ್ಗೆ ಗಮನಹರಿಸಿ ಕಾಲ ಮಿತಿಯೊಳಗೆ ಕೆಲಸ ಮಾಡಬೇಕು, ವೈಫಲ್ಯಗಳ ಬಗ್ಗೆ ಯಾವುದೇ ರೀತಿಯ ಕಾರಣಗಳನ್ನು ಹೇಳುವಂತಿಲ್ಲವೆಂದು ಅವರು ಎಚ್ಚರಿಕೆ ನೀಡಿದರು.
ರಾಜ್ಯಾದ್ಯಂತ 13600 ಶುದ್ದ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದ್ದು ಅವುಗಳಲ್ಲಿ 2498 ಘಟಕಗಳು ನಾನಾ ಕಾರಣಗಳಿಗಾಗಿ ಕೆಟ್ಟು ಹೋಗಿದ್ದು ಅದರಲ್ಲಿ 650 ಅನ್ನು ಹೊರತುಪಡಿಸಿ ಉಳಿದ ಎಲ್ಲಾ ಘಟಕಗಳನ್ನು ರಿಪೇರಿ ಮಾಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

      ಸಭೆಯಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್, ಸರ್ಕಾರದ ಕಾರ್ಯದರ್ಶಿ,ಎಂ.ವಿ.ಸಾವಿತ್ರಿ, ಆಯುಕ್ತರಾದ ಕನಗವಲ್ಲಿ ಹಾಗೂ ಡಾ.ವಿಶಾಲ್ ಸೇರಿದಂತೆ ಉನ್ನತಾಧಿಕಾರಿಗಳು ಹಾಜರಿದ್ದರು.

                  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link
Powered by Social Snap