ಚಿಕ್ಕನಾಯಕನಹಳ್ಳಿ :
ಸಾರ್ವಜನಿಕರಲ್ಲಿ ಕೊರೋನಾ ಪರೀಕ್ಷೆ ಮಾಡಿಸಲು ಸಂಘ ಸಂಸ್ಥೆಗಳ ಸಹಕಾರ ಪಡೆಯಬೇಕೆಂದು ತೀರ್ಮಾನ ಕೈಗೊಂಡಿದ್ದು ಸಂಘ, ಸಂಸ್ಥೆಯವರು ತಾಲ್ಲೂಕು ಆಡಳಿತಕ್ಕೆ ಸಹಕಾರ ನೀಡಬೇಕೆಂದು ತಹಶೀಲ್ದಾರ್ ತೇಜಸ್ವಿನಿ ಹೇಳಿದರು.
ಪಟ್ಟಣದ ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ನಡೆದ ಕೋವಿಡ್-19 ಬಗ್ಗೆಗಿನ ಸಭೆಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನ ಎಲ್ಲಾ ವ್ಯಾಪಾರಸ್ಥರು, ಸಾರ್ವಜನಿಕರ ಹೆಚ್ಚು ಸಂಪರ್ಕದಲ್ಲಿರುತ್ತಾರೆ ಹಾಗಾಗಿ ಅವರನ್ನು ಸಂಪರ್ಕ ಮಾಡಲು ಸಂಘ ಸಂಸ್ಥೆಯವರ ಸಹಕಾರ ಪಡೆಯಲಾಗುವುದು, ಅವರು ನೀಡಿದ ದಿನಾಂಕದಂದೆ ಸ್ಥಳ ನಿಗಧಿ ಪಡಿಸಿ ಆಸ್ಪತ್ರೆ ಸಿಬ್ಬಂದಿ ಪರೀಕ್ಷೆ ಮಾಡುವರು.
ಸಂಘ ಸಂಸ್ಥೆಯವರು ಎಷ್ಟು ಜನ ಬರುತ್ತಾರೆಂದು ತಿಳಿಸಿದರೆ ಪರೀಕ್ಷೆ ಮಾಡಲು ಸಹಕಾರವಾಗುತ್ತದೆ, ಎಷ್ಟು ಬೇಗ ಚಿಕಿತ್ಸೆ ನೀಡುತ್ತೇವೆಯೋ ಅದರಿಂದ ರೋಗ ಪೀಡಿತರು ಇತರರಿಗೆ ರೋಗ ಹರಡುವುದನ್ನು ತಪ್ಪಿಸಬಹುದು ಹಾಗೂ ಪರೀಕ್ಷೆಗೆ ಯಾರೂ ಹಣ ನೀಡುವಂತಿಲ್ಲ, ಪರೀಕ್ಷೆ ಉಚಿತವಾಗಿರುತ್ತದೆ ಎಂದರು.
ಆಟೋ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್ ತಹಶೀಲ್ದಾರ್ ರವರ ಪ್ರಶ್ನೆಗೆ ಮಾತನಾಡಿ, ಕೋವಿಡ್ ಪರೀಕ್ಷೆ ಮಾಡಿದ ನಂತರ ರೋಗಸ್ಥರನ್ನು ಎಲ್ಲಿಯೋ ಕರೆದುಕೊಂಡು ಹೋಗಿ ಕೂಡಿ ಹಾಕುತ್ತಾರೆಂಬ ಭಯ ಜನರಲ್ಲಿದೆ ಈ ಭಯವನ್ನು ಹೋಗಲಾಡಿಸುವುದು ಮುಖ್ಯವಾಗಿದೆ ಎಂದರಲ್ಲದೆ, ಕೋವಿಡ್ ಪಾಸಿಟಿವ್ ಬಂದಂತಹವರಿಗೆ ಯಾವ ಸೌಲಭ್ಯ ದೊರಕುತ್ತದೆ ಎಂಬ ಮಾಹಿತಿಯನ್ನು ತಾಲ್ಲೂಕು ಆಡಳಿತ ನೀಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಎಲ್ಲಾ ಕೋವಿಡ್-19 ಪಾಸಿಟಿವ್ ಬಂದಂತಹ ರೋಗಸ್ಥರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯವುದಿಲ್ಲ, ಪಾಸಿಟಿವ್ ಸಿಬ್ಬಂದಿ ಸ್ವ ಇಚ್ಛೆಯಿಂದ ಹೇಳಿದರೆ ಮಾತ್ರ ಕರೆದೊಯ್ಯಲಾಗುತ್ತದೆ, ತಾಲ್ಲೂಕು ಆಡಳಿತ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುತ್ತದೆ. ಚಿಕಿತ್ಸೆ ನೀಡುತ್ತದೆ. ಸರ್ಕಾರಿ ಆಸ್ಪತ್ರೆಯಲ್ಲಿ 50 ಬೆಡ್ ಕಾಯ್ದಿರಿಸಲಾಗಿದೆ, ಅಲ್ಲಿ ಕೋವಿಡ್-19 ಪಾಸಿಟಿವ್ ರವರಿಗೆ ಸುಸಜ್ಜಿತವಾದ ಚಿಕಿತ್ಸೆ ನೀಡಲಾಗುತ್ತದೆ.
ಕೋವಿಡ್ ಪಾಸಿಟಿವ್ ಆದವರಿಗೆ, ಮೇಲನಹಳ್ಳಿ ಕೋವಿಡ್ ಸೆಂಟರ್ ನಲ್ಲಿ ಪ್ರಶಾಂತವಾದ ವಾತಾವರಣವಿದೆ, ಉತ್ತಮವಾದ ತಿಂಡಿ, ಊಟದ ವ್ಯವಸ್ಥೆಯಿದೆ, ಹಣ್ಣುಗಳು, ಕುಡಿಯಲು, ಸ್ನಾನಕ್ಕೆ ಬಿಸಿನೀರಿನ ವ್ಯವಸ್ಥೆಯಿದೆ. ಅಲ್ಲಲ್ಲೇ ಕಸದ ಬುಟ್ಟಿಗಳನ್ನು ಸಹ ಇಡಲಾಗಿದೆ, ಕೋವಿಡ್ ಸೆಂಟರ್ ನಲ್ಲಿ ಕೊಡುವ ಆಹಾರವನ್ನು ಎಲ್ಲಿ ಬೇಕಾದರೂ ಪರಿಶೀಲಿಸಬಹುದು ಅದು ಉತ್ತಮ ಆಹಾರವಾಗಿದೆ ಎಂದು ತಿಳಿಸಿದರು.
ನೆರಳು ಸಂಘಟನೆಯ ಮಹಮದ್ ಹುಸೇನ್ ಮಾತನಾಡಿ, ಪೋಲಿಸರಲ್ಲದ ವ್ಯಕ್ತಿಗಳು ನೆಹರು ಸರ್ಕಲ್ ನಲ್ಲಿ ಲಾಠಿ ಹಿಡಿದು, ವಾಹನದ ಕೀ ಕಿತ್ತುಕೊಂಡರೆ ಯಾವ ವ್ಯಕ್ತಿಗಳು ಕೋವಿಡ್ ಪರೀಕ್ಷೆ ಮಾಡಿಸಲು ಬರುವುದಿಲ್ಲ, ಎಲ್ಲರೂ ಹೆದರುತ್ತಾರೆ, ತಾಲ್ಲೂಕು ಆಡಳಿತ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪರೀಕ್ಷೆ ಮಾಡಿಸಬೇಕು ಹಾಗೂ ದಂಡ ಹಾಕಬೇಕು, ಹೆದರಿಸಬಾರದು ಎಂದರು.
ಈ ಸಂದರ್ಭದಲ್ಲಿ ಪೋಲಿಸ್ ಸರ್ಕಲ್ ಇನ್ಸ್ ಪೆಕ್ಟರ್ ವೀಣಾ, ವೈದ್ಯ ಮನೋಜ್, ಕನ್ನಡ ಸಂಘದ ಅಧ್ಯಕ್ಷ ಸಿ.ಬಿ.ರೇಣುಕಸ್ವಾಮಿ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
