ಚಿತ್ರದುರ್ಗ:
ಕೈಯಲ್ಲಿ ಲಾಠಿ ಹಿಡಿದು ರಸ್ತೆಗಿಳಿದ ಸಂಚಾರಿ ಪೊಲೀಸ್ ಠಾಣೆ ಸಬ್‍ಇನ್ಸ್‍ಪೆಕ್ಟರ್ ರೇವತಿ ಹೆಲ್ಮೆಟ್ ಇಲ್ಲದೆ ಚಾಲನೆ ಮಾಡುತ್ತಿದ್ದ ದ್ಚಿಚಕ್ರ ವಾಹನ ಸವಾರರನ್ನು ತಡೆದು ದಂಡ ವಿಧಿಸುವ ಮೂಲಕ ಕಾನೂನನ್ನು ಗೌರವಿಸುವಂತೆ ಅರಿವು ಮೂಡಿಸಿದರು.
ಮದಕರಿನಾಯಕ ಪ್ರತಿಮೆ ಸಮೀಪ ಸಂಚಾರಿ ಠಾಣೆಯ ನಾಲ್ಕೈದು ಪೇದೆಗಳೊಂದಿಗೆ ಲಾಠಿ ಹಿಡಿದು ನಿಂತಿದ್ದ ಸಬ್‍ಇನ್ಸ್‍ಪೆಕ್ಟರ್ ರೇವತಿ ಹೆಲ್ಮೆಟ್ ಇಲ್ಲದ ಚಲಿಸುತ್ತಿದ್ದ ದ್ವಿಚಕ್ರವಾಹನ ಸವಾರರಿಗೆ ದಂಡ ವಿಧಿಸಿದ್ದಲ್ಲದೆ ದಾಖಲೆಗಳಿಲ್ಲದ ಓಡಿಸುತ್ತಿದ್ದ ಆಟೋ ಹಾಗೂ ಇತರೆ ವಾಹನಗಳಿಗೂ ದಂಡ ಹಾಕಿದರು.
ರೇವತಿರವರು ದ್ವಿಚಕ್ರ ವಾಹನಗಳನ್ನು ಅಡ್ಡಗಟ್ಟಿ ನಿಲ್ಲಿಸುತ್ತಿದ್ದುದನ್ನು ದೂರದಲ್ಲಿಯೇ ಗಮನಿಸಿದ ಕೆಲವು ದ್ವಿಚಕ್ರ ವಾಹನ ಚಾಲಕರು ತಮ್ಮ ವಾಹನಗಳನ್ನು ಹಿಂದಕ್ಕೆ ತಿರುಗಿಸಿಕೊಂಡು ಪಲಾಯನವಾಗುತ್ತಿದ್ದರು. ಮದ್ಯ ಸೇವಿಸಿ ದ್ವಿಚಕ್ರ ವಾಹನ ಓಡಿಸುತ್ತಿದ್ದ ಕೆಲವು ಚಾಲಕರು ಈ ಸಂದರ್ಭದಲ್ಲಿ ರೇವತಿ ಕೈಗೆ ಸಿಕ್ಕಿಬಿದ್ದು ದಂಡ ಕಕ್ಕಿದರು.
ವೇಗವಾಗಿ ಬರುತ್ತಿದ್ದ ದ್ವಿಚಕ್ರ ವಾಹನಗಳಿಗೆ ಲಾಠಿಯನ್ನು ಅಡ್ಡ ಇಟ್ಟು ವಾಹನವನ್ನು ರಸ್ತೆ ಬದಿಗೆ ನಿಲ್ಲಿಸುವಂತೆ ಸೂಚಿಸುತ್ತಿದ್ದಾಗ ಕೆಲವರು ತಮ್ಮ ಗುರುತಿನ ಚೀಟಿಗಳನ್ನು ತೋರಿಸಿ ತುರ್ತಾಗಿ ಹೋಗಬೇಕಿದೆ ಬಿಡಿ ಎಂದು ಕೇಳಿಕೊಳ್ಳುತ್ತಿದ್ದರು. ಅದಕ್ಕೆ ಬುದ್ದಿವಂತರೆ ಕಾನೂನು ಗೌರವಿಸದಿದ್ದರೆ ಹೇಗೆ ಎಂದು ನಯವಾಗಿಯೇ ಹೇಳುತ್ತಿದ್ದ ರೇವತಿ ದಂಡ ಕಟ್ಟಿಸುತ್ತಿದ್ದರು. ಇನ್ನು ಕೆಲವರು ಯಾರ್ಯಾರಿಗೋ ಫೋನ್ ಮಾಡಿ ರೇವತಿಗೆ ನೀಡಲು ಮುಂದಾದಾಗ ಮೊದಲು ದಂಟ ಕಟ್ಟಿ ನಂತರ ಫೋನ್ ಮಾಡಿ ಎಂದು ತಾಕೀತು ಮಾಡಿದರು.
ದ್ಚಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ್ದರು ಇನ್ನು ಚಿತ್ರದುರ್ಗದಲ್ಲಿ ಸಾಕಷ್ಟು ಮಂದಿ ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದಾರೆ. ಸಂಪೂರ್ಣವಾಗಿ ಎಲ್ಲರೂ ಹೆಲ್ಮೆಟ್ ಧರಿಸುವಂತೆ ಮಾಡುವುದು ನಮ್ಮ ಉದ್ದೇಶ. ಅದೇ ರೀತಿ ವಾಹನಗಳ ದಾಖಲೆಗಳನ್ನು ಪರಿಶೀಲಿಸುವುದು ಅತಿಮುಖ್ಯವಾಗಿದ್ದು, ಕಾನೂನನ್ನು ಗೌರವಿಸುವ ಜಾಗೃತಿ ಜನರಲ್ಲಿ ಮೂಡಬೇಕಿದೆ ಎಂದು ಸಬ್‍ಇನ್ಸ್‍ಪೆಕ್ಟರ್ ರೇವತಿ ಪತ್ರಿಕೆಗೆ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
