ಚಿತ್ರದುರ್ಗ
ನಗರದಲ್ಲಿ ಕೈಗೊಳ್ಳಲಾಗುತ್ತಿರುವ ಯುಜಿಡಿ (ಒಳಚರಂಡಿ) ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ನಗರಸಭೆ ಕಾರ್ಯಾಲಯದ ಸಭಾಂಗಣದಲ್ಲಿ ಮಂಗಳವಾರ ಲೋಕೋಪಯೋಗಿ ಇಲಾಖೆ, ಅರಣ್ಯ, ನಿರ್ಮಿತಿ ಕೇಂದ್ರ, ನಗರಸಭೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಗರದಲ್ಲಿ ಯುಜಿಡಿ ಕಾಮಗಾರಿ ಆರಂಭಗೊಂಡು 10 ವರ್ಷ ಗತಿಸಿದರೂ ಇನ್ನೂ ಪೂರ್ಣಗೊಂಡಿಲ್ಲ. ಒಳಚರಂಡಿ ಸಂಪರ್ಕ ಸಾರ್ವಜನಿಕರ ಬಳಕೆಗೆ ಇನ್ನೂ ಸಿಕ್ಕಿಲ್ಲ. ಶೀಘ್ರದಲ್ಲಿ ಯುಜಿಡಿ ಕಾಮಗಾರಿ ಪೂರ್ಣಗೊಳಿಸಿ, ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಗರದಲ್ಲಿ ಲೋಕೋಪಯೋಗಿ, ಎಸ್‍ಸಿಪಿ, ಟಿಎಸ್‍ಪಿ ಸೇರಿದಂತೆ ವಿವಿಧ ಯೋಜನೆಗಳಡಿ 200 ಕೋಟಿ ರೂ.. ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಡಾಂಬರು ರಸ್ತೆ ಕಾಮಗಾರಿ ನಡೆಯುತ್ತಿದೆ. ಚಳ್ಳಕೆರೆ ರಸ್ತೆಯಿಂದ ಪ್ರವಾಸಿ ಮಂದಿರದವರೆಗೂ 19 ಕೋಟಿ ವೆಚ್ಚದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ನಡೆಯಬೇಕಿದೆ. ಚಳ್ಳಕೆರೆ ರಸ್ತೆಯಿಂದ ಸರ್ಕಾರಿ ಆಸ್ಪತ್ರೆವರೆಗೆ ಕಟ್ಟಡ ತೆರವುಗೊಳಿಸಲು ಸಾರ್ವಜನಿಕರೊಂದಿಗೆ ಮಾತುಕತೆ ನಡೆಸಿ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕಿದೆ ಎಂದರು.
ಪ್ರವಾಸಿ ಮಂದಿರದಿಂದ ಕನಕವೃತ್ತದವರೆಗೂ ಸಿ.ಸಿ.ರಸ್ತೆಗಾಗಿ 20 ಕೋಟಿ ರೂ ಅನುದಾನ ಮಂಜೂರಾಗಿ ಒಂದು ವರ್ಷ ಕಳೆದಿದೆ. ಆದರೆ ರಸ್ತೆ ಅಗಲೀಕರಣದ ಸಂದರ್ಭದಲ್ಲಿ ಸಮಸ್ಯೆ ಉಂಟಾಗಬಹುದು ಎಂದು ಗುತ್ತಿಗೆದಾರರು ಟೆಂಡರ್ ಹಾಕುತ್ತಿಲ್ಲ. ಸದ್ಯ ಒಬ್ಬರು ಗುತ್ತಿಗೆದಾರರು ಮುಂದೆ ಬಂದಿದ್ದು, ಆದಷ್ಟು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸೂಚಿಸಿದರು.
ಮುಖ್ಯಮಂತ್ರಿಯವರು ಶಾಸಕರ ವಿಶೇಷ ಅನುದಾನ 25 ಕೋಟಿ ರೂ ಮಂಜೂರು ಮಾಡಿದ್ದು, ಇದರಲ್ಲಿ ಸುಮಾರು 18 ಕೋಟಿ ರೂ ವೆಚ್ಚದಲ್ಲಿ ನಗರದ ಗಾಂಧಿ ವೃತ್ತದಿಂದ ಜೆಎಂಐಟಿ ವೃತ್ತದ ವರೆಗೆ ರಸ್ತೆ ಅಭಿವೃದ್ಧಿಗೆ ಅನುದಾನ ಒದಗಿಸಲಾಗಿದೆ. 18 ಕೋಟಿ ರೂ. ವೆಚ್ಚದ ಕಾಮಗಾರಿ ಆಗಿರುವುದರಿಂದ ಅನುದಾನವನ್ನು ಸಂಪುಟ ಒಪ್ಪಿಗೆ ಪಡೆದು ಕಾರ್ಯರಂಭ ಮಾಡಲಾಗುವುದು. ಇದರ ಜೊತೆಗೆ ಕೇಂದ್ರ ಸರ್ಕಾರದಿಂದ 48 ಕೋಟಿ ರೂ ವೆಚ್ಚದಲ್ಲಿ ಜೆಎಂಐಟಿ ಹಾಸ್ಟೆಲ್ ಬಳಿಯ ರೈಲ್ವೆ ಹಳಿಗೆ ಮೇಲ್ಸೇತುವೆ ನಿರ್ಮಿಸಲು ಒಪ್ಪಿಗೆ ನೀಡಲಾಗಿದೆ ಎಂದರು. ಮುಂದಿನ 2021ರ ಮಾರ್ಚ್ ವೇಳೆಗೆ ನಗರದ ಎಲ್ಲ ವಾರ್ಡ್‍ಗಳಲ್ಲಿ ಉತ್ತಮ ಗುಣಮಟ್ಟದ ಸಿಸಿ ರಸ್ತೆ ಪೂರ್ಣಗೊಳ್ಳಲಿದೆ .ಜೂನ್ ತಿಂಗಳಲ್ಲಿ ನಗರ ವ್ಯಾಪ್ತಿಯಲ್ಲಿ ಸುಮಾರು 10 ಸಾವಿರ ಗಿಡಗಳನ್ನು ನೆಡುವ ಕಾರ್ಯಕ್ರಮ ಯೋಜಿಸಲು ಹಾಗೂ ಸುಮಾರು 25 ಹೊಸದಾದ ಉದ್ಯಾನವನ ನಿರ್ಮಾಣಕ್ಕೆ ನಗರಸಭೆ ಬರುವ ಬಜೆಟ್‍ಲ್ಲಿ ಅವಕಾಶ ಕಲ್ಪಿಸುವಂತೆ ಸೂಚಿಸಿದರು.
ಸ್ವಚ್ಛ ಸರ್ವೇಕ್ಷಣೆಯಲ್ಲಿ ಚಿತ್ರದುರ್ಗ ಪ್ರಥಮ ಸ್ಥಾನ :
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಸ್ವಚ್ಛ ಸರ್ವೇಕ್ಷಣೆ 2020 ಕಾರ್ಯಕ್ರಮದ ಎರಡನೆ ತ್ರೈಮಾಸಿಕ ಅವಧಿಯಲ್ಲಿ ರಾಜ್ಯದ ಎಲ್ಲ ನಗರಸಭೆಗಳ ಪೈಕಿ ಚಿತ್ರದುರ್ಗ ಜಿಲ್ಲೆಯು ಸ್ವಚ್ಛತೆಯಲ್ಲಿ ಪ್ರಥಮ ಸ್ಥಾನ ಪಡೆದಿದೆ. ದೇಶದ ಎಲ್ಲ ನಗರಸಭೆಗಳಲ್ಲಿ ಚಿತ್ರದುರ್ಗವು 104ನೇ ಸ್ಥಾನ ಪಡೆದಿದೆ. ಇದಕ್ಕಾಗಿ ನಗರಸಭೆಯ ಎಲ್ಲ ಅಧಿಕಾರಿಗಳನ್ನೂ ಅಭಿನಂದಿಸುತ್ತೇನೆ. ಆದರೂ ನಗರದಲ್ಲಿ ಸ್ವಚ್ಛತೆ ಕಾರ್ಯ ಇನ್ನಷ್ಟು ಸುಧಾರಿಸುವ ಅಗತ್ಯವಿದೆ. ನಗರಸಭೆ ಪ್ರತಿವರ್ಷವೂ ಮೊದಲ ಸ್ಥಾನ ಬರಲು ಪೂರ್ಣಪ್ರಮಾಣದ ಸಹಕಾರ ನೀಡಲಾಗುವುದು ಎಂದ ಅವರು, ನಗರದ ಸ್ವಚ್ಛತೆ ನಾಗರಿಕರು ಗಮನಹರಿಸಬೇಕು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮನವಿ ಮಾಡಿದರು.
ನಿರ್ಮಿತಿ ಕೇಂದ್ರ ವ್ಯವಸ್ಥಾಪಕ ಮೂಡಲಗಿರಿಯಪ್ಪ ಮಾತನಾಡಿ, ನಗರದ ಹಮಾಲರಿಗೆ ಮನೆ ನಿರ್ಮಾಣಕ್ಕೆ ಒಂದು ಮನೆಗೆ 2.25 ಲಕ್ಷ ರೂ. ನೀಡಲಾಗಿದೆ. ಇದರಲ್ಲಿ 78 ಮನೆಗಳಿಗೆ ಮೇಲ್ಚಾವಣಿ ಹಾಕಲಾಗಿದೆ. 15 ಮನೆಗಳು ಮೇಲ್ಚಾವಣಿ ಹಂತಕ್ಕೆ ಬಂದಿವೆ. ಉಳಿದ 32 ಮನೆಗಳ ಕಾಮಗಾರಿ ಆರಂಭಿಸಬೇಕಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ನಗರಸಭೆ ಪೌರಾಯುಕ್ತ ಜಿ.ಟಿ.ಹನುಮಂತರಾಜು, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎಸ್.ರಾಜಶೇಖರ್, ಲೋಕೋಪಯೋಗಿ ಇಂಜಿನಿಯರ್ ಸತೀಶ್ ಬಾಬು, ವಿವಿಧ ಇಲಾಖೆ ಹಾಗೂ ನಗರಸಭೆ ಅಧಿಕಾರಿಗಳು ಇದ್ದರು.







