ಮಿಡಿಗೇಶಿ
ಗ್ರಾಮ ಪಂಚಾಯಿತಿಯವರು ಚರಂಡಿ ಸ್ವಚ್ಛತೆ, ಜನತೆಗೆ ಶುದ್ಧ ಕುಡಿಯುವ ನೀರು ಒದಗಿಸುವ ಮೂಲಕ ಎಲ್ಲಾ ರೀತಿಯ ಕಾಯಿಲೆಗಳಿಗೆ ಕಡಿವಾಣ ಹಾಕಬಹುದು ಎಂದು ಡಾ. ಕೇಶವ ರಾಜ್ ತಿಳಿಸಿದರು.
ಅವರು ಮಧುಗಿರಿ ತಾ. ನ ಮಿಡಿಗೇಶಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬುಧವಾರ ಜಿಲ್ಲಾ ಯೋಜನಾ ನಿರ್ವಹಣಾ ಘಟಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರಾಷ್ಟ್ರೀಯ ಫ್ಲೋರೋಸಿಸ್ ತಡೆ ಹಾಗೂ ನಿಯಂತ್ರಣ, ತಾಲ್ಲೂಕು ಮಟ್ಟದ ಫ್ಲೋರೋಸಿಸ್ ತಪಾಸಣಾ ಶಿಬಿರ, ದಂತ ಫ್ಲೋರೋಸಿಸ್ ತಪಾಸಣಾ ಶಿಬಿರ, ಹೆಲ್ತ್ ಕಾರ್ಡ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಮಿಡಿಗೇಶಿ ಪಿ.ಹೆಚ್.ಸಿ ಕೇಂದ್ರದಲ್ಲಿ ಪ್ರಪ್ರಥಮವಾಗಿ ರಾಜ್ಯದಲ್ಲೇ ಮೊಟ್ಟ ಮೊದಲ ಫ್ಲೋರೋಸಿಸ್ ಹೆಲ್ತ್ ಕಾರ್ಡ್ ವಿತರಿಸಿ, ಫ್ಲೋರೋಸಿಸ್ ಕಾಯಿಲೆಯೇ ಆಗಲಿ, ಇನ್ನಿತರೆ ಯಾವುದೇ ಕಾಯಿಲೆಗಳು ಗ್ರಾಮೀಣ ಪ್ರದೇಶಗಳಲ್ಲಿ ಉಲ್ಬಣಗೊಳ್ಳುತ್ತಿರುವ ಬಗ್ಗೆ ಆಯಾ ಗ್ರಾಮಗಳಲ್ಲಿನ ಆಶಾ ಕಾರ್ಯಕರ್ತೆಯರಿಗೆ ಬಹು ಬೇಗನೆ ತಿಳಿಯಲಿ ಸದರಿಯವರ ಪಾತ್ರ ಆರೋಗ್ಯ ಇಲಾಖೆಗೆ ಅತಿ ಮುಖ್ಯವಾಗಿದೆ. ಫ್ಲೋರೋಸಿಸ್ ಕಾಯಿಲೆ ಬಗ್ಗೆ ಗರ್ಭಿಣಿಯರು, ವಯಸ್ಸಾದವರು ಬಹಳ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ಮಿಡಿಗೇಶಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಮ್ಮ ಮಾತನಾಡಿ, ಫ್ಲೋರೋಸಿಸ್ ಕಾಯಿಲೆ ನಿಯಂತ್ರಣದ ಬಗ್ಗೆ ಆಶಾಕಾರ್ಯಕರ್ತೆಯರ ಪಾತ್ರ ಅತಿಮುಖ್ಯ. ಸದರಿಯವರಿಂದಲೇ ಕಾಯಿಲೆ ಅರಿವು ಮೂಡಿಸಬೇಕಾಗಿದೆ ಎಂದು ತಿಳಿಸಿ, ಅತಿ ಮುಖ್ಯವಾಗಿ ಪಿಎಚ್ಸಿ ಕೇಂದ್ರ ಸ್ಥಾನಗಳಲ್ಲಿ ವೈದ್ಯರು ಉಳಿದುಕೊಳ್ಳುವಂತೆ ಮನವಿ ಮಾಡಿದರು.
ಮಧುಗಿರಿ ಪಟ್ಟಣದ ತಾಲ್ಲೂಕು ಆಸ್ಪತ್ರೆಯ ಮೂಳೆ ತಜ್ಞ ಮಹೇಶ್ ಸಿಂಗ್ ಮಾತನಾಡಿ, ಶುದ್ಧ ಕುಡಿಯುವ ನೀರು ಬಳಸಬೇಕು, ಫ್ಲೋರೈಡ್ಯುಕ್ತ ನೀರು ಬಳಸಬಾರದು. ಉತ್ತಮ ಪೌಷ್ಠಿಕ ಆಹಾರ ಸೇವನೆ ಮಾಡಬೇಕು. ಮೊಟ್ಟ ಮೊದಲಿಗೆ ಫ್ಲೋರೋಸಿಸ್ ಕಾಯಿಲೆ ಪ್ರಾರಂಭವಾಗುವುದೆ ದಂತಗಳಿಂದ. ಆದ್ದರಿಂದ ಆಗಿಂದಾಗ್ಗೆ ಸಾರ್ವಜನಿಕರು ಆಸ್ಪತ್ರೆಗಳಲ್ಲಿ ತಪಾಸಣೆಗೆ ಒಳಪಡುವುದರಿಂದ ಕಾಯಿಲೆ ನಿಯಂತ್ರಿಸಬಹುದಾಗಿ ತಿಳಿಸಿದರು.
ಡಾ.ಧರಣೇಶ್ ಗೌಡ ತಾಲ್ಲೂಕು ಆರೋಗ್ಯ ನಿರೀಕ್ಷಕ ಹೆಚ್ 1 ಎನ್ 1 ರೋಗವು ಒಂದು ಮಾರಣಾಂತಿಕ ಕಾಯಿಲೆಯಾಗಿದ್ದು, ಎಚ್ಚರ ವಹಿಸದೆ ಇದ್ದ ಪಕ್ಷದಲ್ಲಿ ಕಾಯಿಲೆ ಕಾಣಿಸಿಕೊಂಡ ಏಳುದಿನಗಳ ಒಳಗಡೆ ಮರಣ ಹೊಂದುವ ಸಾಧ್ಯತೆಯಿದೆ. ಆದ್ದರಿಂದ ರೋಗ ಕಾಣಿಸಿಕೊಂಡ ವ್ಯಕ್ತಿ ಕೂಡಲೇ ಆಸ್ಪತ್ರೆಗಳಲ್ಲಿ ತಪಾಸಣೆಗೆ ಒಳಗಾಗಬೇಕು. ಆಸ್ಪತ್ರೆಯಲ್ಲಿ ನೀಡುವ ಮಾತ್ರೆಗಳನ್ನು ಉಪಯೋಗಿಸಿದಲ್ಲಿ ಕಾಯಿಲೆ ಗುಣಮುಖಪಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಡಾ.ಚೇತನ್ (ಜಿಲ್ಲಾ ಫ್ಲೋರೋಸಿಸ್ ಸಮಾಲೋಚಕ) ಮಾತನಾಡಿ, ಫ್ಲೋರೋಸಿಸ್ ಕಾಯಿಲೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ದೊರೆಯಲಿದ್ದು, ತಪಾಸಣೆಗೆ ಮಾಡಿಸಿಕೊಳ್ಳಿ. ಫ್ಲೋರೈಡ್ ನಮ್ಮ ದೇಹಕ್ಕೆ ಬೇಕಾದ ಒಂದು ಅಂಶ. ನಾವು ಸೇವಿಸುವ ಆಹಾರ ಮತ್ತು ಕುಡಿಯುವ ನೀರಿನಲ್ಲಿ ಅವಶ್ಯಕತೆಗಿಂತ ಹೆಚ್ಚು ಫ್ಲೋರೈಡ್ ಇದ್ದರೆ, ಫ್ಲೋರೋಸಿಸ್ ರೋಗ ಉಂಟಾಗುತ್ತದೆ. ಇದು ಸಾರ್ವಜನಿಕರ ಸಮಸ್ಯೆ. ಇದು ಎಲ್ಲಾ ವಯಸ್ಕರಲ್ಲಿ ಕಂಡು ಬರುತ್ತದೆ. ಇದನ್ನು ತಡೆಗಟ್ಟುವುದು ಅವಶ್ಯಕ ಎಂದು ತಿಳಿಸಿದರು.
ದಂತ ಫ್ಲೋರೋಸಿಸ್ ಹಾಗೂ ಮೂಳೆಗಳ ಫ್ಲೋರೋಸಿಸ್ ನಿಯಂತ್ರಣಕ್ಕೆ ಫ್ಲೋರೈಡ್ ಅಂಶ ಒಂದು ಪಿ.ಪಿ.ಎಂ ಗಿಂತ ಕಡಿಮೆ ಇರುವ ಶುದ್ಧ ನೀರು ಕುಡಿಯಿರಿ. ಸಿ ಅನ್ನಾಂಗ ಹೆಚ್ಚಿರುವ ನಿಂಬೆ, ನೆಲ್ಲಿಕಾಯಿ, ಕಿತ್ತಳೆ, ಮೋಸಂಬಿ, ಸೀಬೆಹಣ್ಣು ಸೇವಿಸಿ. ಕ್ಯಾಲ್ಸಿಯಂ ಹೆಚ್ಚಿರುವ ಹಾಲು, ಬೆಲ್ಲ, ಹಸಿರು ಸೊಪ್ಪು, ರಾಗಿ, ನುಗ್ಗೇಕಾಯಿ ಮುಂತಾದುವನ್ನು ಆಹಾರದಲ್ಲಿ ಸೇವಿಸಬೇಕು. ಇತರೆ ಪದಾರ್ಥಗಳಾದ ಬೆಳ್ಳುಳ್ಳಿ, ಶುಂಠಿ, ಈರುಳ್ಳಿ, ಕ್ಯಾರೆಟ್ಗಳನ್ನು ಬಳಸುವುದರಿಂದ ಕಾಯಿಲೆ ಗುಣಪಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ತಾಲ್ಲೂಕು ವೈದ್ಯಾಧಿಕಾರಿ ಡಾ.ರಮೇಶ್ ಬಾಬು, ಡಾ.ಅರವಿಂದ ರೆಡ್ಡಿ, ಎಲ್ಎಚ್ಓ ಪಾರ್ವತಮ್ಮ, ಆಶಾ ಕಾರ್ಯಕರ್ತೆಯರು, ಸಾರ್ವಜನಿಕರು ಹಾಗೂ ತಪಾಸಣಾ ಶಿಬಿರದಲ್ಲಿ ರೋಗಿಗಳು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ







