ನಿರಂತರ ಪರಿಶೀಲನೆಯೊಂದಿಗೆ ಕ್ರಮ ಕೈಗೊಳ್ಳಿ ; ಡಿಸಿ

ಚಿತ್ರದುರ್ಗ:
     ಕಾಲೇಜು, ಹಾಸ್ಟೆಲ್‍ಗಳಲ್ಲಿ ವಿದ್ಯಾರ್ಥಿಗಳಿಂದ ತಂಬಾಕು ಉತ್ಪನ್ನಗಳ ಬಳಕೆ ಕುರಿತಂತೆ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಸಮನ್ವಯದೊಂದಿಗೆ ಬಾಲಕರ ಕಾಲೇಜು ಹಾಗೂ ಹಾಸ್ಟೆಲ್‍ಗಳಲ್ಲಿ ಆಗಾಗ್ಗೆ ಪರಿಶೀಲನೆ ನಡೆಸಿ, ವರದಿಯನ್ನು ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
 
    ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾದ ರಾಷ್ಟ್ರೀಯ ತಂಬಾಕು ನಿಯಂತ್ರಣ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ ಕೋಟ್ಪಾ ಕಾಯ್ದೆಯಡಿ ಜಿಲ್ಲೆಯಲ್ಲಿ ಈಗಾಗಲೆ ನಗರ, ಪಟ್ಟಣಗಳಲ್ಲಿ ವಿವಿಧ ಮಳಿಗೆ, ಅಂಗಡಿ, ಹೋಟೆಲ್‍ಗಳ ಮೇಲೆ ದಾಳಿ ನಡೆಸಿ, ಕಾಯ್ದೆ ಉಲ್ಲಂಘನೆಯ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ.
 
    ಅಲ್ಲದೆ ಶಾಲಾ, ಕಾಲೇಜು ಸುತ್ತ 100 ಯಾರ್ಡ್ ವ್ಯಾಪ್ತಿಯಲ್ಲಿ ಯಾವುದೇ ತಂಬಾಕು ಉತ್ಪನ್ನ ಮಾರಾಟ ಮಾಡದಂತೆ ಎಚ್ಚರಿಕೆ ವಹಿಸಲಾಗಿದೆ.  ಆದರೆ ಶಾಲಾ, ಕಾಲೇಜು ಮೈದಾನಗಳಲ್ಲಿ ತಂಬಾಕು ಉತ್ಪನ್ನಗಳ ಖಾಲಿ ಪಾಕೆಟ್‍ಗಳು ಬಿದ್ದಿರುವುದನ್ನು ಕೂಡ ಗಮನಿಸಲಾಗಿದೆ ಎಂದು ಹೇಳಿದರು
 
   ಮೈದಾನಗಳೂ ಕೂಡ ಆಯಾ ಸಂಸ್ಥೆಯ ವ್ಯಾಪ್ತಿಗೆ ಬರುತ್ತದೆ ಎಂಬುದನ್ನು ಶಾಲಾ ಕಾಲೇಜುಗಳ ಮುಖ್ಯಸ್ಥರು ಮರೆಯುವಂತಿಲ್ಲ.  ಅಲ್ಲದೆ ಬಾಲಕರ ಹಾಸ್ಟೆಲ್‍ಗಳು, ಖಾಸಗಿ ಪಿಜಿ ಗಳಲ್ಲಿ ತಂಬಾಕು ಉತ್ಪನ್ನಗಳಾದ ಸಿಗರೇಟ್, ಗುಟ್ಕಾ, ತಂಬಾಕು ಉತ್ಪನ್ನಗಳ ಬಳಕೆ ಸಾಧ್ಯತೆಗಳಿದ್ದು, ಇದರ ಬಗ್ಗೆಯೂ ನಿಗಾ ವಹಿಸುವುದು ಅಗತ್ಯವಾಗಿದೆ.  ಹೀಗಾಗಿ ಜಿಲ್ಲೆಯ ಎಲ್ಲ ಹಾಸ್ಟೆಲ್, ಪಿಜಿ ಗಳಿಗೂ ಕೋಟ್ಪಾ ಕಾಯ್ದೆ ಅನುಷ್ಠಾನ ಅಧಿಕಾರಿಗಳು ಪೊಲೀಸ್ ಅಧಿಕಾರಿಗಳೊಂದಿಗೆ ಆಗಾಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ಕಾರ್ಯ ಕೂಡಲೆ ಪ್ರಾರಂಭ ಆಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
 
    ಜಿಲ್ಲೆಯ ಖಾಸಗಿ ಮತ್ತು ಸರ್ಕಾರಿ ಬಸ್ ನಿಲ್ದಾಣ ಹಾಗೂ ಬಸ್‍ಗಳಲ್ಲಿ ಧೂಮಪಾನ ನಿಷೇಧದ ಕುರಿತು ಫಲಕ ಅಳವಡಿಸಿರುವ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬಾರ್ ಅಂಡ್ ರೆಸ್ಟೋರೆಂಟ್‍ಗಳ ಮೇಲೆ ನಿಗಾ : 
     ಜಿಲ್ಲೆಯಲ್ಲಿನ ಬಾರ್ ಅಂಡ್ ರೆಸ್ಟೋರೆಂಟ್‍ಗಳಲ್ಲಿ ಧೂಮಪಾನ ಹೆಚ್ಚಾಗಿ ನಡೆಯುತ್ತಿದ್ದು, ಇದು ಕೋಟ್ಪಾ ಕಾಯ್ದೆಯ ಉಲ್ಲಂಘನೆಯಾಗಿದೆ.  ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರು ಕಡ್ಡಾಯವಾಗಿ ತಮ್ಮ ರೆಸ್ಟೋರೆಂಟ್ ವ್ಯಾಪ್ತಿಯಲ್ಲಿ ಧೂಮಪಾನ ವಲಯ ನಿರ್ಮಿಸಿಕೊಳ್ಳಬೇಕು.  ತಂಬಾಕು ನಿಯಂತ್ರಣ ಅಧಿಕಾರಿಗಳು ಅಬಕಾರಿ ಇಲಾಖೆಯ ಅಧಿಕಾರಿಗಳೊಂದಿಗೆ ಬಾರ್ ಅಂಡ್ ರೆಸ್ಟೋರೆಂಟ್‍ಗಳ ಮೇಲೆ ದಾಳಿ ನಡೆಸಿ, ನಿಯಮ ಉಲ್ಲಂಘನೆಯಾಗುತ್ತಿದ್ದಲ್ಲಿ, ದಂಡ ಹಾಕುವುದರ ಜೊತೆಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಸೂಚಿಸಿದರು
 
     ಬಾರ್ ಅಂಡ್ ರೆಸ್ಟೋರೆಂಟ್‍ಗಳಲ್ಲಿ ಪ್ರತಿ ಕೊಠಡಿಯಲ್ಲಿಯೂ ಧೂಮಪಾನ ನಿಷೇಧ ಕುರಿತು ಹಾಗೂ ದಂಡ ವಿಧಿಸುವ ಕುರಿತು ಫಲಕ ಹಾಕಬೇಕು. ಅಬಕಾರಿ ಇಲಾಖೆಯ ಅಧಿಕಾರಿಗಳು ಜಿಲ್ಲೆಯ ಎಲ್ಲ ಬಾರ್ ಅಂಡ್ ರೆಸ್ಟೋರೆಂಟ್‍ಗಳ ಮಾಲೀಕರೊಂದಿಗೆ ಸಭೆ ನಡೆಸಿ, ಈ ಕುರಿತು ಅವರಿಗೆ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
   ಎಲ್ಲ ಶಾಲೆಗಳಿಂದಲೂ, ಗೋಡೆ ಬರಹ ಬರೆಯಿಸಿರುವ ಕುರಿತು ಫೋಟೋ ಸಹಿತ ವರದಿ ಪಡೆದು ಸಲ್ಲಿಸಬೇಕು.  ಖಾಸಗಿ ಶಾಲೆ, ಕಾಲೇಜುಗಳ ಮಾನ್ಯತೆ ನವೀಕರಣ ಸಂದರ್ಭದಲ್ಲಿ ಗೋಡೆ ಬರಹ ಬರೆಯಿಸಿರುವ ಕುರಿತು ಖಚಿತಪಡಿಸಿಕೊಂಡ ಬಳಿಕವೇ ಮಾನ್ಯತೆ ನವೀಕರಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
     ಸಭೆಯಲ್ಲಿ ಭಾಗವಹಿಸಿದ್ದ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ವಿಭಾಗೀಯ ಸಂಯೋಜಕ ಮಹಾಂತೇಶ್ ಮಾತನಾಡಿ, ಜಿಲ್ಲೆಯಲ್ಲಿ ಈವರೆಗೆ 41 ಶಾಲೆ, ಕಾಲೇಜುಗಳನ್ನು ತಂಬಾಕು ಮುಕ್ತ ಎಂದು ಘೋಷಿಸಲಾಗಿದೆ.  98 ಶಾಲೆಗಳಲ್ಲಿ ಅರಿವು ಮೂಡಿಸಲಾಗಿದೆ.  
     ಈ ವರ್ಷ 39 ಕಡೆಗಳಲ್ಲಿ ದಾಳಿ ನಡೆಸಿದ್ದು, ಸೆಕ್ಷನ್-4 ನಲ್ಲಿ 680 ಪ್ರಕರಣಗಳನ್ನು ದಾಖಲಿಸಿ 55940 ರೂ. ದಂಡ. ಸೆ-6ಎ ನಲ್ಲಿ 485 ಪ್ರಕರಣಕ್ಕೆ 39450 ರೂ. ದಂಡ, ಸೆ.6ಬಿ ನಲ್ಲಿ 76 ಪ್ರಕರಣಗಳಿಗೆ 7125 ರೂ. ದಂಡ ಸೇರಿದಂತೆ ಒಟ್ಟು 1241 ಪ್ರಕರಣಗಳಲ್ಲಿ 1.02 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದರು.  ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಪ್ರಕರಣ ದಾಖಲಿಸಿದರೆ ಸಾಲದು, ಇನ್ನು ಮುಂದೆ ಪೊಲೀಸ್ ಠಾಣೆಯಲ್ಲಿ ಕಾಯ್ದೆ ಉಲ್ಲಂಘನೆಯ ಬಗ್ಗೆ ದೂರು ದಾಖಲಿಸಲು ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದರು. ಸಭೆಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿ ಡಾ. ರೇಣುಪ್ರಸಾದ್, ಜಿಲ್ಲಾ ಸಲಹೆಗಾರ ಪ್ರಭುದೇವ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಎಸ್. ಹೆಗಡೆ, ಜಂಟಿಕೃಷಿ ನಿರ್ದೇಶಕ ಸದಾಶಿವ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap