ದಾವಣಗೆರೆ :
ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಡಾ.ಬಗಾದಿ ಗೌತಮ್ ಭಾನುವಾರ ಅಧಿಕಾರ ವಹಿಸಿಕೊಂಡರು.
ಭಾನುವಾರ ಬೆಳಿಗ್ಗೆ 10 ಗಂಟೆಗೆ ಕಚೇರಿಗೆ ಆಗಮಿಸಿದ ನೂತನ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‍ರವರು ಅಪರ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರರೊಂದಿಗೆ ಸಭೆ ನಡೆಸಿ ವಿವಿಧ ಇಲಾಖೆಗಳ ಆರ್ಥಿಕ ಮತ್ತು ಭೌತಿಕ ಗುರಿಗಳನ್ನು ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ತಿಳಿಸಲು ಸೂಚಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನೂತನ ಜಿಲ್ಲಾಧಿಕಾರಿ, ಸ್ವಚ್ಛ ಮತ್ತು ಪಾರದರ್ಶಕ ಆಡಳಿತ ನೀಡುವುದೇ ನನ್ನ ಮೊದಲ ಆದ್ಯತೆ. ಆ ಕೆಲಸ ನನ್ನ ಕಚೇರಿಯಿಂದಲೇ ಆರಂಭವಾಗಲಿದೆ. ಪಾರದರ್ಶಕ, ದಕ್ಷ ಹಾಗೂ ಜನಸ್ನೇಹಿ ಆಡಳಿತ ನಡೆಸುವುದೇ ನನ್ನ ಆದ್ಯತೆಯಾಗಿದ್ದು, ಈ ಕಾರ್ಯಕ್ಕೆ ಎಲ್ಲ ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಹಕಾರ ಅತ್ಯವಶ್ಯವಾಗಿದೆ ಎಂದು ಹೇಳಿದರು.
ಜಿಲ್ಲೆಯ ಎಲ್ಲಾ ಭಾಗಗಳಿಗೆ ತೆರಳಿ ಸ್ಥಳೀಯ ಸಮಸ್ಯೆಗಳನ್ನು ಅರಿತು, ಆ ಸಮಸ್ಯೆಗಳನ್ನು ಪರಿಹರಿಸಲು ಯಾವ್ಯಾವ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗುವುದು. ಹಾಗೂ ಜನಸಂಪರ್ಕ ಸಭೆಗಳನ್ನು ಹೋಬಳಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಆಯೋಜಿಸಿ ಜನರ ಅಹವಾಲುಗಳನ್ನು ಆಲಿಸಲಾಗುವುದು ಎಂದರು.
ಮೆಕ್ಕೆಜೋಳ ಹಾಗೂ ಭತ್ತದ ಬೆಳೆಗಾರರ ಸಮಸ್ಯೆಗಳ ಬಗ್ಗೆ ಅರಿವಿದೆ. ಅಧಿಕಾರಿಗಳಿಂದ ವರದಿ ತರಿಸಿಕೊಂಡು ಸಮಸ್ಯೆ ಪರಿಹಾರಕ್ಕೆ ಕ್ರಮ ವಹಿಸಲಾಗುವುದು. ಹಾಗೂ ಬೆಳೆ ವಿಮೆ ಬಗೆಗೆ ಗೊಂದಲಗಳಿದ್ದು, ಆ ಗೊಂದಲಗಳಿಗೆ ಪರಿಹಾರ ಕಂಡು ಹಿಡಿಯಲು ಪ್ರಯತ್ನಿಸಲಾಗುವುದು ಎಂದರು.
ಬಹಳ ವಿದ್ಯಾವಂತರು, ಸುಸಂಸ್ಕತರಿರುವ ಜಿಲ್ಲೆಯು ಸ್ಮಾರ್ಟ್ ಸಿಟಿಗೂ ಆಯ್ಕೆಯಾಗಿದೆ. ಸ್ಮಾರ್ಟ್ ಸಿಟಿಯ ಕಾಮಗಾರಿಗಳು ಯಾವ ಹಂತದಲ್ಲಿವೆ ಎಂಬ ಬಗ್ಗೆ ಮಾಹಿತಿ ಪಡೆಯಲಾಗುವುದು ಎಂದರು.
ನಂತರ ಜಿಲ್ಲಾಧಿಕಾರಿ ಕಚೇರಿಯ ಎಲ್ಲಾ ಭಾಗಗಳಿಗೆ ತೆರಿ ವಿವಿಧ ಇಲಾಖಾ ಕಚೇರಿಗಳನ್ನು ಪರಿಚಯ ಮಾಡಿಕೊಂಡರು. ಹಾಗೂ ಸಾರ್ವಜನಿಕರು ಕೂರಲು ಮತ್ತಷ್ಟು ಕುರ್ಚಿಗಳನ್ನು ಹಾಕುವುದು ಮತ್ತು ಕುಡಿಯುವ ನೀರನ್ನು ವ್ಯವಸ್ಥಿತವಾಗಿ ಕೊಡಲು ಸೂಚಿಸಿದರು.
ಮೂಲತಃ ಆಂಧ್ರಪ್ರದೇಶದವರಾದ ಡಾ.ಬಗಾದಿ ಗೌತಮ್ 2009ರ ಬ್ಯಾಚ್‍ನ ಐ.ಎ.ಎಸ್ ಅಧಿಕಾರಿ,ಉಪವಿಭಾಗಾಧಿಕಾರಿಯಾಗಿ ಸೇವೆ ಆರಂಭಿಸಿ, ಬೆಳಗಾವಿ ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಹಾಗೂ ರಾಯಚೂರು ಜಿಲ್ಲಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








