ಕಾರವಾರ
ಕೇಂದ್ರ ಸರ್ಕಾರ ಪ್ರತಿಷ್ಠೆಯಾಗಿ ಪರಿಗಣಿಸಿರುವ ಸಾಗರಮಾಲಾ ಯೋಜನೆಯಡಿಯಲ್ಲಿ ರವೀಂದ್ರನಾಥ್ ಟ್ಯಾಗೋರ್ ಕಡಲ ತೀರದಲ್ಲಿ ಅಲೆಗಳಿಗೆ ತಡೆಗೋಡೆ ನಿರ್ಮಾಣ ವಿರೋಧಿಸಿದ ಕಡಲ ಮಕ್ಕಳೆಂದು ಕರೆಯಲ್ಪಡುವ ಮೀನುಗಾರರನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ವರದಿಯಾಗಿದೆ
ಕಾರವಾರ ನಗರದಾಧ್ಯಂತ ಸಧ್ಯ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿದ್ದು. ಅಘೋಷಿತ ಬಂದ್ ಆದಂತೆ ಆಗಿದೆ ಕೆಲವು ಅಂಗಡಿ ಮಾಲೀಕರನ್ನು ಒತ್ತಾಯಪೂರ್ವಕವಾಗಿ ವ್ಯಾಪಾರ ಸ್ಥಗಿತಗೊಳಿಸಲು ಸೂಚಿಸಲಾಗಿದೆ. ಒಟ್ಟಾರೆಯಾಗಿ ಅಘೋಷಿತ ಬಂದ್ ನ ವಾತಾವರಣ ನಿರ್ಮಾಣವಾಗಿದೆ.ವಶಕ್ಕೆ ಪಡೆದ ಮೀನುಗಾರರನ್ನು ನಗರದ ಪೊಲೀಸ್ ವಸತಿಗೃಹದ ಸಭಾಂಗಣದಲ್ಲಿ ಇರಿಸಲಾಗಿದೆ. ಈ ವೇಳೆ ಮೀನುಗಾರ ಮಹಿಳೆಯೊಬ್ಬರು ಅಸ್ವಸ್ಥರಾಗಿದ್ದು, ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಾಗರಮಾಲಾ ವಿರೋಧಿ ಪ್ರತಿಭಟನಾ ನಿರತರು, ಸಂಸದ ಅನಂತಕುಮಾರ ಹೆಗಡೆ ಹಾಗೂ ಶಾಸಕಿ ರೂಪಾಲಿ ನಾಯ್ಕ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಬ್ಬರ ವಿರುದ್ಧವೂ ಘೋಷಣೆಗಳನ್ನು ಕೂಗಿದ್ದಾರೆ .ಅನಂತಕುಮಾರ್ ಅವರನ್ನು “ಚೋರ್.. ಚೋರ್…’ ಎಂದಿದ್ದಾರೆ. ಈ ಬಾರಿ ಮತ್ತೆ ರೂಪಾಲಿಯನ್ನು ಗೆಲ್ಲಿಸುವುದಿಲ್ಲ. ಮತ ಕೇಳಲು ಬಂದರೆ ಘೇರಾವ್ ಹಾಕುತ್ತೇವೆ. ತಮಗೆ ಮತ ಚಲಾವಣೆಯ ಹಕ್ಕು ಬೇಡ. ತಮಗೆ ಗೋವಾ ರಾಜಕಾರಣಿಗಳಿಗೆ ಮತ ಹಾಕಲು ಅನುವು ಮಾಡಿಕೊಡಿ. ರಾಜ್ಯ ಸರ್ಕಾರದಿಂದ ಮೀನುಗಾರರಿಗೆ ಯಾವುದೇ ಪ್ರಯೋಜನವಿಲ್ಲ. ಮೀನುಗಾರರನ್ನು ಸರ್ಕಾರ ಕಡೆಗಣಿಸುತ್ತಿದೆ ಎಂದು ಆರೋಪಿಸಿದ್ದಾರೆ.
