ತುಮಕೂರು
ಜಿಲ್ಲೆಯಲ್ಲಿ ದೋಷರಹಿತ ಮತದಾರರ ಪಟ್ಟಿ ಸಿದ್ದಪಡಿಸಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‌ಕುಮಾರ್ ಇಂದಿಲ್ಲಿ ತಿಳಿಸಿದರು.
ನಗರದಲ್ಲಿ ಸಾರ್ವಜಿಕರಿಗೆ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2019 ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಸ್ವೀಪ್ ಕಾರ್ಯಕ್ರಮದಡಿ ವಿವಿಧ ಶಾಲಾ-ಕಾಲೇಜು ಮಕ್ಕಳಿಂದ ಹಮ್ಮಿಕೊಂಡಿದ್ದ ಸೈಕಲ್ ಜಾಥಾದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈಗಾಗಲೇ ಈ ಹಿಂದೆ ನಡೆದಿರುವ ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಕೈಬಿಟ್ಟಿರುವುದು, ಒಂದು ಮತಗಟ್ಟೆಯಿಂದ ಮತ್ತೊಂದು ಮತಗಟ್ಟೆಗೆ ವರ್ಗಾವಣೆಗೊಂಡಿರುವುದು ಸೇರಿದಂತೆ ಇನ್ನಿತರ ಲೋಪದೋಷಗಳಿಂದ ಮತದಾರರಲ್ಲಿ ತೀವ್ರ ಗೊಂದಲಗಳು ಉಂಟಾಗಿತ್ತು. ಇದನ್ನು ಸರಿಪಡಿಸುವ ಸಲುವಾಗಿ ದೋಷ ರಹಿತ ಮತದಾರರ ಪಟ್ಟಿ ಸಿದ್ದಪಡಿಸಲು ಸೈಕಲ್ ಜಾಥಾ ಮುಖೇನ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು.
ಈಗಾಗಲೇ ಎಲ್ಲಾ ತಾಲ್ಲೂಕು ತಹಶೀಲ್ದಾರರು, ಉಪವಿಭಾಗಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ನಡೆಸಲಾಗುತ್ತಿದ್ದು, ದಿನಾಂಕ: 1-1-2019ಕ್ಕೆ 18 ವರ್ಷ ಪೂರ್ಣಗೊಳ್ಳುವ ಅರ್ಹ ಮತದಾರರು ನೋಂದಣಿಗಾಗಿ ನಿಗದಿತ ಅರ್ಜಿ ನಮೂನೆಯಲ್ಲಿ ಸಲ್ಲಿಸಲು ನ. 20ರ ವರೆಗೂ ಅವಕಾಶ ಕಲ್ಪಿಸಲಾಗಿದೆ ಎಂದರು.
ಅರ್ಹ ಮತದಾರರು ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ಸೇರಿಸಲು ನಮೂನೆ 6, ಹೆಸರು ತೆಗೆದು ಹಾಕಲು ನಮೂನೆ 7, ತಿದ್ದುಪಡಿ ಮಾಡಲು ನಮೂನೆ 8 ಹಾಗೂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯೊಳಗೆ ಸ್ಥಳಾಂತರ ಮಾಡಲು ನಮೂನೆ 8ಎರಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಹೇಳಿದರು,.
ಬರುವ ಭಾನುವಾರ ಮತಗಟ್ಟೆ ಮಟ್ಟದ ಅಧಿಕಾರಿಗಳು ಆಯಾ ಮತಗಟ್ಟೆಯಲ್ಲಿ ಲಭ್ಯವಿದ್ದು, ಅರ್ಹ ಮತದಾರರು ನಿಗದಿತ ಅರ್ಜಿ ನಮೂನೆಗಳನ್ನು ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಸಲ್ಲಿಸಿ, ದೋಷರಹಿತ ಮತದಾರರ ಪಟ್ಟಿ ತಯಾರಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ಜಿ.ಪಂ. ಸಿಇಓ ಅನೀಸ್ ಕಣ್ಮಣಿ ಜಾಯ್ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಮತದಾರರ ಪಟ್ಟಿಯಲ್ಲಿ ಉಂಟಾಗುವ ಲೋಪದೋಷ, ಗೊಂದಲಗಳನ್ನು ತಡೆಯುವ ಸಲುವಾಗಿ ಮತದಾರರಲ್ಲಿ ಅರಿವು ಮೂಡಿಸಲು ಈ ಸೈಕಲ್ ಜಾಥಾ ನಡೆಸಲಾಗುತ್ತಿದೆ. ನ. 20ರ ವರೆಗೆ ಮತದಾರರ ಪಟ್ಟಿಯಲ್ಲಿನ ಲೋಪದೋಷ ಸರಿಪಡಿಸಲು ಅವಕಾಶ ಕಲ್ಪಿಸಲಾಗಿದ್ದು, ಮತದಾರರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕೋರಿದರು.
ನಗರದ ಜೂನಿಯರ್ ಕಾಲೇಜು ಮೈದಾನದಿಂದ ಆರಂಭವಾದ ಸೈಕಲ್ ಜಾಥಾಕ್ಕೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಡಾ. ದೇವರಾಜು ಹಸಿರು ನಿಶಾನೆ ತೋರಿದರು. ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‌ಕುಮಾರ್, ಸಿಇಓ ಅನೀಸ್ ಕಣ್ಮಣಿ ಜಾಯ್ ಅವರು ಶಾಲಾ ಮಕ್ಕಳೊಂದಿಗೆ ಸೈಕಲ್ ತುಳಿಯುವ ಮೂಲಕ ಜಾಥಾದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಜೂನಿಯರ್ ಕಾಲೇಜು ಮೈದಾನದಿಂದ ಹೊರಟ ಸೈಕಲ್ ಜಾಥಾವು ಬಿ.ಹೆಚ್. ರಸ್ತೆ, ಟೌನ್‌ಹಾಲ್, ಅಶೋಕ ರಸ್ತೆ, ಚರ್ಚ್ ಸರ್ಕಲ್, ಹೊರಪೇಟೆ, ಕೋತಿತೋಪು, ಡಾ.ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದ ಮುಖೇನ ಮಹಾತ್ಮಗಾಂಧಿ ಕ್ರೀಡಾಂಗಣ ತಲುಪಿತು.
ಸೈಕಲ್ ಜಾಥಾದಲ್ಲಿ ಪಾಲ್ಗೊಂಡಿದ್ದ ಸುಮಾರು 500ಕ್ಕೂ ಅಧಿಕ ಶಾಲಾ ಮಕ್ಕಳಿಗೆ ಉಪಹಾರದ ವ್ಯವಸ್ಥೆ ಸಹ ಮಾಡಲಾಗಿತ್ತು.
ಇಡೀಲ ರಾಜ್ಯದಲ್ಲಿಯೇ ಮತದಾರರ ಪಟ್ಟಿ ಸೇರ್ಪಡೆ ಮತ್ತು ತೆಗೆದು ಹಾಕುವ ವಿಚಾರವಾಗಿ ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‌ಕುಮಾರ್, ಸಿಇಓ ಅನೀಸ್ ಕಣ್ಮಣಿ ಜಾಯ್ ಅವರು ಜಿಲ್ಲಾಡಳಿತದ ಅಧಿಕಾರಿಗಳ ಸಹಕಾರದೊಂದಿಗೆ ಶಾಲಾ ಮಕ್ಕಳ ಮುಖೇನ ಸೈಕಲ್ ಜಾಥಾ ನಡೆಸಿ ಅರಿವು ಮೂಡಿಸಿದ ಕಾರ್ಯಕ್ರಮ ರಾಜ್ಯದಲ್ಲೇ ಪ್ರಥಮ ಕಾರ್ಯಕ್ರಮವಾಗಿದೆ.
ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈಗಿನಿಂದಲೇ ಪೂರ್ವ ತಯಾರಿ ನಡೆಸಿರುವ ಜಿಲ್ಲಾಡಳಿತ ಒಂದು ಅತ್ಯುತ್ತಮ ಕೆಲಸಕ್ಕೆ ಕೈ ಹಾಕಿದ್ದಾರೆ. ಇದಕ್ಕೆ ಸಾರ್ವಜನಿಕರು, ಸಂಘ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು ಹಾಗೂ ವಿವಿಧ ಇಲಾಖೆಗಳು ಜಿಲ್ಲಾಡಳಿತದೊಂದಿಗೆ ಕೈಜೋಡಿಸಿದರೆ ಜಿಲ್ಲೆ ಮತ್ತು ರಾಜ್ಯದ ಮತದಾರರಲ್ಲಿ ಜಾಗೃತಿ ಮೂಡಿಸುವ ಒಂದು ದೊಡ್ಡ ಅಭಿಯಾನವಾಗಲಿದೆ.
ಜಾಥಾದಲ್ಲಿ ಜಿಲ್ಲಾ ಪರಿಶಿಷ್ಟ ಜಾತಿ, ಪಂಗಡಗಳ ಅಧಿಕಾರಿ ರಾಜಕುಮಾರ್, ನಿರ್ಮಿತಿ ಕೇಂದ್ರದ ರಾಜಶೇಖರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನಟರಾಜು, ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಯಸ್ವಾಮಿ, ಡಿಡಿಪಿಐ ಮಂಜುನಾಥ್, ಬಿಇಓ ರಂಗದಾಸಪ್ಪ, ವಸಂತಿ ಉಪ್ಪಾರ್, ಹನುಮನಾಯಕ್, ಶ್ರೀನಿವಾಸ್, ಜಿ.ಪಂ. ಉಪಕಾರ್ಯದರ್ಶಿ ಪ್ರಕಾಶ್ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
