ಬೆಂಗಳೂರು
ಶಾಸಕ ಅರವಿಂದ ಲಿಂಬಾವಳಿ ಅವರಿಗೆ ಬ್ಲ್ಯಾಕ್‌ಮೇಲ್ ಮಾಡಿ, ₹ 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಆರೋಪದಡಿ ‘ಫೋಕಸ್’ ಸುದ್ದಿವಾಹಿನಿಯ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ಹೇಮಂತ್‌ಕುಮಾರ್ ಕಮ್ಮಾರ (40) ಅವರನ್ನು ಸಿಸಿಬಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
‘ಶಾಸಕರ ಆಪ್ತ ಸಹಾಯಕ ಗಿರೀಶ್ ಭಾರದ್ವಾಜ್ ಅವರು ವೈಟ್‌ಫೀಲ್ಡ್ ಠಾಣೆಗೆ ನೀಡಿದ್ದ ದೂರಿನಡಿ ಆರೋಪಿಯನ್ನು ಬಂಧಿಸಲಾಗಿದೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ನ್ಯಾಯಾಧೀಶರನ್ನು ಕೋರಲಾಗುವುದು’ ಎಂದು ಸಿಸಿಬಿಯ ಡಿಸಿಪಿ ಎಸ್.ಗಿರೀಶ್ ತಿಳಿಸಿದರು.
‘ವಿಡಿಯೊ ಇರುವುದಾಗಿ ಹೇಳಿ ಶಾಸಕರಿಗೆ ಬೆದರಿಸುತ್ತಿದ್ದ ಆರೋಪಿ, ಹಲವು ದಿನಗಳಿಂದ ಕಿರುಕುಳ ನೀಡುತ್ತಿದ್ದ. ಆತನ ಮನೆ ಹಾಗೂ ಕಚೇರಿ ಮೇಲೆಯೂ ದಾಳಿ ನಡೆಸಲಾಗಿದೆ. ಲ್ಯಾಪ್‌ಟಾಪ್, ಸಿ.ಡಿ ಹಾಗೂ ಹಲವು ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಗಿರೀಶ್ ಹೇಳಿದರು.