ಶಿರಾ
ತಾಲ್ಲೂಕಿನಾದ್ಯಂತ ಅಂತರ್ಜಲ ಬತ್ತುತ್ತಿರುವ ಬೆನ್ನ ಹಿಂದೆಯೇ ಜನ, ಜಾನುವಾರುಗಳಿಗೆ ವ್ಯಾಪಕ ಸಮಸ್ಯೆಗಳು ಬಿಗಡಾಯಿಸುತ್ತಿವೆ. ಮೊನ್ನೆ ಮೊನ್ನೆ ಸಣ್ಣ ನೀರಾವರಿ ಇಲಾಖೆ ಹಾಗೂ ಗ್ರಾಮೀಣ ನೀರು ಸರಬರಾಜು ಇಲಾಖೆಗಳು ಕೊರೆಸಿದ ಕೊಳವೆ ಬಾವಿಗಳು ಕೂಡ ಇಂಗುವ ಹಂತ ತಲುಪಿವೆ.
ಕಳೆದ ವರ್ಷವೂ ಕುಡಿಯುವ ನೀರಿಗೆ ಗ್ರಾಮೀಣ ಪ್ರದೇಶದಲ್ಲಿ ತೀವ್ರತರವಾದ ಸಮಸ್ಯೆಗಳುಂಟಾದಾಗ ಕೊಳವೆ ಬಾವಿಗಳಿಗೆ ಪೈಪ್‍ಲೈನ್ ಅಳವಡಿಸುವ ನೆಪದಲ್ಲಿ ಲಕ್ಷಾಂತರ ರೂ.ಗಳನ್ನು ಗ್ರಾಮೀಣ ನೀರು ಸರಬರಾಜು ಇಲಾಖೆ ವ್ಯಯ ಮಾಡಿದ್ದು, ಈ ಪೈಕಿ ವ್ಯಾಪಕ ಭ್ರಷ್ಟಾಚಾರಗಳೇ ನಡೆದಿವೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಇಂತಹ ದೊಡ್ಡಮಟ್ಟದ ಆರೋಪಗಳ ನಡುವೆಯೂ ಮತ್ತೆ ಇದೀಗ ಕಡು ಬೇಸಿಗೆಯ ಕಾಲ ಬಂದಿದ್ದು, ಈ ನಿಟ್ಟಿನಲ್ಲಿ ಗ್ರಾಮೀಣ ನೀರು ಸರಬರಾಜು ಇಲಾಖೆಯು ಈ ಕಡು ಬೇಸಿಗೆಯ ಕಾಲವನ್ನು ಒಂದು ಸವಾಲಾಗಿ ಸ್ವೀಕರಿಸುವುದು ಅನಿವಾರ್ಯವೂ ಆಗಿದೆ.
ಕಳ್ಳಂಬೆಳ್ಳ ಕೆರೆಯಲ್ಲಿ ಒಂದಷ್ಟು ಹೇಮಾವತಿಯ ನೀರು ಶೇಖರಣೆಯಾಗಿರುವ ಪರಿಣಾಮ ಈ ಭಾಗದಲ್ಲಿನ ಅಂತರ್ಜಲ ಮಟ್ಟ ಅಷ್ಟೇನೂ ಕುಸಿದಿಲ್ಲವಾದರೂ, ಕೆರೆಯ ಮೇಲಿನ ರೈತರಿಗೆ ಕೊಳವೆ ಬಾವಿಯ ನೀರೆ ಆಶ್ರಯವಾಗಿದೆ. ಶಿರಾ ನಗರಕ್ಕೆ ಕುಡಿಯುವ ನೀರಿಗೆಂದು ಕಳ್ಳಂಬೆಳ್ಳ ಕೆರೆಯ ನೀರನ್ನು ಶಿರಾ ಕೆರೆಗೆ ಹರಿಯಲು ಬಿಟ್ಟು ಕಳ್ಳಂಬೆಳ್ಳ ರೈತರು ಶಾಸಕ ಬಿ.ಸತ್ಯನಾರಾಯಣ್ ಮನವಿಗೆ ಸ್ಪಂದಿಸಿ ಉದಾರತೆ ತೋರಿದ ಪರಿಣಾಮ ಶಿರಾ ಕೆರೆ ಭರ್ತಿಯಾಗಲು ಕಾರಣವಾಯಿತು.
ಪ್ರಸಕ್ತ ಬೇಸಿಗೆಯ ದಿನಗಳಲ್ಲಿ ಶಿರಾ ನಗರದ ಜನತೆಗೆ ಕುಡಿಯುವ ನೀರಿಗಂತೂ ಸಮಸ್ಯೆಯಾಗಲಾರದು. ಸುಮಾರು ಮುಕ್ಕಾಲು ಭಾಗದಷ್ಟು ನೀರು ಶಿರಾ ಕೆರೆಯಲ್ಲಿ ಸಂಗ್ರಹಗೊಂಡಿದ್ದು ಮೇ ಅಂತ್ಯದವರೆಗೂ ನಗರದ ಜನತೆಗೆ ಹೇಮಾವತಿ ನೀರನ್ನು ಪೂರೈಸಬಹುದಾಗಿದೆ. ಶಿರಾ ಕೆರೆಯಲ್ಲಿ ಸಾಕಷ್ಟು ನೀರಿದೆ ಎಂದು ಇಲ್ಲಿನ ನಗರಸಭೆಯ ಅಧಿಕಾರಿಗಳು ತಾತ್ಸಾರ ಮಾಡಿ ಮನಸೋ ಇಚ್ಚೆ ನೀರನ್ನು ಪೋಲು ಮಾಡಿದ್ದೇ ಆದಲ್ಲಿ ನಗರಸಭೆ ತಾನು ಅಂದುಕೊಂಡ ದಿನಕ್ಕಿಂತಲು ಮುನ್ನವೇ ಕೆರೆಯ ನೀರು ಖಾಲಿಯಾದರೂ ಅಚ್ಚರಿ ಪಡಬೇಕಿಲ್ಲ.
ತಾಲ್ಲೂಕಿನ ಬಹುತೇಕ ಕೊಳವೆ ಬಾವಿಗಳು ಬತ್ತಿ ಹೋಗಿ ರೈತರು ತಮ್ಮ ಅಡಕೆ, ತೆಂಗು, ದಾಳಿಂಬೆ ಬೆಳೆಗಳನ್ನು ಕಡು ಬಿಸಿಲ ಝಳಕ್ಕೆ ಮೈಯೊಡ್ಡುವಂತೆ ಮಾಡುವುದು ಅನಿವಾರ್ಯವೂ ಆಗಿದೆ. ಕೊಳವೆ ಬಾವಿಗಳು ಬತ್ತುತ್ತಿದ್ದಂತೆ ದಿಕ್ಕು ತೋಚದ ಅನೇಕ ರೈತರು ಟ್ಯಾಂಕ್ ಮೂಲಕವೂ ಬೆಳೆಗಳಿಗೆ ನೀರು ಹಾಯಿಸುವಂತಹ ಸ್ಥಿತಿ ಬಂದೊದಗಿದೆ. ತಾಲ್ಲೂಕಿನ ಯಲಿಯೂರು ಸಮೀಪದ ಅನೇಕ ರೈತರು ದಾಳಿಂಬೆ ಬೆಳೆಗೆ ಟ್ಯಾಂಕರ್ ಮೂಲಕ ನೀರು ಹಾಯಿಸಿಕೊಂಡು ಹನಿ ನೀರಾವರಿ ಕೈಗೊಂಡಿದ್ದಾರೆ.
ಗ್ರಾಮೀಣ ಪ್ರದೇಶದ ಅನೇಕ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯ ಹಳ್ಳಿಗಳಲ್ಲಿ ಈಗಲೇ ಕುಡಿಯುವ ನೀರಿಗೆ ಬರದ ಅಭಾವ ತಲೆದೋರಿದೆ. ತಾಲ್ಲೂಕಿನಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖಾ ವ್ಯಾಪ್ತಿಯಲ್ಲಿ ಒಟ್ಟು 208 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು ಈ ಪೈಕಿ ಎರಡು ಘಟಕಗಳು ದುರಸ್ಥಿಗೊಳ್ಳಬೇಕಿದೆ.
ತಾಲ್ಲೂಕಿನ ಕಳ್ಳಂಬೆಳ್ಳ, ಹುಲಿಕುಂಟೆ, ಬುಕ್ಕಾಪಟ್ಟಣ, ಗೌಡಗೆರೆ ಹೋಬಳಿ ವ್ಯಾಪ್ತಿಯ ಕೆಲವು ಗ್ರಾ.ಪಂ.ಗಳಲ್ಲಿ ಕುಡಿಯುವ ನೀರಿನ ತೀವ್ರತೆ ಹೆಚ್ಚಾಗಿದೆ. ಕಳ್ಳಂಬೆಳ್ಳ ಗ್ರಾ.ಪಂ. ವ್ಯಾಪ್ತಿಯ ಯಲದಬಾಗಿ, ಬರಗೂರು ಗ್ರಾ.ಪಂ. ವ್ಯಾಪ್ತಿಯ ವಾರ್ಡ್ ನಂ.1, ಬರಗೂರು ಸಮೀಪದ ಗೊಲ್ಲರಹಟ್ಟಿ, ಹುಯಿಲ್‍ದೊರೆ ಪಂಚಾಯ್ತಿಯ ಕಿಲಾರಹಳ್ಳಿ, ಚಿಕ್ಕಸಂದ್ರ ಕಾವಲ್, ಹೊನ್ನೇನಹಳ್ಳಿ ಗ್ರಾಮ ಪಂಚಾಯ್ತಿಯ ಕೂಸುಕುಂಟೆ, ಯಲಿಯೂರು ಗ್ರಾಪಂನ ಎಮ್ಮೇರಹಳ್ಳಿ ಗ್ರಾಮಗಳ ಜನತೆಗೆ ಗ್ರಾಮೀಣ ನೀರು ಸರಬರಾಜು ಇಲಾಖೆಯು ಟ್ಯಾಂಕರ್‍ಗಳ ಮೂಲಕ ಕುಡಿಯಲು ನೀರನ್ನು ನೀಡುತ್ತಿದೆ.
ಕೊಳವೆ ಬಾವಿಗಳು ದಿನ ದಿನಕ್ಕೂ ವಿಫಲತೆಯನ್ನು ಕಾಣುತ್ತಿದ್ದು ಬಹುತೇಕ ಗ್ರಾಮ ಪಂಚಾಯ್ತಿಗಳ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಕೊಳವೆ ಬಾವಿಗಳಲ್ಲಿನ ನೀರಿನ ಲಭ್ಯತೆ ಕಡಿಮೆಯಾದ ಬಗ್ಗೆ ಇಲಾಖೆಗೆ ಮಾಹಿತಿ ನೀಡುವುದು ಹೆಚ್ಚಾಗುತ್ತಿದೆ. ಕಳೆದ ಎರಡು ತಿಂಗಳಲ್ಲಿ ತಾಲ್ಲೂಕಿನ ಸುಮಾರು 40 ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತೀವ್ರತರವಾದ ಸಮಸ್ಯೆಗಳಾಗಿದ್ದು ದಿನ ಕಳೆದಂತೆ ಈ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ.
ಮೇವಿನ ಕೊರತೆ:
ಕಳೆದ ವರ್ಷ ಮಳೆ ಸಂಪೂರ್ಣವಾಗಿ ಕೈಗೊಟ್ಟ ಪರಿಣಾಮ ಚದುರಿದಂತೆ ಮಳೆಯಾಗಿದ್ದ ಜಮೀನುಗಳ ರೈತರು ಮತ್ತು ನೀರಾವರಿ ಆಶ್ರಿತ ರೈತರು ತಮ್ಮ ರಾಸುಗಳಿಗಾಗಿ ಕೂಡಿಟ್ಟ ಮೇವು ಮಾರ್ಚ್ ಅಂತ್ಯಕ್ಕೆ ಸಂಪೂರ್ಣವಾಗಿ ಖಾಲಿಯಾಗಲಿದೆ. ಪಶುಪಾಲನಾ ಇಲಾಖೆಯ ಸಮೀಕ್ಷೆಯ ಪ್ರಕಾರ ಮುಂದಿನ ಎಂಟು ವಾರಗಳಿಗಾಗುವಷ್ಟು ಮೇವು ರೈತರಲ್ಲಿ ಸಂಗ್ರಹವಿದೆ ಎಂಬ ಮಾಹಿತಿ ಕಲೆ ಹಾಕಿದ್ದರೂ ಇಲಾಖೆಯ ಮಾಹಿತಿಯನ್ನು ಮೀರಿ ಮೇವಿನ ಅಭಾವ ಅತಿ ಶೀಘ್ರದಲ್ಲಿಯೇ ತಲೆದೋರುವುದು ಖಚಿತವಾಗಿದೆ.
ಪಶುಪಾಲನಾ ಇಲಾಖೆಯು ಕಳೆದ ತಿಂಗಳು ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ರೈತರಿಗೆ ಸುಮಾರು 65,700 ಕೆ.ಜಿ. ಮೇವಿನ ಬೀಜಗಳನ್ನು ನೀಡಿದ್ದು ಇದೀಗ ಕಳೆದ ಕೆಲವು ದಿನಗಳ ಹಿಂದಷ್ಟೆ 11,028 ಕೆ.ಜಿ. ಮೇವಿನ ಬೀಜಗಳನ್ನು ರೈತರಿಗೆ ವಿತರಣೆ ಮಾಡಲಾಗಿದೆ. ಮತ್ತೆ 10,000 ಕೆ.ಜಿ. ಮೇವು ಬಿತ್ತನೆ ಬೀಜಕ್ಕೆ ಇಲಾಖೆ ಬೇಡಿಕೆ ಸಲ್ಲಿಸಿದೆ. ಎಷ್ಟೇ ಬಿತ್ತನೆ ಬೀಜ ನೀಡಿದರೂ ನೀರಿನ ಲಭ್ಯತೆಯೇ ಇಲ್ಲದ ಮೇಲೆ ನೀಡಿದ ಬಿತ್ತನೆ ಬೀಜಗಳು ಬೆಳೆದು ರಾಸುಗಳಿಗೆ ಮೇವು ಉಣಿಸುವ ಸಾಧ್ಯತೆಗಳು ಕೂಡ ದೂರವೇ ಉಳಿದಿದ್ದು ಇದೀಗ ಮೇವಿನ ಬ್ಯಾಂಕ್ ತೆರೆಯುವುದು ಅನಿವಾರ್ಯವೂ ಆಗಿದೆ.
ಗೋಶಾಲೆಯ ಭ್ರಷ್ಟಾಚಾರ:
ಈ ಹಿಂದೆ ತಾಲ್ಲೂಕಿನಲ್ಲಿ ಭೀಕರವಾದ ಬರಗಾಲ ಸೃಷ್ಟಿಯಾದಾಗ ಗಂಡಿಹಳ್ಳಿ ಮಠ, ಬೂತಪ್ಪನಗುಡಿ, ಉಲ್ಲಾssssಸ್ ತೋಪು, ರಂಗನಾಥ ಪುರ ಸೇರಿದಂತೆ ಹಲವೆಡೆ ಗೋಶಾಲೆಗಳನ್ನು ಆರಂಭಿಸಿ ರೈತರ ರಾಸುಗಳಿಗೆ ಸರ್ಕಾರ ಆಸರೆಯಾದರೂ ಗೋವುಗಳಿಗೆ ನೀಡುವ ಮೇವಿನಲ್ಲೂ ವ್ಯಾಪಕ ಭ್ರಷ್ಟಾಚಾರಗಳೆ ನಡೆದು ಮೇವಿನ ಹಣ ತಿಂದುಣ್ಣುವ ಅಧಿಕಾರಿಗಳ ಪಾಲಾಗಿ ಹೋಗಿ ಮೇಲಧಿಕಾರಿಗಳ ಮಟ್ಟದಲ್ಲಿ ಈಗಲೂ ತನಿಖೆ ನಡೆಯುತ್ತಿದೆ.
ಪ್ರಸಕ್ತ ವರ್ಷ ಗೋಶಾಲೆಗಳಿಗೆ ಆಸ್ಪದ ನೀಡದ ಸರ್ಕಾರ ರಾಜ್ಯಾದ್ಯಂತ ಮೇವಿನ ಬ್ಯಾಂಕುಗಳನ್ನು ತೆರೆಯಲು ಸಿದ್ಧತೆ ಕೈಗೊಂಡಿದ್ದು, ಈ ಹಿನ್ನೆಲೆಯಲ್ಲಿ ಶಿರಾ ತಾಲ್ಲೂಕಿನಲ್ಲೂ ಮೇವಿನ ಬ್ಯಾಂಕ್ ಸ್ಥಾಪನೆಗೆ ತಯಾರಿ ನಡೆದಿದೆ. ಚಿಕ್ಕನಹಳ್ಳಿ ರೈತ ಸಂಪರ್ಕ ಕೇಂದ್ರ, ಪ.ನಾ.ಹಳ್ಳಿ ಹಾಗೂ ಶಿರಾ ಎಪಿಎಂಸಿ ಆವರಣದಲ್ಲಿ ಮೊದಲ ಹಂತದಲ್ಲಿ ಮೇವಿನ ಬ್ಯಾಂಕ್ ಆರಂಭಗಲಿದ್ದು ಇದಕ್ಕಾಗಿ ಮೇವಿನ ಪೂರೈಕೆಗೆ ಟೆಂಡರ್ ಕರೆಯಲು ತಯಾರಿ ನಡೆದಿದೆ.
ಒಟ್ಟಾರೆ ಪ್ರಸಕ್ತ ವರ್ಷ ತಾಲ್ಲೂಕಿನಾದ್ಯಂತ ಮೇವಿನ ಅಭಾವ ಕಾಣಲಿದ್ದು, ತಾಲ್ಲೂಕು ಮಟ್ಟದ ಅಧಿಕಾರಿಗಳು ಈ ಕೂಡಲೇ ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಕುಡಿಯುವ ನೀರು, ರಾಸುಗಳಿಗೆ ಮೇವನ್ನು ಒದಗಿಸುವ ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ರೈತರ ಶಾಪಕ್ಕೂ ತುತ್ತಾಗಬೇಕಾಗುತ್ತದೆ.
