ಇಂದಿರಾ ಕ್ಯಾಂಟೀನ್ : ಆಹಾರದ ಸ್ಯಾಂಪಲ್ ಸಂಗ್ರಹ, ಲ್ಯಾಬ್‍ಗೆ ರವಾನೆ

ತುಮಕೂರು

     ತುಮಕೂರು ನಗರದ ರೈಲುನಿಲ್ದಾಣದ ರಸ್ತೆಯಲ್ಲಿ ತುಮಕೂರು ಮಹಾನಗರ ಪಾಲಿಕೆ ಸಮೀಪವೇ ಇರುವ ಇಂದಿರಾ ಕ್ಯಾಂಟೀನ್‍ನ “ಮಾಸ್ಟರ್ ಕಿಚನ್”ಗೆ ದಿಢೀರ್ ಭೇಟಿ ನೀಡಿದ ಅಧಿಕಾರಿಗಳ ತಂಡವು, ಅಲ್ಲಿ ತಯಾರಾಗುವ ಆಹಾರಗಳ ಸ್ಯಾಂಪಲ್ ಸಂಗ್ರಹಿಸಿ ಅದರ ಗುಣಮಟ್ಟ ಖಾತ್ರಿಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ರವಾನಿಸಿರುವ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.

     ಮಹಾನಗರ ಪಾಲಿಕೆ ಆಯುಕ್ತ ಟಿ.ಭೂಪಾಲನ್ ಅವರು ಇದೇ ಮೊದಲ ಬಾರಿಗೆ ಇಂತಹುದೊಂದು ಕ್ರಮಕ್ಕೆ ಚಾಲನೆ ನೀಡಿದರು. ಅವರು ನೀಡಿದ ನಿರ್ದೇಶನದ ಅನುಸಾರ ಅಧಿಕಾರಿಗಳ ತಂಡವು ಶನಿವಾರ ಬೆಳಗ್ಗೆ ದಿಢೀರನೆ ತೆರಳಿ ಈ ಕ್ರಮ ಕೈಗೊಂಡಿತು.ತುಮಕೂರು ತಾಲ್ಲೂಕಿನ ಆಹಾರ ಸುರಕ್ಷತಾ  ಅಧಿಕಾರಿ ಡಾ. ಶರತ್‍ಚಂದ್ರ ಮತ್ತು ನಾರಾಯಣಪ್ಪ, ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ಡಾ. ನಾಗೇಶ್ ಕುಮಾರ್, ಪಾಲಿಕೆಯ ಪರಿಸರ ಇಂಜಿನಿಯರ್ ಹಾಗೂ ಇಂದಿರಾ ಕ್ಯಾಂಟೀನ್‍ನ ನೋಡಲ್ ಅಧಿಕಾರಿ ನಿಖಿತ ಮತ್ತಿತರರ ತಂಡವು ತಪಾಸಣೆ ನಡೆಸಿತು.

     ತುಮಕೂರು ನಗರದ ರೈಲುನಿಲ್ದಾಣದ ರಸ್ತೆ, ಜಯಚಾಮರಾಜೇಂದ್ರ ರಸ್ತೆ, ಶಿರಾಗೇಟ್ ಮತ್ತು ಕ್ಯಾತಸಂದ್ರ – ಈ ನಾಲ್ಕು ಸ್ಥಳಗಳಲ್ಲಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಇಂದಿರಾ ಕ್ಯಾಂಟೀನ್‍ಗಳು ಕಾರ್ಯನಿರ್ವಹಿಸುತ್ತಿವೆ. ಮುಂಬೈ ಮೂಲದ ಕಂಪನಿಯೊಂದು ಇದರ ನಿರ್ವಹಣೆಯ ಗುತ್ತಿಗೆಯನ್ನು ಪಡೆದುಕೊಂಡಿದೆ. ಈ ನಾಲ್ಕೂ ಕ್ಯಾಂಟೀನ್‍ಗಳಲ್ಲಿ ಪ್ರತಿನಿತ್ಯ ಬೆಳಗ್ಗೆ ಉಪಹಾರವನ್ನು, ಮಧ್ಯಾಹ್ನ ಮತ್ತು ರಾತ್ರಿ ವೇಳೆಯಲ್ಲಿ ಊಟವನ್ನು ರಿಯಾಯಿತಿ ದರದಲ್ಲಿ ಸಾರ್ವಜನಿಕರಿಗೆ ವಿತರಣೆ ಮಾಡಲಾಗುತ್ತಿದೆ.

      ಇಲ್ಲಿ ವಿತರಿಸಲ್ಪಡುವ ಆಹಾರವನ್ನು ರೈಲು ನಿಲ್ದಾಣದ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್ ಹಿಂಭಾಗದ “ಮಾಸ್ಟರ್ ಕಿಚನ್”ನಲ್ಲಿ ತಯಾರಿಸಿ, ಎಲ್ಲ ನಾಲ್ಕು ಇಂದಿರಾ ಕ್ಯಾಂಟೀನ್‍ಗಳಿಗೆ ರವಾನೆ ಮಾಡಲಾಗುತ್ತಿದೆ. ಇದು ಪ್ರತಿನಿತ್ಯ ನಡೆಯುವ ಪ್ರಕ್ರಿಯೆ. ಗುತ್ತಿಗೆ ಪಡೆದಿರುವ ಕಂಪನಿಯು ನಿಯಮಿತವಾಗಿ ಇಲ್ಲಿನ ಆಹಾರದ ಗುಣಮಟ್ಟ ಪರೀಕ್ಷೆ ಮಾಡಿಸಿ ಅದರ ವರದಿಯನ್ನು ನೀಡಬೇಕೆಂಬುದು ನಿಯಮ. ಅದು ನಡೆಯುತ್ತಿದೆ.

     ಆದರೆ ಅದನ್ನು ಹೊರತುಪಡಿಸಿ ಆಹಾರದ ಗುಣಮಟ್ಟದ ಬಗ್ಗೆ ಮಹಾನಗರ ಪಾಲಿಕೆಯೂ ಖಾತ್ರಿ ಪಡಿಸಿಕೊಳ್ಳಬೇಕೆಂಬ ಆಶಯದಿಂದ ಪಾಲಿಕೆ ಅಯುಕ್ತ ಭೂಪಾಲನ್ ಅವರು ಇಂತಹುದೊಂದು ತೀರ್ಮಾನವನ್ನು ಕೈಗೊಂಡು, ತಕ್ಷಣದಿಂದಲೇ ಜಾರಿಗೆ ತಂದಿದ್ದಾರೆ.

       ಮಾಸ್ಟರ್ ಕಿಚನ್”ಗೆ ಭೇಟಿ ನೀಡಿದ ಅಧಿಕಾರಿಗಳ ತಂಡವು ಇಲ್ಲಿ ಆಹಾರ ತಯಾರಿಕೆಗಾಗಿ ಇರಿಸಲಾಗಿದ್ದ ಅಕ್ಕಿ, ಬೇಳೆ ಇತ್ಯಾದಿ ಕಚ್ಛಾ ಪದಾರ್ಥಗಳನ್ನು ಹಾಗೂ ಸಾರ್ವಜನಿಕ ವಿತರಣೆಗಾಗಿ ಸಿದ್ಧಗೊಳಿಸಿದ್ದ ಇಡ್ಲಿ, ಚಟ್ನಿ, ಅನ್ನ, ಸಾಂಬಾರ್, ಮೊಸರನ್ನ, ವಾಂಗೀಬಾತ್‍ನ ಸ್ಯಾಂಪಲ್‍ಗಳನ್ನು ಸಂಗ್ರಹಿಸಿದ್ದಲ್ಲದೆ, ಇವುಗಳ ಗುಣಮಟ್ಟ (ಕ್ವಾಲಿಟಿ) ತಪಾಸಣೆಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ.
ಅಧಿಕಾರಿಗಳ ತಂಡವು ಇನ್ನು ಮುಂದೆ “ಮಾಸ್ಟರ್ ಕಿಚನ್”ಗೆ ಅನಿರೀಕ್ಷಿತ ಭೇಟಿ ನೀಡಿ, ಆಹಾರದ ಗುಣಮಟ್ಟದ ಬಗ್ಗೆ ತಪಾಸಣೆ ಮಾಡುತ್ತಿರಬೇಕು ಎಂದು ಆಯುಕ್ತ ಭೂಪಾಲನ್ ಸೂಚನೆ ನೀಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap