ಅಶೋಕ ರಸ್ತೆಯಲ್ಲಿ ಪುಟ್‍ಪಾತ್ ಒತ್ತುವರಿ ತೆರವು

ತುಮಕೂರು

       ತುಮಕೂರು ಮಹಾನಗರ ಪಾಲಿಕೆ ಆಯುಕ್ತ ಟಿ.ಭೂಪಾಲನ್ ಅವರ ನೇತೃತ್ವದಲ್ಲಿ ಪಾಲಿಕೆಯ ಅಧಿಕಾರಿಗಳು ಶುಕ್ರವಾರ ಮಧ್ಯಾಹ್ನ ದಿಢೀರ್ ಕಾರ್ಯಾಚರಣೆ ಕೈಗೊಂಡು ತುಮಕೂರು ನಗರದ ಅಶೋಕ ರಸ್ತೆಯ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಬಳಿ ಫುಟ್‍ಪಾತ್ ಒತ್ತುವರಿಯನ್ನು ತೆರವುಗೊಳಿಸಿದರು.

       ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಕಾಂಪೌಂಡ್ ಮುಂದೆ ಉದ್ದಕ್ಕೂ ಫುಟ್‍ಪಾತ್ ಒತ್ತುವರಿ ಮಾಡಿಕೊಂಡು ಅನೇಕ ಅಂಗಡಿಗಳು ಅನಧಿಕೃತವಾಗಿ ತಲೆಯೆತ್ತಿದ್ದವು. ಹೂವು, ಹಣ್ಣು ಮತ್ತಿತರ ವ್ಯಾಪಾರಿಗಳು ದಶಕಗಳಿಂದ ಅಲ್ಲೇ ವ್ಯಾಪಾರ ಮಾಡುತ್ತಿದ್ದರು. ಫುಟ್ ಪಾತ್ ಸಂಪೂರ್ಣ ಒತ್ತುವರಿ ಆಗಿ, ಪಾದಚಾರಿಗಳ ಓಡಾಟ ಸಾಧ್ಯಾವೇ ಇಲ್ಲದಂತಾಗಿತ್ತು.

       ಇದನ್ನೆಲ್ಲ ಈ ಮೊದಲೇ ಪರಿಶೀಲಿಸಿ ಸದರಿ ಫುಟ್‍ಪಾತ್ ವ್ಯಾಪಾರಿಗಳಿಗೆ ಒಮ್ಮೆ ಎಚ್ಚರಿಸಿದ್ದ ಆಯುಕ್ತ ಟಿ.ಭೂಪಾಲನ್ ಅವರು ಶುಕ್ರವಾರ ಮಧ್ಯಾಹ್ನ ಹಠಾತ್ತನೆ ಪೊಲೀಸ್ ನೆರವಿನೊಂದಿಗೆ ಕಾರ್ಯಾಚರಣೆಗೆ ಇಳಿದರು. ಪಾಲಿಕೆಯ ಅಧಿಕಾರಿಗಳಿಗೂ ಯಾವುದೇ ಮುನ್ಸೂಚನೆ ಕೊಡದೆ, ಸ್ಥಳಕ್ಕೆ ಕರೆದೊಯ್ದರು.

        ಅಲ್ಲಿ ಬಸ್ ನಿಲ್ದಾಣದ ಕಾಂಪೌಂಡ್ ಮುಂದಿನ ಫುಟ್‍ಪಾತ್ ಮತ್ತು ಎದುರು ಭಾಗದ ಫುಟ್‍ಪಾತ್‍ನಲ್ಲಿ ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದ ಸುಮಾರು 25 ಕ್ಕೂ ಅಧಿಕ ಅಂಗಡಿಗಳವರನ್ನು ತೆರವುಗೊಳಿಸಿದರು. ಪಾಲಿಕೆಯ ಉಪಆಯುಕ್ತ (ಕಂದಾಯ) ಯೋಗಾನಂದ್, ಆರೋಗ್ಯಾಧಿಕಾರಿ ಡಾ. ನಾಗೇಶ್ ಕುಮಾರ್, ಹಿರಿಯ ಹೆಲ್ತ್ ಇನ್ಸ್‍ಪೆಕ್ಟರ್ ಚಿಕ್ಕಸ್ವಾಮಿ ಮೊದಲಾದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಈ ಕಾರ್ಯಾಚರಣೆಯಲ್ಲಿ ಭಾಗಿಗಳಾಗಿದ್ದರು. ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು.

ಸಾರ್ವಜನಿಕರ ಪ್ರಶಂಸೆ

      “ಬಸ್‍ನಿಲ್ದಾಣದ ಮುಂದಿನ ಈ ಫುಟ್‍ಪಾತ್ ಅನ್ನು ಪಾದಚಾರಿಗಳು ಬಳಸಲು ಸಾಧ್ಯವೇ ಇರಲಿಲ್ಲ. ಇಡೀ ಫುಟ್‍ಪಾತ್ ಅನ್ನು ರಸ್ತೆ ಬದಿ ವ್ಯಾಪಾರಿಗಳು ಒತ್ತುವರಿ ಮಾಡಿಕೊಂಡಿದ್ದರು. ಎಷ್ಟೋ ವರ್ಷಗಳಿಂದ ಇವರನ್ನು ತೆರವು ಮಾಡುವ ಧೈರ್ಯವನ್ನೇ ಯಾರೂ ಮಾಡಿರಲಿಲ್ಲ. ಇದೀಗ ಮಹಾನಗರ ಪಾಲಿಕೆಯ ಆಯುಕ್ತರು ದಿಟ್ಟ ಹಾಗೂ ಒಳ್ಳೆಯ ನಿರ್ಧಾರ ಕೈಗೊಂಡಿದ್ದಾರೆ” ಎಂದು ಸಾರ್ವಜನಿಕರ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

     “ಇದು ಇಷ್ಟಕ್ಕೇ ಮುಕ್ತಾಯವಾಗಬಾರದು. ಮಹಾತ್ಮಗಾಂಧಿ ರಸ್ತೆ, ಜಯಚಾಮರಾಜೇಂದ್ರ ರಸ್ತೆ ಸೇರಿದಂತೆ ನಗರದ ಎಲ್ಲ ಪ್ರಮುಖ ರಸ್ತೆಗಳ ಫುಟ್‍ಪಾತ್ ಒತ್ತುವರಿಯನ್ನೂ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲೇಬೇಕು. ಪಾದಚಾರಿಗಳ ಸುರಕ್ಷತೆಗೆ ಆದ್ಯ ಗಮನ ಕೊಡಲೇಬೇಕು. ಜೊತೆಗೆ ಒಮ್ಮೆ ತೆರವಾಗಿರುವ ಸ್ಥಳದಲ್ಲಿ ಪುನಃ ಫುಟ್‍ಪಾತ್ ವ್ಯಾಪಾರ ತಲೆಯೆತ್ತದಂತೆ ಪಾಲಿಕೆಯ ಅಧಿಕಾರಿಗಳು ಪ್ರತಿನಿತ್ಯ ನಿಗಾ ವಹಿಸಬೇಕು. ಕಾರ್ಪೋರೇಟರ್‍ಗಳೂ ಈ ವಿಷಯದಲ್ಲಿ ರಾಜಕೀಯ ಮಾಡದೆ, ಹಸ್ತಕ್ಷೇಪ ಮಾಡದೆ, ಅಧಿಕಾರಿಗಳ ಕಾರ್ಯಾಚರಣೆಗೆ ಸಾರ್ವಜನಿಕ ಹಿತದೃಷ್ಟಿಯಿಂದ ಸಹಕರಿಸಬೇಕು” ಎಂದು ನಗರದ ಹೋರಾಟಗಾರರು ಹೇಳುತ್ತಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ