ದಾವಣಗೆರೆ:
ಮುಪ್ಪು ಹಾಗೂ ಮರಣಕ್ಕೆ ಅಪೌಷ್ಠಿಕತೆಯೇ ಪ್ರಮುಖ ಕಾರಣವಾಗಿದೆ ಎಂದು ಬೆಂಗಳೂರು ನಿಮ್ಹಾನ್ಸ್ ಆಸ್ಪತ್ರೆಯ ನಿವೃತ್ತ ನಿರ್ದೇಶಕ ಡಾ.ಸಿ.ಆರ್. ಚಂದ್ರಶೇಖರ್ ತಿಳಿಸಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಕರುಣಾ ಜೀವ ಕಲ್ಯಾಣ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ `ಮುಪ್ಪು, ಮರಣ ಮುಂದೂಡುವುದು ಹೇಗೆ?’ ಎಂಬ ವಿಷಯ ಕುರಿತು ಹಿರಿಯ ನಾಗರಿಕರೊಡನೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಪ್ಪು ಹಾಗೂ ಮರಣಕ್ಕೆ ಅಪೌಷ್ಠಿಕತೆಯ ಕೊರತೆಯ ಜೊತೆಗೆ ಬ್ಯಾಕ್ಟೀರಿಯಾ, ವೈರಸ್, ಫಂಗಸ್ ಸೋಂಕುಗಳು, ಆಹಾರದ ಮೂಲಕ ವಿಷ ವಸ್ತುಗಳ ಸೇವನೆ, ಧೂಮಪಾನ, ಮಧ್ಯಪಾನವೂ ಕಾರಣಗಳಾಗಿವೆ ಎಂದು ಹೇಳಿದರು.
ದೇಶದಲ್ಲಿ ಸುಮಾರು ಶೇ.60ರಷ್ಟು ಮಹಿಳೆಯರು ಹಾಗೂ ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಬದಲಾದ ಜೀವನ ಶೈಲಿಯಿಂದಾಗಿ ಪೌಷ್ಠಿಕ ಆಹಾರ ಸಿಕ್ಕರೂ ಸೇವಿಸುವ ಮನಸ್ಸು ಬಹುತೇಕರಿಗಿಲ್ಲ. ಕೇವಲ ಫಿಜ್ಜಾ, ಬರ್ಗರ್ ಸೇರಿದಂತೆ ಇತರೆ ಕುರುಕಲು ತಿಂಡಿಗಳನ್ನೇ ಹೆಚ್ಚಾಗಿ ಇಷ್ಟ ಪಡುತ್ತಿದ್ದಾರೆ. ಇದು ಅಪೌಷ್ಠಿಕತೆಗೆ ದಾರಿ ಮಾಡಿಕೊಡಲಿದೆ. ಮಕ್ಕಳು, ಮೊಮ್ಮಕ್ಕಳಿಗೆ ನಾವು ಎಂಥಹ ಆಹಾರ ನೀಡುತ್ತಿದ್ದೇವೆ ಎಂಬುದರ ಬಗ್ಗೆ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಆಗ ನೀವೇ ನಿಮ್ಮ ಕೈಯಿಂದಲೇ ಮಕ್ಕಳು, ಮೊಮ್ಮಕ್ಕಳಿಗೆ ವಿಷ ಕೊಡುತ್ತಿರುವುದು ಗಮನಕ್ಕೆ ಬರುತ್ತದೆ ಎಂದು ಸೂಚ್ಯವಾಗಿ ನುಡಿದರು.
ಪ್ರಸಕ್ತ ವರ್ಷದಲ್ಲಿ ಕರ್ನಾಟಕ ಸರ್ಕಾರವು 19 ಸಾವಿರ ಕೋಟಿ ರೂ. ಆದಾಯವನ್ನು ಕೇವಲ ಅಬಕಾರಿ ಇಲಾಖೆಯಿಂದಲೇ ಪಡೆದಿದೆ. ಇನ್ನೂ ಆದಾಯ ಹೆಚ್ಚಿಸುವಂತೆ ಇಲಾಖೆಗೆ ಸೂಚಿಸಿದೆ. ಇದರಿಂದ ಮದ್ಯದ ಅಂಗಡಿಳ ಸಂಖ್ಯೆ ಹೆಚ್ಚಾಗಿ ಕುಡುಕರೂ ಹೆಚ್ಚುತ್ತಿದ್ದಾರೆ. ಇಂದಿನ ಯುವ ಪೀಳಿಗೆಗೆ ಮಧ್ಯಪಾನ ಒಂದು ಫ್ಯಾಷನ್ ಆಗಿದೆ ಕಾಣುತ್ತಿದೆ. ಆದರೆ, ಇದರಿಂದ ಕಾಯಿಲೆ ಬರುತ್ತಿರುವುದರ ಬಗ್ಗೆ ಅವರಿಗೆ ಅರಿವೇ ಇಲ್ಲ ಎಂದರು.
ನಮ್ಮ ಆಯಸ್ಸು ನಿರ್ಧರಿಸುವುದು ಬ್ರಹ್ಮನಲ್ಲ, ವಂಶವಾಹಿನಿಗಳಲ್ಲಿ ಗರ್ಭಧಾರಣೆಯಾದಾಗಲೇ ನಮ್ಮ ವಯಸ್ಸು ನಿರ್ಧಾರವಾಗಲಿದೆ. 20ನೇ ವಯಸ್ಸಿನಲ್ಲಿಯೇ ಮುಪ್ಪು ಎದುರಿಸಲು ಸಜ್ಜಾಗಬೇಕು. ಈ ಬಗ್ಗೆ ಮಕ್ಕಳು, ಮೊಮ್ಮಕ್ಕಳಿಗೆ ತಿಳಿಹೇಳಬೇಕು. ಜಪಾನ್ ದೇಶದಲ್ಲಿ ವ್ಯಕ್ತಿಯ ಸರಾಸರಿ ಜೀವಿತಾವಧಿ 84 ವರ್ಷ. ಆದರೆ ಭಾರತದಲ್ಲಿ 67 ವರ್ಷಕ್ಕೆ ಕುಸಿದಿದೆ. ಇದಕ್ಕೆ ಕಾರಣ ಆರೋಗ್ಯದ ಕಡೆ ಹೆಚ್ಚಾಗಿ ಗಮನ ಹರಿಸದೇ ನಿರ್ಲಕ್ಷ್ಯ ವಹಿಸುವುದೇ ಕಾರಣ ಎಂದರು.
40ನೇ ವಯಸ್ಸಿಗೇ ಖಾಯಿಲೆಗಳು ಆರಂಭವಾಗುತ್ತವೆ. ಪ್ರಸ್ತುತ ದಿನಗಳಲ್ಲಿ ಶೇ.35ರಷ್ಚು ಜನ ರಕ್ತದೊತ್ತಡ, ಶೇ.25ರಷ್ಟು ಜನರು ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದಾರೆ. ಇದರೊಟ್ಟಿಗೆ ಮಾನಸಿಕ ಒತ್ತಡ, ಖಿನ್ನತೆಯೂ ಹೆಚ್ಚುತ್ತಿದೆ. ಇದಕ್ಕೆಲ್ಲಾ ಇಂದಿನ ಆಹಾರ ಪದ್ಧತಿ, ಜೀನನ ಕ್ರಮಗಳೇ ಕಾರಣ. ಆದ್ದರಿಂದ ಆಹಾರ ಪದ್ಧತಿ ಹಾಗೂ ಜೀವನ ಕ್ರಮವನ್ನು ಬದಲಿಸಿಕೊಂಡು ಆರೋಗ್ಯಯುತರಾಗಿ ಬಾಳೋಣ ಎಂದು ಸಲಹೆ ನೀಡಿದರು.ಸಂವಾದದಲ್ಲಿ ಕರುಣಾ ಜೀವ ಟ್ರಸ್ಟ್ನ ಶಿವನಕೆರೆ ಬಸವಲಿಂಗಪ್ಪ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
