ಚಳ್ಳಕೆರೆ
ನಿತ್ಯದ ಬದುಕಿನಲ್ಲಿ ಉತ್ಸಾಹ ಕಾಣಬೇಕಾದಲ್ಲಿ ನಾವು ಕಡೆಯ ಪಕ್ಷ ಒಂದು ಬಾರಿಯಾದರೂ ಯೋಗವನ್ನು ಮಾಡಬೇಕಿದೆ. ಯೋಗವನ್ನು ನಿರಂತರವಾಗಿ ಮಾಡುತ್ತಾ ಬಂದಲ್ಲಿ ನಮ್ಮ ದೇಹದಲ್ಲಿನ ಎಲ್ಲಾ ಅಂಗಾಂಗಗಳು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುವುದರಿಂದ ನಾವು ಉತ್ಸಾಹದಿಂದ ನಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಸಾಧ್ಯವೆಂದು ಪೌರಾಯುಕ್ತ ಜೆ.ಟಿ.ಹನುಮಂತರಾಜು ತಿಳಿಸಿದರು.
ಅವರು, ಗುರುವಾರ ಬೆಳಗ್ಗೆ ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ವಿಶ್ವಯೋಗ ದಿನಾಚರಣೆ ಅಂಗವಾಗಿ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ಹಮ್ಮಿಕೊಂಡಿದ್ದ ಮೋಟಾರ್ ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದರು. ವಿಶ್ವಯೋಗ ದಿನಾಚರಣೆ ಇಂದು ವಿಶ್ವಮಟ್ಟದಲ್ಲಿ ಪ್ರಸಿದ್ದಿಯಾಗಿದ್ದು, ಕೇಂದ್ರ ಸರ್ಕಾರವೂ ಸಹ ಈ ಕಾರ್ಯಕ್ರಮದ ಯಶಸ್ಸಿಗೆ ಹಲವಾರು ಸೂಚನೆ ನೀಡಿದೆ. ಯೋಗವನ್ನು ಮಾಡುವ ಮೂಲಕ ಮುಂದಿನ ದಿನಗಳಲ್ಲಿ ಉತ್ತಮ ಆರೋಗ್ಯದ ಜೊತೆಗೆ ಸಾರ್ಥಕ ಬದುಕನ್ನು ಕಾಣುವಲ್ಲಿ ನಾವೆಲ್ಲರೂ ಯಶಸ್ಸಿಯಾಗಬೇಕೆಂದು ಅವರು ತಿಳಿಸಿದರು.
ಹಿರಿಯ ವೈದ್ಯ ಡಾ.ಕೆ.ಎಂ.ಜಯಕುಮಾರ್ ಮಾತನಾಡಿ, ಯೋಗದಿಂದ ಮಾತ್ರ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ನಾವೆಲ್ಲರೂ ನಮ್ಮ ನಿರ್ಧಿಷ್ಟ ಗುರಿಯನ್ನು ತಲುಪಬೇಕಾದಲ್ಲಿ ಅದು ಯೋಗದಿಂದ ಮಾತ್ರ ಸಾಧ್ಯ. ಇಂದು ಯೋಗ ಕೇವಲ ದೈಹಿಕ ವ್ಯಾಯಾಮವಾಗಿ ಉಳಿಯದೇ ವಿಶ್ವಮಟ್ಟದಲ್ಲಿ ಖ್ಯಾತಿಯಾಗಿದೆ ಎಂದರು.
ನಿವೃತ್ತ ಶಿಕ್ಷಕರು, ಸಮಾಜ ಚಿಂತಕರೂ ಆದ ಮಹಮ್ಮದ್ ಕಲಾಮಿ ಮಾತನಾಡಿ, ವಿಶ್ವ ಯೋಗ ದಿನಾಚರಣೆ ಅಂಗವಾಗಿ ಬೈಕ್ ರ್ಯಾಲಿ ಹಮ್ಮಿಕೊಂಡಿರುವುದು ಸಂತಸ ತಂದಿದೆ. ಪ್ರತಿನಿತ್ಯ ಬೆಳಗ್ಗೆ ಪತಂಜಲಿ ಯೋಗ ಶಿಕ್ಷಣ ಸಮಿತಿ ನಗರದ ಸಾವಿರಾರು ಜನರಿಗೆ ಯೋಗ ಶಿಕ್ಷಣವನ್ನು ನೀಡುತ್ತಿದೆ. ಯೋಗದಿಂದ ನಮ್ಮ ಋಷಿಮುನಿಗಳು ಅನೇಕ ಮಹಾನ್ ಸಾಧನೆಯನ್ನು ಮಾಡುವ ಮೂಲಕ ಯೋಗದಲ್ಲಿ ಅಡಗಿರುವ ದಿವ್ಯ ಶಕ್ತಿಯನ್ನು ಸಾಬೀತು ಪಡಿಸಿದ್ದಾರೆಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಸಂಚಾಲಕರು, ಯೋಗ ಶಿಕ್ಷಣ ಸಮಿತಿ ತಾಲ್ಲೂಕು ಅಧ್ಯಕ್ಷರಾದ ಎಚ್.ಹನುಮಂತಪ್ಪ, ಕಳೆದ ಸುಮಾರು 10 ವರ್ಷಗಳಿಂದ ಚಳ್ಳಕೆರೆ ನಗರದ 15 ಕೇಂದ್ರಗಳಲ್ಲಿ ಯೋಗ ಶಿಕ್ಷಣ ನೀಡಲಾಗುತ್ತಿದೆ. ಶಿಕ್ಷಕರು ಪ್ರತಿನಿತ್ಯ ನೂರಾರು ಜನರಿಗೆ ಯೋಗವನ್ನು ಕಲಿಸಿಕೊಡುವ ಮೂಲಕ ಅವರಲ್ಲಿ ಕ್ರಿಯಾಶೀಲತೆಯನ್ನು ಹುಟ್ಟಿ ಹಾಕುತ್ತಿದ್ದಾರೆ. ನಮ್ಮ ನಿತ್ಯದ ಬದುಕಿನಲ್ಲಿ ಯೋಗ ಅವಶ್ಯಕವೆಂದರು.
ಪುರಸಭೆ ಮಾಜಿ ಸದಸ್ಯ ಎಸ್.ಮುಜೀಬ್, ಗೃಹ ರಕ್ಷಕ ದಳದ ತಾಲ್ಲೂಕು ಕಮಾಂಡೆಂಟ್ ಡಾ.ಬಿ.ಲೋಕೇಶ್, ಪ್ರಚಾರ ಸಮಿತಿ ಸಂಚಾಲಕ ಸಿ.ತಿಪ್ಪೇಸ್ವಾಮಿ, ಅಂಗಡಿತಿಪ್ಪೇಸ್ವಾಮಿ, ಬಿ.ವಿ.ಮನೋಹರ, ಸಿ.ಶಿವನಾಗಪ್ಪ, ಬಿ.ವಿ.ನಾಗೇಶ್ ಮುಂತಾದವರು ಭಾಗವಹಿಸಿದ್ದರು.