ಅಭಿವೃದ್ಧಿ ಮಾಡದ ಸಂಸದರನ್ನು ಮನೆಗೆ ಕಳ್ಸಿ

ದಾವಣಗೆರೆ:

        ಜನರು ಕೊಟ್ಟ ಅಧಿಕಾರವನ್ನು ವೈಯಕ್ತಿಕ ಅಭಿವೃದ್ಧಿಗೆ ಬಳಸಿಕೊಂಡಿರುವ ಸಂಸದ ಜಿ.ಎಂ.ಸಿದ್ದೇಶ್ವರ್ ಅವರನ್ನು ಬರುವ ಲೋಕಸಭಾ ಚುನಾವಣೆಯಲ್ಲಿ ಮತದಾರರು ಮನೆಗೆ ಕಳುಹಿಸಬೇಕೆಂದು ರಾಜ್ಯ ಕಾಂಗ್ರೆಸ್ ಅಸಂಘಟಿತ ಕಾರ್ಮಿಕರ ವಿಭಾಗದ ಅಧ್ಯಕ್ಷ ಶಾಂತವೀರ ನಾಯ್ಕ ಮನವಿ ಮಾಡಿದರು.

        ನಗರದ ಜಿಲ್ಲಾ ಕಾಂಗ್ರೆಸ್ ಭವನದ ಆವರಣದಲ್ಲಿ ಸೋಮವಾರ ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕರ ವಿಭಾಗದಿಂದ ಏರ್ಪಡಿಸಿದ್ದ ಅಸಂಘಟಿತ ಕಾರ್ಮಿಕರ ಜಿಲ್ಲಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯ ಜನತೆ ಸಿದ್ದೇಶ್ವರ್ ಅವರಿಗೆ ಮೂರು ಬಾರಿ ಅಧಿಕಾರ ನೀಡಿದ್ದಾರೆ. ಆದರೆ, ಅವರು ಈ ಅಧಿಕಾರವನ್ನು ತಮ್ಮ ವೈಯಕ್ತಿಕ ಅಭಿವೃದ್ಧಿಗೆ ಬಳಸಿಕೊಂಡಿದ್ದು, ಅವರನ್ನು ಈ ಬಾರಿ ಮನೆಗೆ ಕಳುಹಿಸಬೇಕೆಂದು ಕರೆ ನೀಡಿದರು.

         ಸತತವಾಗಿ ಮೂರು ಬಾರಿ ಸಂಸದರಾಗಿರುವ ಜಿ.ಎಂ.ಸಿದ್ದೇಶ್ವರ್ ಅವರ ಸಾಧನೆ ಏನು ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದ್ದು, ಜನರು ಕೊಟ್ಟ ಅಧಿಕಾರವನ್ನು ದುರುಪಯೋಪಡಿಸಿಕೊಂಡು ತಮ್ಮ ವ್ಯಾಪಾರ, ವ್ಯವಹಾರವನ್ನು ವಿಸ್ತರಿಸಿಕೊಂಡಿರು ವುದೇ ಅವರ ಸಾಧನೆಯಾಗಿದೆ ಎಂದು ಆರೋಪಿಸಿದರು.

         ಕೇಂದ್ರದಲ್ಲಿ ಬಿಜೆಪಿಯದ್ದೇ ಸರ್ಕಾರವಿದ್ದರೂ ಜಿಲ್ಲೆಯ ಅಭಿವೃದ್ಧಿಗೆ ಸಂಸದರು ಹೇಳಿಕೊಳ್ಳುವಂತಯ ಅನುದಾನ ತಂದಿದಲ್ಲ. ಮೂರು ಬಾರಿಯೂ ಜನರ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡಿದ್ದಾರೆ. ಈ ಮೂರು ಅವಧಿಯಲ್ಲಿ ದೇಶದ 543 ಸಂಸದರ ಪೈಕಿ ಯಾರೂ ಕೂಡ ತಾರದಷ್ಟು ಅನುದಾನವನ್ನು ತಂದು ಜಿಲ್ಲೆಯನ್ನು ಸರ್ವಾಂಗೀಣ ಅಭಿವೃದ್ಧಿ ಮಾಡಬಹುದಿತ್ತು.

         ಆದರೆ, ಅವರು ಯಾವುದೇ ಅಭಿವೃದ್ಧಿ ಮಾಡದೇ ಜನರು ತಮ್ಮ ಸ್ವಂತ ಉದ್ಯಮಕ್ಕೆ ಅಧಿಕಾರವನ್ನು ದುರುಪಯೋಗ ಪಡೆಸಿಕೊಂಡಿದ್ದಾರೆ. ಇಂಥಹ ಸಾಧನೆ ಶೂನ್ಯರ ಅಧಿಕಾರವನ್ನು ಅಂತ್ಯಗೊಳಿಸಲು ಈಗ ಸೂಕ್ತ ಕಾಲ ಬಂದಿದ್ದು, ಬರುವ ಚುನಾವಣೆಯಲ್ಲಿ ಎಸ್.ಎಸ್.ಮಲ್ಲಿಕಾರ್ಜುನ್ ಅವರು ದಾವಣಗೆರೆ ಕ್ಷೇತ್ರದಿಂದ ಭಾರೀ ಮತಗಳ ಅಂತರದಲ್ಲಿ ಜಯಗಳಿಸಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.

          ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ದುರಾಡಳಿತದಿಂದ ಪ್ರಸ್ತುತ ದೇಶವು ಆರ್ಥಿಕ ದಿವಾಳಿಯತ್ತ ಸಾಗುತ್ತಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಸುಳ್ಳಿನ ಸರಮಾಲೆಯನ್ನೇ ದೇಶದ ಜನರ ಮುಂದಿಟ್ಟ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಡಳಿತದ ಅಂತ್ಯಕಾಲ ದಾವಣಗೆರೆಯಿಂದಲೇ ಆರಂಭವಾಗಲಿದೆ ಎಂದು ಭವಿಷ್ಯ ನುಡಿದರು.

        ದೇಶದ ಇತಿಹಾಸದಲ್ಲಿಯೇ ರಾಷ್ಟ್ರೀಯ ಪಕ್ಷವೊಂದು ಅಸಂಘಟಿತ ಕಾರ್ಮಿಕರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪ್ರತ್ಯೇಕ ವಿಭಾಗವನ್ನೇ ಆರಂಭಿಸಿರುವುದು ಕಾಂಗ್ರೆಸ್ ಪಕ್ಷ ಮಾತ್ರ ಎಂಬುದು ಹೆಗ್ಗಳಿಕೆಯಾಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್‍ಗಾಂಧಿಯವರು ಅಸಂಘಟಿತ ಕಾರ್ಮಿಕರನ್ನು ಗುರುತಿಸಿ ಅವರನ್ನು ರಕ್ಷಿಸುವ ಚಿಂತನೆ ಮಾಡಿದ ಪರಿಣಾಮವಾಗಿ ಅಸಂಘಟಿತ ಕಾರ್ಮಿಕ ವಿಭಾಗ ಆರಂಭಗೊಂಡಿದೆ ಎಂದರು.

          ಹಿರಿಯ ವಕೀಲ, ಕಾಂಗ್ರೆಸ್ ಮುಖಂಡ ಎನ್.ಜಯದೇವ ನಾಯ್ಕ ಮಾತನಾಡಿ, ದೇಶದ ಜನಸಂಖ್ಯೆಯಲ್ಲಿ ಶೇ.30 ರಷ್ಟು ಜನ ಅಸಂಘಟಿತ ಕಾರ್ಮಿಕರಿದ್ದಾರೆ. ಈ ಸಂಘಟಿತ ಕಾರ್ಮಿಕರಿಗೆ ಸೌಲಭ್ಯ ನೀಡಲು ರಾಹುಲ್‍ಗಾಂಧಿಯವರು ನಿರ್ಧರಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿ, ಕಳೆದ ಐದು ವರ್ಷಗಳ ಕಾಲ ಆಳಿಡತ ನಡೆಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ 1 ಲಕ್ಷ ಸಹ ಉದ್ಯೋಗ ಸೃಷ್ಟಿಸಿಲ್ಲ್ಲ. ಬದಲಿಗೆ 1.60 ಲಕ್ಷ ಜನರು ಉದ್ಯೋಗ ಕಿತ್ತುಕೊಂಡಿದ್ದಾರೆ. ಇದು ಮೋದಿ ಸರ್ಕಾರದ ಸಾಧನೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

         ರಾಜ್ಯ ಕಾಂಗ್ರೆಸ್ ಅಸಂಘಟಿತ ಕಾರ್ಮಿಕರ ವಿಭಾಗದ ಉಪಾಧ್ಯಕ್ಷ ಪೊಲೀಸ್ ಗೌಡ್ರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಿಂದ ಜನರು ಬೇಸತ್ತು ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ದಾವಣಗೆರೆಯಿಂದಲೇ ಮೋದಿ ಆಡಳಿತವನ್ನು ಅಂತ್ಯಕಾಣಿಸಬೇಕಿದೆ. ಇದಕ್ಕಾಗಿ ಈ ಬಾರಿ ಎಸ್.ಎಸ್.ಮಲ್ಲಿಕಾರ್ಜುನ್ ನಡಿಗೆ ಸಂಸತ್ ಕಡೆಗೆ ಎಂಬ ಘೋಷವಾಕ್ಯದೊಂದಿಗೆ ಚುನಾವಣೆಗೆ ಸಿದ್ಧರಾಗೋಣ ಎಂದು ಕರೆ ನೀಡಿದರು.

        ವಿಭಾಗದ ಜಿಲ್ಲಾಧ್ಯಕ್ಷ ನಂಜಾನಾಯ್ಕ ಪ್ರಾಸ್ತವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಾಜಿ ಉಪಮೇಯರ್ ಮಂಜುಮ್ಮ, ಮುಖಂಡರಾದ ಮೀರಾ ಪ್ರಭಾಕರ್, ಉಮಾದೇವಿ, ಉಮಾ ತೋಟಪ್ಪ, ಶುಭಮಂಗಳ, ಗೀತಾ ಕದರಮಂಡಲಗಿ, ಡೋಲಿ ಚಂದ್ರು, ನಾಗರಾಜ್ ನಾಯ್ಕ, ರಿಯಾಜ್ ಶೇಖ್, ಮೈನುದ್ದೀನ್, ಕಾಶಿನಾಥ್ ನಾಯ್ಕ, ಹಾಲೇಶ್ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link