ದೌರ್ಜನ್ಯ ಪ್ರಕರಣಗಳ ಬಲವಂತ ರಾಜೀ ಸಲ್ಲದು : ಕೃಷ್ಣ ಬಾಜಪೇಯಿ

ಹಾವೇರಿ

    ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಮೇಲಿನ ದೌರ್ಜನ್ಯ ನಿಂತ್ರಣ ಹಾಗೂ ಈ ವರ್ಗದ ಕಲ್ಯಾಣ ಕಾರ್ಯಕ್ರಮಗಳ ಕುರಿತಂತೆ ಜಿಲ್ಲಾ ಜಾಗೃತಿ ಸಮಿತಿ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳು ಹಾಗೂ ನೀಡಿದ ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸಿ ತ್ವರಿತವಾಗಿ ಅನುಷ್ಠಾನ ಗೊಳಿಸುವಂತೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಜನರ ಮೇಲಿನ ದೌರ್ಜನ್ಯ ನಿಯಂತ್ರಣ ಹಾಗೂ ಜಿಲ್ಲಾ ಜಾಗೃತ ಸಮಿತಿ ಅಧ್ಯಕ್ಷರಾದ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ತಾಕೀತು ಮಾಡಿದರು.

     ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಜರುಗಿದ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಜನರ ಮೇಲಿನ ದೌರ್ಜನ್ಯ ನಿಯಂತ್ರಣ ಹಾಗೂ ಜಿಲ್ಲಾ ಜಾಗೃತ ಸಮಿತಿ ಹಾಗೂ ಕರ್ನಾಟಕ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆಯ ಕಾರ್ಯಕ್ರಮ ಅನುಷ್ಠಾನ ಕುರಿತಂತೆ ಪ್ರಗತಿ ಪರಿಶೀಲನೆ ಸಭೆ ನಡೆಸಿದರು.

       ಕಳೆದ ತ್ರೈಮಾಸಿಕ ಅವಧಿಯಲ್ಲಿ ಜಿಲ್ಲಾ ಜಾಗೃತಿ ಸಮಿತಿಯ ಅಧಿಕಾರೇತರ ಸದಸ್ಯರುಗಳು ಪ್ರಸ್ತಾಪ ಮಾಡಿದ ಹಲವು ಸಮಸ್ಯೆಗಳನ್ನು ಇತ್ಯರ್ಥಪಡಿಸದೇ ಬಾಕಿ ಉಳಿಸಿಕೊಂಡಿರುವ ಇಲಾಖಾ ಅಧಿಕಾರಿಗಳಿಂದ ವಿವರಪಡೆದ ಕೃಷ್ಣ ಬಾಜಪೇಯಿ ಅವರು ಮುಂದಿನ ದಿನಗಳಲ್ಲಿ ಪರಿಶಿಷ್ಟ ಕಲ್ಯಾಣ ಯೋಜನೆಗಳ ಕುರಿತಂತೆ ಸಭೆಗಳಲ್ಲಿ ಚರ್ಚೆಯಾಗುವ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಕಾಲಮಿತಿಯೊಳಗೆ ಅನುಷ್ಠಾನಗೊಳಿಸಬೇಕು. ಮುಂದಿನ ಸಭೆಯೊಳಗಾಗಿ ಪೂರ್ಣ ವರದಿಯೊಂದಿಗೆ ಹಾಜರಾಗಬೇಕು ಎಂದು ಅವರು ಸೂಚಿಸಿದರು.

      ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ದೌರ್ಜನ್ಯ ಪ್ರಕರಣಗಳ ತ್ವರಿತ ವಿಲೇವಾರಿ ಹಾಗೂ ದೌರ್ಜನ್ಯಕ್ಕೊಳಗಾದವರಿಗೆ ತಕ್ಷಣ ಪರಿಹಾರ ಒದಗಿಸಬೇಕಾಗಿದೆ. ಆದರೆ ಈ ಸಂದರ್ಭದಲ್ಲಿ ದೌರ್ಜನ್ಯ ಎಸೆಗಿದವರು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ವರ್ಗಕ್ಕೆ ಸೇರಿದವರಲ್ಲ ಎಂಬುದನ್ನು ದೃಢಿಕರಿಸಲು ಜಾತಿ ಪ್ರಮಾಣಪತ್ರ ಅವಶ್ಯವಿದೆ.

      ಸಕಾಲಕ್ಕೆ ಪ್ರಮಾಣಪತ್ರ ದೊರೆಯದಿದ್ದರೆ ಶಾಲಾ ದಾಖಲಾತಿಯೊಂದಿಗೆ ಜಾತಿ ದೃಢೀಕರಿಸಿ ಪ್ರಮಾಣಪತ್ರ ನೀಡಲು ತಹಶೀಲ್ದಾರ ಹಾಗೂ ಸಮಾಜ ಕಲ್ಯಾಣಾಧಿಕಾರಿಗಳು ಕ್ರಮವಹಿಸುವಂತೆ ಸೂಚನೆ ನೀಡಿದರು.

       ಹಾನಗಲ್ ಕ್ಷೇತ್ರದ ಶಾಸಕರಾದ ಸಿ.ಎಂ.ಉದಾಸಿ ಅವರು ಮಾತನಾಡಿ, ದೌರ್ಜನ್ಯ ಪ್ರಕರಣಗಳನ್ನು ವಿಳಂಬಮಾಡಬಾರದು ಹಾಗೂ ತ್ವರಿತವಾಗಿ ಇತ್ಯರ್ಥಪಡಿಸಬೇಕು. ದೌರ್ಜನ್ಯಕ್ಕೆ ಒಳಗಾದವರ ಮೇಲೆ ಒತ್ತಡಹಾಕಿ ರಾಜೀ ಮಾಡಿಕೊಳ್ಳುವಂತಾಗಬಾರದು. ಈ ಪ್ರಕರಣಗಳನ್ನು ಅತ್ಯಂತ ಸೂಕ್ಷ್ಮ ಹಾಗೂ ಎಚ್ಚರಿಕೆಯಿಂದ ವಿಲೇವಾರಿಗೊಳಿಸಲು ಅಧಿಕಾರಿಗಳಿಗೆ ಸಲಹೆ ನೀಡಿದರು.

       ದೌರ್ಜನ್ಯ ಪ್ರಕರಣಗಳ ದಾಖಲು ವಿಲೇವಾರಿ ಹಾಗೂ ನ್ಯಾಯಾಲಯದ ವಿಚಾರಣೆಯಲ್ಲಿರುವ ಪ್ರಕರಣಗಳ ವಿವರ, ಪರಿಹಾರ ಮೊತ್ತ ಪಾವತಿ ಕುರಿತಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಶ್ರೀಮತಿ ಚೈತ್ರಾ, ಸರ್ಕಾರಿ ಅಭಿಯೋಜಕರಾದ ಸಿದ್ಧಾರೂಢ ಎಂ.ಗೆಜ್ಜಿಹಳ್ಳಿ ಅವರು ಸಭೆಗೆ ವಿವರಿಸಿದರು.

       ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಕಾರ್ಯಕ್ರಮ ಅನುಷ್ಠಾನ ಪ್ರಗತಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಗಂಗಾ ಕಲ್ಯಾಣ ಯೋಜನೆಯಡಿ ಬಾಕಿ ಉಳಿದಿರುವ ವಿದ್ಯುತ್ ಸಂಪರ್ಕ ವಿವರ ಹಾಗೂ ಲೋಕೋಪಯೋಗಿ ಇಲಾಖೆಯಿಂದ ಎಸ್.ಸಿ.ಪಿ., ಟಿ.ಎಸ್.ಪಿ. ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ಕುರಿತಂತೆ ಪ್ರತ್ಯೇಕ ಸಭೆ ಕರೆಯುವಂತೆ ಸೂಚಿಸಿದರು.

       ಪರಿಶಿಷ್ಟರ ಕಲ್ಯಾಣಕ್ಕಾಗಿ ಕಳೆದ ಸಾಲಿನಲ್ಲಿ ಅನುಷ್ಠಾನಗೊಳಿಸಲಾದ ಕಾಮಗಾರಿಗಳ ವಿವರ ಹಾಗೂ ಪರಿಶೀಲನೆಗೆ ದಿನಾಂಕ ನಿಗದಿಪಡಿಸಿದರೆ ಖುದ್ದಾಗಿ ಅನುಷ್ಠಾನಗೊಂಡಿರುವ ಕಾಮಗಾರಿಯನ್ನು ಪರಿಶೀಲಿಸುವುದಾಗಿ ವಿವಿಧ ಇಲಾಖಾ ಅಧಿಕಾರಿಗಳಿಗೆ ಅವರು ತಿಳಿಸಿದರು.

       ಕೃಷಿ ಇಲಾಖೆಯಿಂದ ಅನುಷ್ಠಾನಗೊಳ್ಳುತ್ತಿರುವ ಕೃಷಿಹೊಂಡ ಹಾಗೂ ವಿವಿಧ ಯೋಜನೆಗಳು ರೈತರಪರವಾಗಿ ಗುತ್ತಿಗೆದಾರರೇ ಅರ್ಜಿಹಾಕಿ ಕಾಮಗಾರಿ ನಿರ್ವಹಿಸುತ್ತಿರುವ ಕುರಿತಂತೆ ದೂರುಗಳು ಬಂದಿವೆ. ಈ ಕುರಿತಂತೆ ಜಿಲ್ಲಾ ಮಟ್ಟದ ಕೃಷಿ ಅಧಿಕಾರಿಗಳು ಪರಿಶೀಲಿಸುವಂತೆ ಶಾಸಕ ಸಿ.ಎಂ.ಉದಾಸಿ ಸೂಚನೆ ನೀಡಿದರು.

       ರೇಷ್ಮೆ ಕೃಷಿಯಲ್ಲಿ ಹೆಚ್ಚು ರೈತರು ತೊಡಗಿಸಿಕೊಳ್ಳುವಂತೆ ಜಾಗೃತಿ ಮೂಡಿಸಬೇಕು. ಸುಧಾರಿತ ತಳಿಗಳನ್ನು ಪರಿಚಯಿಸುವಂತೆ ಸೂಚಿಸಿದ ಅವರು ಹಾನಗಲ್ ತಾಲೂಕಿನ ಬಿದರಿಕೊಪ್ಪ ಇತರ ಗ್ರಾಮಗಳಲ್ಲಿ ಪರಿಶಿಷ್ಟ ಜಾತಿಯ ಫಲಾನುಭವಿಗಳು ಕಳೆದ 50 ವರ್ಷದಿಂದ ಭೂಮಿ ಸಾಗುವಳಿ ಮಾಡುತ್ತಿದ್ದರೂ ಮಾಲೀಕತ್ವ ಸಿಕ್ಕಿಲ್ಲ. ಈ ಕುರಿತಂತೆ ಸಭೆ ನಡೆಸಿ ಭೂ ದಾಖಲೆಗಳಲ್ಲಿ ಸಾಗುವಳಿದಾರರ ಹಕ್ಕು ದಾಖಲಿಸುವ ಕುರಿತಂತೆ ್ಲ ಕ್ರಮವಹಿಸುವಂತೆ ಶಾಸಕ ಉದಾಸಿ ಅವರು ತಿಳಿಸಿದರು.

       ಸವಣೂರು ಪುರಸಭೆ ದಿನಗೂಲಿನೌಕರರು, ಹೊಸರಿತ್ತಿ ಹಾಗೂ ಅಗಡಿ ಗ್ರಾಮ ಪಂಚಾಯತಿಗಳಲ್ಲಿ ಸಫಾಯಿಕರ್ಮಚಾರಿಗಳ ವೇತನ ಬಾಕಿ ಕುರಿತಂತೆ ಸದಸ್ಯರು ಸಭೆಯ ಗಮನಸೆಳೆದರು. ಈ ಕುರಿತಂತೆ ತ್ವರಿತವಾಗಿ ವೇತನ ಪಾವತಿಗೆ ಸಂಬಂಧಿಸಿದ ಅಧಿಕಾರಿಗಳಿಗೆ ಕೃಷ ಬಾಜಪೇಯಿ ಸೂಚನೆ ನೀಡಿದರು.

      ಸವಣೂರ ತಾಲೂಕಿನ ಈಚಲ ಯಲ್ಲಾಪುರ ಹಾಗೂ ನೆಗಳೂರ ಗ್ರಾಮದ ಪರಿಶಿಷ್ಟ ವರ್ಗದ ಸ್ಮಶಾನ ಅಭಿವೃದ್ಧಿ ಕುರಿತಂತೆ ನರೇಗಾ ಯೋಜನೆಯಡಿ ತಕ್ಷಣ ಕಾಮಗಾರಿ ಕೈಗೊಳ್ಳಲು ಜಿಲ್ಲಾ ಪಂಚಾಯತ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

       ಹಿರೇಕೆರೂರ ತಾಲೂಕಿನ ಮಾದಿಗತನ ವಂಶ ಪರಂಪಾರಿಕ ಮಾಲ್ಕಿ ಜಮೀನನ್ನು ಪಾಟೀಲಕಿ ಇನಾಂ ಜಮೀನ ಆಗಿ ವರ್ಗಾಯಿಸಿದ್ದಾರೆ. ಮೂಲ ಸಾಗುವಳಿದಾರರಿಗೆ ಈ ಜಮೀನನ್ನು ವರ್ಗಾಯಿಸಬೇಕು ಎಂದು ಜಾಗೃತಿ ಸಮಿತಿಯ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಸಭೆಯಲ್ಲಿ ಮನವಿ ಮಾಡಿಕೊಂಡರು. ಈ ಕುರಿತಂತೆ ಪರಿಶೀಲನೆ ನಡೆಸಿ ತ್ವರಿತವಾಗಿ ಇತ್ಯರ್ಥಪಡಿಸಲು ಉಪವಿಭಾಗಾಧಿಕಾರಿಗಳಿಗೆ ಸೂಚನೆ ನೀಡಿದರು.

       ಉದ್ಯಮ ಶೀಲತಾ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಯೋಜನೆ ಮಂಜೂರಾಗಿ ಸಬ್ಸಿಡಿ ಹಣ ಬ್ಯಾಂಕಿಗೆ ಜಮವಾದರೂ ಕೆಲ ಬ್ಯಾಂಕ್‍ಗಳು ಸಾಲ ನೀಡಲು ನಿರಾಕರಿಸುತ್ತಿರುವ ಕುರಿತಂತೆ ಸದಸ್ಯರು ಸಭೆಯ ಗಮನಸೆಳೆದರು. ಈ ಕುರಿತಂತೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚನೆ ನೀಡಿ ಸಂಬಂಧಿಸಿದ ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲು ಸೂಚಿಸಿದರು.

      ಶಿಗ್ಗಾಂವ ತಾಲೂಕಿನ ಹಿರೇಬೆಂಡಿಗೇರಿ ಪರಿಶಿಷ್ಟರ ಕಾಲೋನಿಗೆ ಮೂಲ ಸೌಕರ್ಯ ಕಲ್ಪಿಸುವುದು ಹಾಗೂ ಬ್ಯಾಡಗಿ ತಾಲೂಕಿನ ಪರಿಶಿಷ್ಟರ ಕಾಲೋನಿಯಲ್ಲಿ ಗ್ರಂಥಾಲಯ ಸ್ಥಾಪನೆಗೆ ತಕ್ಷಣಕ್ರಮವಹಿಸಿ ವರದಿ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

      ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಶೇ.24.10ರ ಎಸ್.ಸಿ., ಎಸ್.ಟಿ. ಅನುದಾನದ ಕಾಮಗಾರಿಗಳನ್ನು ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಳಿಸುವಂತೆ ಸದಸ್ಯರ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಅಧಿಕಾರಿ ಈ ಕುರಿತಂತೆ ಕ್ರಮವಹಿಸುವಂತೆ ನಗರಾಭಿವೃದ್ಧಿ ಇಲಾಖಾ ಯೋಜನಾಧಿಕಾರಿ ಹಾಗೂ ಜಿ.ಪಂ.ಸಹಾಯಕ ಕಾರ್ಯದರ್ಶಿಗೆ ಸೂಚನೆ ನೀಡಿದರು.

         ಸಭೆಯಲ್ಲಿ ದೌರ್ಜನ್ಯ ನಿಯಂತ್ರಣ ಹಾಗೂ ಜಾಗೃತಿಯ ಸಮಿತಿಯ ಸದಸ್ಯರಾದ ಎನ್.ಕೆ.ಮರೋಳ, ಮಾಲತೇಶ ಯಲ್ಲಾಪುರ, ಚಿನ್ನಪ್ಪದೇವಸೂರ, ಪರಮೇಶ ಬಿ.ಗೊಡ್ಡೆಮ್ಮಿ, ಶ್ರೀಮತಿ ಗೀತಾ ರಾಜಣ್ಣ ಅಂಕಸಖಾನಿ, ಶ್ರೀಮತಿ ವಿದ್ಯಾಸೆಟ್ಟಿ, ಚಂದ್ರಪ್ಪ ಹರಿಜನ, ಹುಚ್ಚಪ್ಪ ನಾಗಪ್ಪ, ಅಪರ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap