ಮಧುಗಿರಿ
ಜಮೀನಿನ ಪೊದೆಯೊಂದರಲ್ಲಿ ಜನರನ್ನು ಕಂಡು ಗಾಬರಿಗೊಂಡು ನಿತ್ರಾಣವಾಗಿದ್ದು ಹೆಣ್ಣು ಚಿರತೆಯೊಂದನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆಯವರು ಹಾಗೂ ಸಾರ್ವಜನಿಕರು ಯಶಸ್ವಿಯಾಗಿದ್ದಾರೆ.ತಾಲ್ಲೂಕಿನ ಐಡಿಹಳ್ಳಿ ಹೋಬಳಿಯ ಗರಣಿ ಗ್ರಾಮದ ಗೇಟ್ ಸಮೀಪವಿರುವ ನರಸಿಂಹಯ್ಯ ಎನ್ನುವವರಿಗೆ ಸೇರಿದ ಇಟ್ಟಿಗೆ ಕಾರ್ಖಾನೆಯ ಬಳಿ ಶುಕ್ರವಾರ ಬೆಳಗ್ಗೆ ಸುಮಾರು 2 ವರ್ಷ ಪ್ರಾಯದ ಹೆಣ್ಣು ಚಿರತೆಯೊಂದು ಪ್ರತ್ಯಕ್ಷವಾಗಿತ್ತು.
ಚಿರತೆಯನ್ನು ಕಂಡ ಕೆಲ ಗ್ರಾಮಸ್ಥರ ತಂಡ ಚಿರತೆಯನ್ನು ಹಿಂಬಾಲಿಸಿಕೊಂಡು ಹೋದಾಗ ಮಿಡಿಗೇಶಿ ಗರಣಿ ಮುಖ್ಯ ರಸ್ತೆಯ ಸಮೀಪವಿದ್ದ ಇಟ್ಟಿಗೆ ಕಾರ್ಖಾನೆಯ ಸಮೀಪದಲ್ಲಿನ ಪೊದೆಯಲ್ಲಿ ಸೇರಿಕೊಂಡಿತ್ತು. ಚಿರತೆ ಬಂದಿರುವ ವಿಷಯ ತಿಳಿಯುತ್ತಲೆ ಗರಣಿ ಸುತ್ತಮುತ್ತಲಿನ ನೂರಾರು ಗ್ರಾಮಸ್ಥರ ಚೀರಾಟ ಹಾಗೂ ಕೂಗಾಟಕ್ಕೆ ಪೊದೆ ಸೇರಿದ್ದ ಹೆಣ್ಣು ಚಿರತೆ ಮಧ್ಯಾಹ್ನದವರೆವಿಗೂ ಪೊದೆ ಬಿಟ್ಟು ಕದಲಿರಲಿಲ್ಲ.
ಕೆಲ ಗ್ರಾಮಸ್ಥರು ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ದೂರವಾಣಿ ಮೂಲಕ ಕರೆ ಮಾಡಿ ಚಿರತೆಯನ್ನು ಹಿಡಿಯುವಂತೆ ಮನವಿ ಮಾಡಿದ್ದರು. ತಕ್ಷಣ ಕಾರ್ಯ ಪ್ರೌವೃತ್ತರಾದ ಅರಣ್ಯ ಇಲಾಖೆಯವರು ಚಿರತೆ ಅವಿತು ಕೊಂಡಿರುವ ಸ್ಥಳದ ಬಗ್ಗೆ ಮಾಹಿತಿ ಪಡೆದು ಮಧ್ಯಾಹ್ನ ಸುಮಾರು 1.20 ರ ಸಮಯದಲ್ಲಿ ಪೊದೆಯಲ್ಲಿ ನಿತ್ರಾಣವಾಗಿದ್ದ ಚಿರತೆಯ ಮೇಲೆ ಬಲೆ ಬೀಸಿ ಹಿಡಿದುಕೊಂಡು ತಿಮ್ಮಲಾಪುರ ಅಭಯಾರಣ್ಯಕ್ಕೆ ಚಿರತೆಯನ್ನು ಬಿಡಲಾಯಿತು.
ಈ ಸಂದರ್ಭದಲ್ಲಿ ಚಿರತೆಯನ್ನು ನೋಡಲು ಬಂದ ನೂರಾರು ಜನ ಗ್ರಾಮಸ್ಥರನ್ನು ನಿಯಂತ್ರಿಸಲು ಮಿಡಿಗೇಶಿ ಪೊಲೀಸರು ಹರಸಾಹಸ ಪಡಬೇಕಾಯಿತು. ಆದರೆ ಚಿರತೆಯಿಂದ ಯಾವುದೇ ಪ್ರಾಣಾಪಾಯಗಳು ಸಂಭವಿಸಿಲ್ಲ. ಹೆಣ್ಣು ಚಿರತೆಯು ಗರ್ಭಧರಿಸಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಮರಿಗಳನ್ನು ಜನ್ಮ ನೀಡಲಿದೆ. ಆದ್ದರಿಂದ ಅದು ಸ್ವಲ್ಪ ಕಾಲ ನಿತ್ರಾಣವಾಗಿತ್ತು. ಯಾರಿಗೂ ಯಾವುದೇ ರೀತಿಯ ತೊಂದರೆ ಯಾಗಿಲ್ಲ. ಚಿರತೆಯು ಆರೋಗ್ಯವಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಆರ್ಎಫ್ಓ ವಾಸುದೇವಾ ಮೂರ್ತಿ, ಮುತ್ತುರಾಜ್, ಚಂದ್ರಶೇಖರ್, ಶಿವರಾಜ್, ಕರಿಯಣ್ಣ, ಕೇಶವಮೂರ್ತಿ, ಮಿಡಿಗೇಶಿ ಪೊಲೀಸ್ ಸಿಬ್ಬಂದಿ ವರ್ಗದವರು ಹಾಗೂ ನೂರಾರು ಗ್ರಾಮಸ್ಥರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ