ಸಹಕಾರಿ ಬ್ಯಾಂಕ್ ಕಟ್ಟಿ ಬೆಳೆಸಲು ಕರೆ

ತುರುವೇಕೆರೆ
      ಜಾತಿ, ಪಕ್ಷ, ದ್ವೇಷದ ರಾಜಕಾರಣದ ಹೊರತಾಗಿ ಸಹಕಾರಿ ಬ್ಯಾಂಕ್‍ಗಳನ್ನು ಕಟ್ಟಿ ಸದೃಢವಾಗಿ ಬೆಳೆಸಬೇಕಾದ ಕೆಲಸ ಎಲ್ಲರದಾಗಬೇಕು . ಏಕೆಂದರೆ ಇದರಲ್ಲಿ ಅಸಂಖ್ಯ ಬಡರೈತರ ಬದುಕು ಅಡಗಿರುತ್ತದೆ ಎಂದು ಡಿಸಿಸಿ ಬ್ಯಾಂಕ್ ಹಾಗೂ ಅಫೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಅಭಿಪ್ರಾಯಪಟ್ಟರು.
    ತಾಲ್ಲೂಕಿನ ಕಸಬಾ ಹೋಬಳಿಯ ತೊರೆಮಾವಿನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.ಪ್ರತಿಯೊಬ್ಬ ರೈತರೂ ಆರ್ಥಿಕ ಸಶಕ್ತತೆ ಹೊಂದಿ ಜೀವನ ನಡೆಸುವುವಂತೆ ಮಾಡುವುದೇ ನಮ್ಮ ಆಶಯ. ಆರಂಭದಲ್ಲಿ ಸಹಕಾರಿ ಸಂಘದ ನೌಕರರಿಗೆ ಸಂಬಳವನ್ನೂ ಕೊಡಲಾಗದ ಸ್ಥಿತಿಯಲ್ಲಿದ್ದ ಬ್ಯಾಂಕ್ ಅನ್ನು ಕೋಟ್ಯಂತರ ರೂಪಾಯಿಗಳ ತನಕವೂ ಸಾಲವನ್ನು ರೈತರಿಗೆ ನೀಡುವಂತೆ ಮರು ನಿರ್ಮಾಣ ಮಾಡಿದ್ದೇನೆ.
   ಸಂಕಷ್ಟದಲ್ಲಿರುವ ರೈತರಿಗೆ ಶಾಶ್ವತ ನೀರಾವರಿ ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಹಾಗೂ ಪರಿಹಾರಗಳನ್ನು ನೀಡುವ ಕೆಲಸವನ್ನು ಸರ್ಕಾರಗಳು ಮಾಡಬೇಕು. ಅದೇ ದಿಸೆಯಲ್ಲಿ ನಮ್ಮ ಬ್ಯಾಂಕ್ ನೊಂದ ರೈತರಿಗೆ ಆಶಾಕಿರಣವಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಅರ್ಹ ಎಲ್ಲ ರೈತರೂ ಸಹಕಾರಿ ಸಂಘದಿಂದ ಸಾಲ ನೀಡುವ ಮಹಾದಾಸೆ ಇದೆ. ಇನ್ನು ಮುಂದೆ ಸಹಕಾರಿ ಸಂಘಗಳಿಗೆ ಚುನಾವಣೆ ನಡೆಸದೆ ಅವಿರೋಧ ಆಯ್ಕೆಯಾಗುವಂತೆ ಮಾಡುವ ಯೋಚನೆ ಇದೆ. ಸಹಕಾರಿ ಸಂಘ ಎಲ್ಲೆಡೆ ಪ್ರಬುದ್ಧಮಾನವಾಗಿ ಬೆಳೆದಿದ್ದರಿಂದ ಜಿಲ್ಲೆಯಲ್ಲಿ ಮೀತಿ ಮೀರಿ ಬೆಳೆದಿದ್ದ ಖಾಸಗಿ ಲೇವಾದೇವಿದಾರರಿಗೆ ಅಂಕುಶ ಹಾಕಲಾಯಿತು. ಇದರಿಂದ ರೈತರು ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ.
 
    ನನ್ನ ಏಳಿಗೆ ಸಹಿಸದ ಕೆಲವರು ನನ್ನ ಮೇಲೆ ಪೊಳ್ಳು ಆರೋಪ ಹೊರಿಸಿ ಬ್ಯಾಂಕ್ ಅನ್ನು ಸೂಪರ್‍ಸೀಡ್ ಮಾಡಿಸಿ ಅಧ್ಯಕ್ಷ ಸ್ಥಾನದಿಂದ ಇಳಿಸುವ ಷಡ್ಯಂತ್ರ ಮಾಡಲಾಗಿತ್ತು. ಆಗ ಬಿಎಸ್‍ವೈ ಅವರು ಧೈರ್ಯ ತುಂಬಿದ್ದರಿಂದ ಮತ್ತೆ ಅಧ್ಯಕ್ಷನಾಗಿದ್ದೇನೆ. ಇದು ಪ್ರಾಮಾಣಿಕರಿಗೆ ಸಂದ ಜಯ ಎಂದು ಸ್ಥಳೀಯ ಕಾಂಗ್ರೆಸ್ ನಾಯಕರನ್ನು ಪರೋಕ್ಷವಾಗಿ ಕುಟುಕಿದರು.
   ಲೋಕಸಭಾ ಮಾಜಿ ಸದಸ್ಯ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿನ ರೈತರ ಬದುಕನ್ನು ಸಹಕಾರಿ ಸಂಘಗಳ ಮೂಲಕ ಹಸನು ಮಾಡಿದ ಕೀರ್ತಿ ರಾಜಣ್ಣನವರದು. ಇಂದಿನ ರಾಜಕಾರಣದಲ್ಲಿ ಸಂರಚನಾತ್ಮಕ ಆಶಯಗಳು ಕಣ್ಮರೆಯಾಗುತ್ತಾ ಅರಚನಾತ್ಮಕ ಅಂಶಗಳ ಮೇಳೈಸುತ್ತಿವೆ. ಇದರಿಂದಲೇ ಕಳೆದ ಬಾರಿ ಚುನಾವಣೆಯಲ್ಲಿ ದ್ವೇಷದ ರಾಜಕಾರಣದಿಂದ ನನ್ನ ಮತ್ತು ಕೆ.ಎನ್.ರಾಜಣ್ಣನವರನ್ನು ರಾಜಕೀಯವಾಗಿ ಮುಗಿಸುವ ಕುತಂತ್ರಗಳು ನಡೆದವು ಎಂದು ಅಸಮಾಧಾನ ವ್ಯಕ್ತಪಡಿಸಿದರು.
   ಶಾಸಕ ಮಸಾಲಜಯರಾಮ್ ಮಾತನಾಡಿ, ಸಹಕಾರಿ ಸಂಘಗಳಲ್ಲಿ ಸಾಲಮನ್ನಾ ಲಾಭ ಪಡೆದವರಲ್ಲಿ ಜಿಲ್ಲೆಯಲ್ಲಿ ಮಧುಗಿರಿ ಬಿಟ್ಟರೆ ಎರಡನೇ ಸ್ಥಾನ ನಮ್ಮ ತುರುವೇಕೆರೆಗೆ ಸಲ್ಲಲಿದ್ದು ತಾಲ್ಲೂಕಿನ ರೈತರು ಇದರ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಮುಂದೆ ಬರುವಂತೆ ಕರೆ ನೀಡಿದರು.
    ಡಿಸಿಸಿ ಬ್ಯಾಂಕ್ ಜಿಲ್ಲಾ ನಿರ್ದೇಶಕ ಬಿ.ಎಸ್.ದೇವರಾಜು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಷೇರುದಾರರಿಗೆ ಸಾಲ ಪತ್ರ ವಿತರಿಸಲಾಯಿತು. ಇದೇ ವೇಳೆ ಕೆ.ಎನ್.ರಾಜಣ್ಣನವರಿಗೆ ಸಂಘದ ವತಿಯಿಂದ ಅಭಿನಂದಿಸಲಾಯಿತು. ನಂತರ ಗೋಣಿತುಮಕೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡವನ್ನು ಸಹ ಉದ್ಘಾಟಿಸಲಾಯಿತು.
     ಸಮಾರಂಭದಲ್ಲಿ ತುಮಕೂರು ಶಾಸಕ ಜ್ಯೋತಿಗಣೇಶ್, ಮುಖಂಡರಾದ ಕೊಂಡಜ್ಜಿವಿಶ್ವನಾಥ್, ದುಂಡಾರೇಣುಕಪ್ಪ, ಧಾನಿಗೌಡ, ಕೊಳಾಲನಾಗರಾಜು, ಸಹಕಾರಿ ಬ್ಯಾಂಕ್‍ನ ಎಚ್.ಸಿ.ಗೌಡ, ಉಪಾಧ್ಯಕ್ಷೆ ಶ್ಯಾಮಲಶಿವಕುಮಾರ್, ಕಾವಲ್ಲಿಗೌಡ, ಬಸವರಾಜು, ವೆಂಕಟರಾಮಯ್ಯ, ಯೋಗಣ್ಣ, ತುರುವೇಕೆರೆ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಾಗರಾಜು, ಚಿ.ನಾ.ಹಳ್ಳಿ ರಾಜ್‍ಕುಮಾರ್, ಪ್ರಕಾಶ್, ಗಂಗಾಧರ್, ಶಂಕರ್ ಹೆಗಡೆ ಸೇರಿದಂತೆ ಇತರೆ ಗಣ್ಯರು, ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

Recent Articles

spot_img

Related Stories

Share via
Copy link
Powered by Social Snap