ವಲಯ ಮೇಲ್ವಿಚಾರಕನಿಂದ ಲಕ್ಷಾಂತರ ರೂ ವಂಚನೆ

ಕೊರಟಗೆರೆ

    ಸರಕಾರದಿಂದ 1ಲಕ್ಷ ಸಹಾಯಧನ ಕೂಡಿಸುವುದಾಗಿ ಮಹಿಳೆಯರಿಗೆ ನಂಬಿಸಿ ಸ್ತ್ರೀಶಕ್ತಿ ಸಂಘಗಳಿಂದ ಲಕ್ಷಾಂತರ ರೂ ಹಣ ಪಡೆದು ಕೊರಟಗೆರೆ ವಲಯ ಮೇಲ್ವಿಚಾರಕ ಎ.ಜಿ.ಮಂಜುನಾಥವಂಚಿಸಿದ್ದಾರೆ ಎಂದು ಆರೋಪಿಸಿ ಸ್ತ್ರೀಶಕ್ತಿ ಸಂಘದ ಮಹಿಳೆಯರು ಸೋಮವಾರ ತಾಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದೆ.

     ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸಂಸ್ಥೆಯ ಕೊರಟಗೆರೆ ವಲಯ ಮೇಲ್ವಿಚಾರಕ ಎ.ಜಿ.ಮಂಜುನಾಥ ತಾಲೂಕಿನ 24ಗ್ರಾಪಂ ವ್ಯಾಪ್ತಿಯ ಸ್ತ್ರೀಶಕ್ತಿ ಸಂಘಗಳಿಂದ ತಲಾ 10ಸಾವಿರ ಹಣ ಪಡೆದು ಮಹಿಳೆಯರಿಗೆ ಮೋಸ ಮಾಡಿದ್ದಾರೆ. ಈತನನ್ನು ತಕ್ಷಣ ಕೆಲಸದಿಂದ ವಜಾಗೊಳಿಸಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಸ್ತ್ರೀಶಕ್ತಿ ಸಂಘದ ಮಹಿಳೆಯರಿಗೆ ನ್ಯಾಯ ಒದಗಿಸಬೇಕು ಎಂದು ತಾಪಂ ಇಓ ಶಿವಪ್ರಕಾಶ್‍ಗೆ ಮನವಿ ಸಲ್ಲಿಸಿದ್ದಾರೆ.

      ಹಂಚಿಹಳ್ಳಿ ಗ್ರಾಪಂ ವ್ಯಾಪ್ತಿಯ ಜಿ.ನಾಗೇನಹಳ್ಳಿ ಗ್ರಾಮದ ಸದಸ್ಯೆ ಪುಷ್ಪಾವತಿ ಮಾತನಾಡಿ ನಮ್ಮ ಗ್ರಾಮದ ನಾಲ್ಕು ಸ್ತ್ರೀಶಕ್ತಿ ಸಂಘದಲ್ಲಿ 40ಜನ ಸದಸ್ಯರಿದ್ದಾರೆ. ಆಡಿಟ್, ಪುಸ್ತಕ ಮತ್ತು ಖರ್ಚಿಗಾಗಿ ವಲಯ ಮೇಲ್ವಿಚಾರಕ ನಮ್ಮಿಂದ 40ಸಾವಿರ ಹಣ ಪಡೆದಿದ್ದಾರೆ. ಇಲ್ಲಿಯವರೇಗೆ ನಮಗೆ ಸರಕಾರದ ಸಹಾಯಧನ ಬಂದಿಲ್ಲ. ಪ್ರಶ್ನಿಸಿದರೇ ಸಂಘವನ್ನು ವಜಾ ಗೊಳಿಸುವ ಬೆದರಿಕೆ ಹಾಕುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

      ಎಲೆರಾಂಪುರ ಗ್ರಾಪಂ ಸಿಂಗ್ರಿಹಳ್ಳಿ ಗ್ರಾಮದ ಶ್ರೀಲಕ್ಷ್ಮೀ ಸ್ವಸಹಾಯ ಸಂಘದ ಪ್ರತಿನಿಧಿ ಕೆಂಪಮ್ಮ ಮಾತನಾಡಿ ನಮ್ಮ ಸಂಘದಿಂದ ಮೇಲ್ವಿಚಾರಕ ಸಹಾಯಧನ ನೀಡುವ ಭರವಸೆ ನೀಡಿ 6ತಿಂಗಳ ಹಿಂದೆ 10ಸಾವಿರ ಹಣ ಪಡೆದಿದ್ದಾರೆ. ನಾವು ಪ್ರಶ್ನಿಸಿದರೇ ನಮ್ಮ ಮೇಲಾಧಿಕಾರಿ ಮತ್ತು ದಾಖಲೆಗಳಿಗೆ ಹಣ ಬೇಕಾಗಿದೆ. ಹಣ ನೀಡಿದರೇ ಸಾಲ ಮಂಜೂರು ಆಗಲಿದೆ ಇಲ್ಲದಿದ್ದರೆ ಇಲ್ಲ ಎಂದು ನಮ್ಮಿಂದ ಹಣ ಪಡೆದು ವಂಚಿಸಿದ್ದಾರೆ ಎಂದು ಹೇಳಿದರು.

       ಬುಕ್ಕಾಪಟ್ಟಣ ಗ್ರಾಪಂ ಗಟ್ಲಹಳ್ಳಿ ಗ್ರಾಮದ ವರಲಕ್ಷ್ಮೀ ಸ್ತ್ರೀಶಕ್ತಿ ಸ್ವಹಾಯ ಸಂಘದ ಸದಸ್ಯೆ ಕಾಂತಮ್ಮ ಮಾತನಾಡಿ ನಮ್ಮ ಸಂಘದಿಂದ 10ಹಣ ಪಡೆದು ಸರಕಾರದಿಂದ 75ಸಾವಿರ ಸಹಾಯಧನ ಕೊಡಿಸಿದ್ದಾರೆ. ಸಾಲಕ್ಕೆ ಮೊದಲೇ ವಲಯ ಮೇಲ್ವಿಚಾರಕ ಮಂಜುನಾಥ ಲಂಚ ಪಡೆಯುತ್ತಾರೆ. ಹಣ ನೀಡದಿದ್ದರೇ ಸಾಲ ನೀಡುವುದಿಲ್ಲ. ಸರಕಾರದ ಹಣ ನೀಡಲು ನಮ್ಮಿಂದ ಹಣ ಪಡೆಯುವುದು ಸರಿಯೇ ಯೋಚಿಸಿ ಕ್ರಮ ಕೈಗೊಳ್ಳಬೇಕು ಎಂದು ಆರೋಪ ಮಾಡಿದರು.

       ತಾಲೂಕಿನ ಬಿ.ಡಿ.ಪುರ, ನೀಲಗೊಂಡನಹಳ್ಳಿ, ಬುಕ್ಕಾಪಟ್ಟಣ, ಎಲೆರಾಂಪುರ, ಹಂಚಿಹಳ್ಳಿ, ಕೋಳಾಲ, ಹೊಳವನಹಳ್ಳಿ, ಹಂಚಿಹಳ್ಳಿ ಸೇರಿದಂತೆ 24ಗ್ರಾಪಂ ವ್ಯಾಪ್ತಿಯ 50ಕ್ಕೂ ಹೆಚ್ಚು ಸಂಘಗಳಿಂದ ಕೊರಟಗೆರೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸಂಸ್ಥೆಯ ವಲಯ ಮೇಲ್ವಿಚಾರಕನ ವಿರುದ್ದ ತಾಪಂ ಇಓ ಶಿವಪ್ರಕಾಶ್‍ಗೆ ದಾಖಲೆ ಸಮೇತ ದೂರು ನೀಡಿದ್ದಾರೆ. ಮಹಿಳೆಯರ ಆರೋಪ ಆಲಿಸಿ ಮನವಿ ಸ್ವೀಕರಿಸಿದ ಇಓ ನಮ್ಮ ಮೇಲಾಧಿಕಾರಿಗಳ ಗಮನಕ್ಕೆ ತಂದು ತನಿಖೆ ನಡೆಸಿ ತಪ್ಪಿಸ್ಥತನ ವಿರುದ್ದ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link