ಸರ್ಕಾರಿ ನೌಕರಿ ಆಸೆ ತೋರ್ಸಿ, ಲಕ್ಷಾಂತರ ವಂಚನೆ

ದಾವಣಗೆರೆ:

ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ, ಲಕ್ಷಾಂತರ ರೂಪಾಯಿಗಳನ್ನು ಪಡೆದು ಬಡಪಾಯಿಗಳನ್ನು ಟಿ.ನರಸೀಪುರ ತಾಲೂಕಿನ ಮೂವರು ಸಹೋದರರು ವಂಚಿಸಿದ್ದಾರೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‍ವಾದ)ಯ ವಿಭಾಗೀಯ ಸಂಘಟನಾ ಸಂಚಾಲಕ ಎ.ಡಿ.ಯಶವಂತಪ್ಪ ಆರೋಪಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಸೊಸಲೆ ಹೋಬಳಿ ವ್ಯಾಪ್ತಿಯ ಬೆನಕನಹಳ್ಳಿ ಗ್ರಾಮದ ನಿವಾಸಿಗಳಾದ ಬಿ.ಎಂ.ಮಹೇಶ್, ಬಿ.ಎಂ.ವಿಜಿಕುಮಾರ್ ಹಾಗೂ ನಟರಾಜ್ ಬಿ.ಎಂ. ಈ ಮೂವರು ಸಹೋದರರೇಯಾಗಿದ್ದು, ನಾವು ಸಿದ್ದರಾಮಯ್ಯನವರ ಸಂಬಂಧಿಕರು, ರಾಕೇಶ್ ಸಿದ್ದರಾಮಯ್ಯ ನಮ್ಮ ಸ್ನೇಹಿತರಾಗಿದ್ದು, ಅವರ ಮೂಲಕ ನಿಮಗೆ ಕೆಲಸ ಕೊಡಿಸುವುದಾಗಿ ಹೇಳಿ, ಒಬ್ಬೊಬ್ಬರಿಂದ 6ರಿಂದ 8 ಲಕ್ಷ ರೂ.ಗಳಂತೆ, 10 ಜನರಿಂದ ಹಣ ಪಡೆದಿದ್ದಾರೆ. ಆದರೆ, ಈಗ

ಕೆಲಸವೂ ಕೊಡಿಸಿಲ್ಲ ಹಾಗೂ ನಮ್ಮ ಹಣ ನಮಗೆ ವಾಪಾಸ್ ಕೊಡಸಲು ಸತಾಯಿಸುತ್ತಿದ್ದಾರೆಂದು ದೂರಿದರು.
ಈ ಮೂವರು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ದೊಡ್ಡ ಅರೇಹಳ್ಳಿ ಗ್ರಾಮದ ಕೆ.ವೈ.ಮಾರುತಿ, ಕುಮಾರ್.ಎನ್, ನವೀನ್, ಗದ್ದಿಗೇಶ್, ದ್ಯಾಮಪ್ಪ, ಪ್ರವೀಣ್.ಎಲ್, ಪ್ರವೀಣ್ ಜಿ.ಎಸ್, ಶಿವಕುಮಾರ್, ಮಂಜು ಗೋಣಿಗೆರೆ ಅವರಿಂದ ಸುಮಾರು 53ರಿಂದ 60 ಲಕ್ಷ ಹಣ ಹಾಗೂ ಇವರೆಲ್ಲರ ದಾಖಲಾತಿಗಳನ್ನು ಪಡೆದು, ಸೆಂಟ್ರಲ್ ಸಿಲ್ಕ್ ಬೋರ್ಡ್‍ನಲ್ಲಿ ಮೇಲ್ವೀಚಾರಕರ ಕೆಲಸ ಕೊಡಿಸುವುದಾಗಿ ಹೇಳಿದ್ದರು.

ಆದರೆ, ಈಗ ನಮ್ಮ ಮಕ್ಕಳಿಗೆ ಇತ್ತ ಕೆಲಸವೂ ಇಲ್ಲ ಹಾಗೂ ಅತ್ತ ಹಣವೂ ಇಲ್ಲವಾಗಿದೆ. ಅವರ ಊರಿಗೆ ಹೋಗಿ ನಾವು ಹಣ ಕೇಳಲು ಮುಂದಾದರೆ, ಅಲ್ಲಿಯ ಸ್ಥಳೀಯರನ್ನು ಕಟ್ಟಿಕೊಂಡು, ಪರಿಶಿಷ್ಟ ಜಾತಿಯವರಾಗಿರುವ ನಮ್ಮಗಳ ಜಾತಿ ನಿಂದಿಸಿದ್ದಾರೆ. ಆದ್ದರಿಂದ ಈ ಮೂವರನ್ನು ಜಾತಿ ನಿಂದನೆ ಕಾಯ್ದೆಯಡಿ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ನಮ್ಮಿಂದ ಪಡೆದಿರುವ ಹಣವನ್ನು ವಾಪಾಸ್ ಕೊಡಿಸಬೇಕೆಂದು ಒತ್ತಾಯಿಸಿದರು.

ಪಾಂಡವಪುರ ತಾಲೂಕಿನ ಆರೋಹಳ್ಳಿ ಗ್ರಾಮದ ಹುಚ್ಚೇಗೌಡ ಮಾತನಾಡಿ, ನಮ್ಮ ಊರಿನಲ್ಲೂ ಸಹ ಈ ಮೂವರು ಶಿಕ್ಷಣ ಇಲಾಖೆ, ವೈದ್ಯಕೀಯ ಇಲಾಖೆ, ತೋಟಗಾರಿಕೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ, 9 ಜನರಿಂದ ಅಂದಾಜು 45 ಲಕ್ಷ ಹಣ ಪಡೆದು ವಂಚಿಸಿದ್ದು, ಈ ಮೂವರು ವಂಚಕ ಸಹೋದರರನ್ನು ಬಂಧಿಸಿ, ನಮಗೆ ನಮ್ಮ ಹಣ ಕೊಡಿಸಬೇಕೆಂದು ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಸಮಿತಿಯ ಜಯಶ್ರೀ, ಪ್ರಕಾಶ್, ಭೀಮಪ್ಪ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link