ಫೋಟೋಗ್ರಾಫರ್ ಸೋಗಿನಲ್ಲಿ ಮೋಸ….!!!!

ಬೆಂಗಳೂರು

       ಪೋಟೋಗ್ರಾಫರ್ ಎಂದು ನಂಬಿಸಿ ಕ್ಯಾಮರಾಗಳನ್ನು ಬಾಡಿಗೆಗೆ ಪಡೆದು ಒಎಲ್‍ಎಕ್ಸ್‍ನಲ್ಲಿ ಹಾಕಿ ಮಾರಾಟ ಮಾಡುತ್ತಿದ್ದ ಖತರ್ನಾಕ್ ಆರೋಪಿಯನ್ನು ಬಂಧಿಸಿ 33 ಲಕ್ಷ ರೂ. ಮೌಲ್ಯದ 9 ಕ್ಯಾಮರ, 14 ಲೆನ್ಸ್‍ಗಳನ್ನು ವಶಪಡಿಸಿಕೊಳ್ಳುವಲ್ಲಿ ಹೈಗ್ರೌಂಡ್ ಪೊಲೀಸರು ಯಶಸ್ವಿಯಾಗಿದ್ದಾರೆ

       ವಿಜಯನಗರದ ಪೈಪ್‍ಲೈನ್‍ನ ಅಶ್ಪಕ್‍ಖಾನ್(25) ಬಂಧಿತ ಆರೋಪಿಯಾಗಿದ್ದಾನೆ.ಬಂಧಿತನಿಂದ ಕೆನಾನ್ ಕಂಪನಿಯ 5ಡಿ 9 ಕ್ಯಾಮರಾಗಳು,ದುಬಾರಿ ಬೆಲೆಯ 14 ಲೆನ್ಸ್‍ಗಳು ಸೇರಿ 33 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

       ಆರೋಪಿಯು ನಾನು ವೃತ್ತಿಪರ ಛಾಯಾಗ್ರಾಹಕನೆಂದು ಹೇಳಿಕೊಂಡು ನನಗೆ 5ಡಿ ಕ್ಯಾಮರಾ ಲೆನ್ಸ್‍ಗಳ ಅವಶ್ಯಕತೆ ಇದೆ ಎಂದು ಗುರುತಿನ ಚೀಟಿ ನೀಡಿ ಕ್ಯಾಮರಾಗಳನ್ನು ಮೂರ್ನಾಲ್ಕು ದಿನಗಳ ಮಟ್ಟಿಗೆ ಬಾಡಿಗೆ ಪಡೆದು ಅವುಗಳನ್ನು ಒಎಲ್‍ಎಕ್ಸ್‍ನಲ್ಲಿ ಪೋಸ್ಟ್ ಮಾಡಿ ಮಾರಾಟ ಮಾಡಿ ಮೋಜು ಮಾಡುತ್ತಿದ್ದ.

        ಆರೋಪಿಯ ಕೃತ್ಯದ ಸಂಬಂಧ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಮನೋಹರ್ ಎನ್ನುವರು ನೀಡಿದ ದೂರು ಆಧರಿಸಿ ಪ್ರಕರಣವನ್ನು ಬೆನ್ನತ್ತಿದ ಇನ್ಸ್‍ಪೆಕ್ಟರ್ ಸಾದಿಕ್ ಪಾಷ ನೇತೃತ್ವದ ಸಿಬ್ಬಂದಿ, ಆರೋಪಿಯನ್ನು ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ, ಬಂಧಿಸುವಲ್ಲಿ ಯಶಸ್ವಿಯಾಗಿದೆ.

        ಆರೋಪಿಯು ಅನ್ನಪೂರ್ಣೇಶ್ವರಿ ನಗರದ ಪ್ರಮೋದ್ ಎಂಬುವವರ ಕ್ಯಾಮರ ಅಂಗಡಿಯಿಂದ 4 ಲಕ್ಷ ರೂ. ಮೌಲ್ಯದ ಮಾರ್ಕ್ ಫೋರ್ 5ಡಿ ಕೆನಾನ್ ಕ್ಯಾಮರ ಹಾಗೂ 2 ಲೆನ್ಸ್‍ಗಳನ್ನು ಬಾಡಿಗೆಗೆ ತೆಗೆದುಕೊಂಡು ಅವುಗಳನ್ನು ಮಾರಾಟ ಮಾಡಿ ವಂಚನೆ ನಡೆಸಿದ್ದ.ಜಯನಗರದಲ್ಲಿ ಪ್ರವೀಣ್ ಶೆಟ್ಟಿ ಎಂಬುವವರ ಕ್ಯಾಮರ ಅಂಗಡಿಯಿಂದ 4 ಲಕ್ಷ ರೂ. ಮೌಲ್ಯದ 5ಡಿ ಕೆನಾನ್ ಕ್ಯಾಮರ, 2ಲೆನ್ಸ್‍ಗಳನ್ನು ಬಾಡಿಗೆಗೆ ಪಡೆದುಕೊಂಡು ಒಎಲ್‍ಎಕ್ಸ್‍ನಲ್ಲಿ ಮಾರಾಟ ಮಾಡಿದ್ದ.

       ಬನಶಂಕರಿಯ ಇಟ್ಟಮಡುವಿನ ಮಂಜುನಾಥ್ ಎಂಬುವವರಿಂದ 4 ಲಕ್ಷ ಮೌಲ್ಯದ ಮಾರ್ಕ್ ಫೋರ್ 5ಡಿ ಕ್ಯಾಮರ, ಲೆನ್ಸ್‍ಗಳು, ಸಿ.ಕೆ. ಅಚ್ಚುಕಟ್ಟುವಿನಲ್ಲಿ 4 ಲಕ್ಷ ರೂ. ಮೌಲ್ಯದ ಕೆನಾನ್ ಕ್ಯಾಮರ, ಲೆನ್ಸ್‍ಗಳು, ಅಶೋಕ ನಗರದಲ್ಲಿ 4 ಲಕ್ಷ ರೂ. ಮೌಲ್ಯದ ಕ್ಯಾಮರ ಹಾಗೂ ಲೆನ್ಸ್‍ಗಳನ್ನು ಬಾಡಿಗೆ ಪಡೆದು ಮಾರಾಟ ಮಾಡಿ ವಂಚನೆ ನಡೆಸಿದ್ದ.

       ವಿಜಯನಗರದ ಧನುಷ್ ಕ್ಯಾಮರ ಅಂಗಡಿಯಿಂದ 5.5 ಲಕ್ಷ ರೂ. ಮೌಲ್ಯದ 2 ಕೆನಾನ್ ಕ್ಯಾಮರಾಗಳು, 1 ಲೆನ್ಸ್ ಹಾಗೂ ಹೈಗ್ರೌಂಡ್ಸ್‍ನ ಮನೋಹರ್ ಎಂಬುವವರ ಅಂಗಡಿಯಿಂದ 7.5 ಲಕ್ಷ ರೂ. ಮೌಲ್ಯದ 2 ಕ್ಯಾಮರಾಗಳು, 2 ಲೆನ್ಸ್‍ಗಳನ್ನು ಬಾಡಿಗೆಗೆ ಪಡೆದು ಒಎಲ್‍ಎಕ್ಸ್‍ನಲ್ಲಿ ಮಾರಾಟ ಮಾಡಿರುವುದನ್ನು ವಿಚಾರಣೆಯ ವೇಳೆ ಆರೋಪಿಯು ಒಪ್ಪಿಕೊಂಡಿದ್ದಾನೆ.

        ಒಎಲ್‍ಎಕ್ಸ್‍ನಲ್ಲಿ ನಗರದ ಶಶಾಂಕ್ ಹಾಗೂ ಹೈದರಾಬಾದ್‍ನ ಮಸೂದ್ ಆಸೀಫ್ ಎನ್ನುವವರಿಗೆ ತಾನು ವಿಜಯನಗರದಲ್ಲಿ ಪೋಟೋ ಸ್ಟುಡಿಯೋ ಹೊಂದಿದ್ದು, ತಂಗಿಯ ಮದುವೆ ಸಲುವಾಗಿ ಹಣಕಾಸಿನ ಅವಶ್ಯಕತೆ ಇರುವುದರಿಂದ ಕ್ಯಾಮರಾಗಳನ್ನು ಮಾರಾಟ ಮಾಡುತ್ತಿರುವುದಾಗಿ ನಂಬಿಸಿ, ಮಾರಾಟ ಮಾಡಿದ್ದ ಎಂದು ಡಿಸಿಪಿ ದೇವರಾಜ್ ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ