ಹೊನ್ನಾಳಿ:
ಉತ್ತಮ ಜೀವನ ಶೈಲಿಯಿಂದ ರೋಗಗಳಿಂದ ದೂರ ಇರಬಹುದು ಎಂದು ಕತ್ತಿಗೆ ಗ್ರಾಪಂ ಸದಸ್ಯ ಮಾದೇನಹಳ್ಳಿ ಕೆ.ಇ. ನಾಗರಾಜ್ ಹೇಳಿದರು.
ತಾಲೂಕಿನ ಮಾದೇನಹಳ್ಳಿ ಗ್ರಾಮದ ಶ್ರೀ ತಿರುಮಲೇಶ್ವರ ಸಮುದಾಯ ಭವನದಲ್ಲಿ ದಾವಣಗೆರೆ ಜಿಪಂ, ಜಿಲ್ಲಾ ಆಯುಷ್ ಇಲಾಖೆಗಳ ಸಹಯೋಗದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಪರಿಶಿಷ್ಟ ಜಾತಿಯವರಿಗೆ ಶುಕ್ರವಾರ ಹಮ್ಮಿಕೊಂಡ ಉಚಿತ ಆಯುಷ್ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಸ್ವಚ್ಛತೆ ಇದ್ದಲ್ಲಿ ದೇವರು ನೆಲೆಸುತ್ತಾನೆ ಎಂಬ ಮಾತಿದೆ. ಅದರಂತೆ, ಸ್ವಚ್ಛತೆ ಇರುವೆಡೆ ಕಾಯಿಲೆಗಳೂ ಸುಳಿಯುವುದಿಲ್ಲ. ಎಲ್ಲರೂ ಶುದ್ಧ ನೀರನ್ನು ಕುಡಿಯುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ನಮ್ಮ ಹಿರಿಯರು ಎಲ್ಲಾ ಕಾಯಿಲೆಗಳಿಗೂ ಮನೆ ಮದ್ದು, ನಾಟಿ ಔಷಧ, ಆಯುರ್ವೇದ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಉತ್ತಮ ಆಹಾರ ಪದ್ಧತಿಯಿಂದ ತಮ್ಮ ಆರೋಗ್ಯವನ್ನು ಸಂರಕ್ಷಣೆ ಮಾಡಿಕೊಂಡಿದ್ದರು. ಅವರ ಹಾದಿಯಲ್ಲೇ ನಾವೂ ನಡೆಯೋಣ ಎಂದು ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಏರ್ಪಡಿಸಿರುವ ಈ ಶಿಬಿರವನ್ನು ಎಲ್ಲರೂ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ಕೆ. ಗುಣಕರ್ ಮಾತನಾಡಿ, ಅಲೋಪಥಿ ವೈದ್ಯ ಪದ್ಧತಿಯಲ್ಲಿ ಚಿಕಿತ್ಸೆ ಪಡೆದರೆ ರೋಗ ಬೇಗ ವಾಸಿಯಾಗುತ್ತದೆ. ಆದರೆ, ರೋಗಕ್ಕೆ ಶಾಶ್ವತ ಚಿಕಿತ್ಸೆ ಲಭಿಸುವುದಿಲ್ಲ. ಆಯುರ್ವೇದ ವೈದ್ಯ ಪದ್ಧತಿಯಲ್ಲಿ ರೋಗ ವಾಸಿಯಾಗುವುದು ಸ್ವಲ್ಪ ತಡವಾದರೂ ರೋಗಗಳಿಂದ ಶಾಶ್ವತ ಮುಕ್ತಿ ಹೊಂದಬಹುದು ಎಂದು ತಿಳಿಸಿದರು.
ತಾಪಂ ಸದಸ್ಯೆ ಗಿರಿಜಮ್ಮ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿದರು.
ಕತ್ತಿಗೆ ಗ್ರಾಪಂ ಸದಸ್ಯ ಕುಬೇರಪ್ಪ, ಸಂಸ್ಥೆಯ ಮೇಲ್ವಿಚಾರಕ ಎಸ್. ನಾಗರಾಜ್, ಸೇವಾ ಪ್ರತಿನಿಧಿ ಕಸ್ತೂರಿ ಮತ್ತಿತರರು ಮಾತನಾಡಿದರು. ಕತ್ತಿಗೆ ಗ್ರಾಪಂ ಅಧ್ಯಕ್ಷೆ ಕವಿತಾ ಅಧ್ಯಕ್ಷತೆ ವಹಿಸಿದ್ದರು.ಕತ್ತಿಗೆ ಗ್ರಾಪಂ ಸದಸ್ಯೆಯರಾದ ರಾಜೇಶ್ವರಮ್ಮ, ಶೈಲಜಾ, ಮಮತಾ, ನಿವೃತ್ತ ಶಿಕ್ಷಕ ಬಸವರಾಜಪ್ಪ, ಶ್ರೀ ತಿರುಮಲೇಶ್ವರ ಸಮುದಾಯ ಭವನದ ಅಧ್ಯಕ್ಷ ಬಸವರಾಜಪ್ಪ, ಸಿದ್ಧಮ್ಮ, ಶ್ರೀನಿವಾಸ್ ಕಲ್ಮನಿ ಮತ್ತಿತರರು ಉಪಸ್ಥಿತರಿದ್ದರು.
ಡಾ. ರವಿ ಗಂಗೂರು, ಡಾ. ಯಶವಂತ್, ಡಾ. ರೇವ್ಯಾನಾಯ್ಕ್, ಡಾ. ರಾಜೇಶ್, ಡಾ. ಪ್ರೀತಿ, ಡಾ. ಸಿದ್ಧೇಶ್, ಡಾ. ಲಿಂಗರಾಜೇಂದ್ರ ಮತ್ತಿತರ ವೈದ್ಯರು ಆರೋಗ್ಯ ತಪಾಸಣೆ ನಡೆಸಿದರು. ದಾವಣಗೆರೆ ಜಿಪಂ, ಜಿಲ್ಲಾ ಆಯುಷ್ ಇಲಾಖೆಗಳ ಸಹಯೋಗದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಶಿಬಿರವನ್ನು ಆಯೋಜಿಸಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ