ಹೊನ್ನಾಳಿ:
ಆಯುರ್ವೇದ ಚಿಕಿತ್ಸಾ ಪದ್ಧತಿಯಿಂದ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯ ಎಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಕೆ. ಗುಣಕರ್ ಹೇಳಿದರು.
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ವತಿಯಿಂದ ತಾಲೂಕಿನ ಮಾಸಡಿ ವಲಯದ ಚಿಕ್ಕಗೋಣಿಗೆರೆ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡ “ಆಯುಷ್ ಉಚಿತ ಆರೋಗ್ಯ ಶಿಬಿರ”ದಲ್ಲಿ ಆಯುರ್ವೇದ ವೈದ್ಯ ಪದ್ಧತಿಯ ಬಗ್ಗೆ ಜನರಿಗೆ ಮಾಹಿತಿ ನೀಡಿ ಅವರು ಮಾತನಾಡಿದರು.
ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಮೊದಲು ರೋಗದ ಮೂಲವನ್ನು ಪತ್ತೆ ಮಾಡಲಾಗುತ್ತದೆ. ಆ ಬಳಿಕ ರೋಗಕ್ಕೆ ಚಿಕಿತ್ಸೆ ಪ್ರಾರಂಭಿಸಲಾಗುತ್ತದೆ. ಈ ಕಾರಣಕ್ಕಾಗಿ ಆಯುರ್ವೇದ ವೈದ್ಯ ಪದ್ಧತಿಯಲ್ಲಿ ರೋಗ ವಾಸಿಯಾಗಲು ಹೆಚ್ಚಿನ ಸಮಯ ಬೇಕಾಗುತ್ತದೆ. ಹಾಗಾಗಿ, ಈ ಪದ್ಧತಿಯಲ್ಲಿ ಚಿಕಿತ್ಸೆ ಪಡೆಯಲು ಜನರಿಗೆ ತಾಳ್ಮೆ ಅಗತ್ಯ ಎಂದು ತಿಳಿಸಿದರು.ಗ್ರಾಪಂ ಸದಸ್ಯೆ ಪದ್ಮಲತಾ ನವೀನ್‍ಕುಮಾರ್ ಶಿಬಿರ ಉದ್ಘಾಟಿಸಿ ಮಾತನಾಡಿದರು. ಗ್ರಾಪಂ ಸದಸ್ಯೆ ರೂಪಾ ತಿಮ್ಮೇಶ್ ಅಧ್ಯಕ್ಷತೆ ವಹಿಸಿದ್ದರು.
ವೈದ್ಯಾಧಿಕಾರಿ ಡಾ. ಯಶವಂತ್ ಆರೋಗ್ಯ ತಪಾಸಣೆ ನಡೆಸಿದರು. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಮಾಸಡಿ ವಲಯದ ಮೇಲ್ವಿಚಾರಕ ದಿನೇಶ್, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಯುಷ್ ಉಚಿತ ಆರೋಗ್ಯ ಶಿಬಿರದ ಪ್ರಯೋಜನ ಪಡೆದುಕೊಂಡರು.