ತುಮಕೂರು
ರೋಟರಿ ಸಂಸ್ಥೆ ತುಮಕೂರು ಪೂರ್ವ, ಬೆಂಗಳೂರಿನ ಇಂದಿರಾನಗರ್ ರೋಟರಿ ಕ್ಲಬ್ ಹಾಗೂ ಗ್ಲೋಬಲ್ ಐ ಫೌಂಡೇಶನ್‍ವತಿಯಿಂದ ತುಮಕೂರಿನ ಟಿಎಚ್‍ಎಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನೇತ್ರದೀಪ್ ತುಮಕೂರು ಕಣ್ಣಿನ ಆಸ್ಪತ್ರೆಯನ್ನು ಉದ್ಘಾಟನಾ ಸಮಾರಂಭ ವನ್ನು ಜೂ.22ರಂದು ಆಯೋಜಿಸಲಾಗಿದೆ ಎಂದು ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ 3190ದ ನಿಕಟ ಪೂರ್ವ ರಾಜ್ಯಪಾಲರಾದ ಆಶಾಪ್ರಸನ್ನಕುಮಾರ್ ತಿಳಿಸಿದರು.
ನಗರದ ಆಸ್ಪತ್ರೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನೇತ್ರದೀಪ್ ಕಣ್ಣಿನ ಆಸ್ಪತ್ರೆ ರೋಟರಿಯ ಯೋಜನೆಯಾಗಿದ್ದು, 3.25 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆಯನ್ನು ಪ್ರಾರಂಭ ಮಾಡಲಾಗುತ್ತಿದೆ. ರೋಟರಿ ತುಮಕೂರು ಪೂರ್ವ ಘಟಕದಿಂದ ಕಟ್ಟಡ ಮತ್ತು ಒಳಾಂಗಣ ವಿನ್ಯಾಸ ಮತ್ತು ಸಂಪೂರ್ಣ ವ್ಯವಸ್ಥೆ ಒದಗಿಸಿದ್ದು, ಬೆಂಗಳೂರಿನ ಇಂದಿರಾನಗರದವರು ಆಸ್ಪತ್ರೆಯ ಎಲ್ಲಾ ಯಂತ್ರೋಪಕರಣಗಳನ್ನು ಒದಗಿಸಿದ್ದಾರೆ ಎಂದರು.
ರೋಟರಿ ಅಂತಾರಾಷ್ಟ್ರೀಯ ಸಂಸ್ಥೆ, ರೋಟರಿ ಜಿಲ್ಲೆ 3190, ಅಮೆರಿಕಾದ ರೋಟರಿ ಜಿಲ್ಲೆ 5320 ಹಾಗೂ ರೋಟರಿ ಫುಲ್ಲರ್‍ಟನ್ ಇವರು ಈ ಯೋಜನೆಯಲ್ಲಿ ಸಹಭಾಗಿಯಾಗಿದ್ದಾರೆ. ಜನಸ್ತು ಟ್ರಸ್ಟ್‍ನ ರೋ.ಆಶಾಪ್ರಸನ್ನಕುಮಾರ್ ಮತ್ತು ರೋ, ಪ್ರಸನ್ನಕುಮಾರ್, ಇಂದಿರಾನಗರದ ರೋ.ಚಂದ್ರಶೇಖರ್ ವಿಶ್ವನಾಥ್ ಮತ್ತು ರೋ,ಸಂಜಯ್ ಶ್ರೀವತ್ಸವ್ ಹಾಗೂ ಅಮೆರಿಕಾದ ಪ್ರಗತಿ ಫೌಂಡೇಶನ್‍ನಿಂದ ಧನ ಸಹಾಯ ದೊರೆತಿದೆ.
ಬೆಂಗಳೂರಿನ ಎನ್‍ಜಿಒ ಸಂಸ್ಥೆಯಾದ ಗ್ಲೋಬ್ ಐ ಫೌಂಡೇಶನ್ ನವರು ಆಸ್ಪತ್ರೆಯಲ್ಲಿ ನಿರ್ವಹಣೆ, ಚಿಕಿತ್ಸೆ ಹಾಗೂ ಜಿಲ್ಲೆಯ ಪ್ರತಿಯೊಂದು ತಾಲ್ಲೂಕಿನಲ್ಲಿ ಕಣ್ಣಿನ ತಪಾಸಣಾ ಶಿಬಿರವನ್ನು ಏರ್ಪಡಿಸಿ ಫಲಾನುಭವಿಗಳನ್ನು ಗುರುತಿಸಿ ಆಸ್ಪತ್ರೆಗೆ ಕರೆತಂದು ಉಚಿತವಾಗಿ ಸೂಕ್ತ ತಪಾಸಣೆ, ಚಿಕಿತ್ಸೆ ಹಾಗೂ ಅಗತ್ಯಬಿದ್ದಲ್ಲಿ ಶಸ್ತ್ರಚಿಕಿತ್ಸೆಯನ್ನು ಮಾಡಲಾಗುವುದು ಎಂದು ತಿಳಿಸಿದರು.
ಆಸ್ಪತ್ರೆಯಲ್ಲಿ ಕ್ಯಾಟರಾಕ್ಟ್, ಗ್ಲಿಕೋಮಾ, ಡಯಾಬಿಟಿಕ್ ರೆಟಿನೋಪಥಿ, ಕಾರ್ನಿಯಲ್ ಕುರುಡುತನ, ರಿಫ್ರಾಕ್ಟೀವ್ ದೋಷ ಇವುಗಳಿಗೆ ಸಂಬಂಧಿಸಿದ ಸೂಕ್ತ ತಪಾಸಣೆ, ಚಿಕಿತ್ಸೆ ಹಾಗೂ ಅಗತ್ಯಬಿದ್ದಲ್ಲಿ ಶಸ್ತ್ರಚಿಕಿತ್ಸೆ ಉಚಿತವಾಗಿ ಅಥವಾ ಕೇವಲ 40% ವೆಚ್ಚದಲ್ಲಿ ಸೂಕ್ತ ಚಿಕತ್ಸೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರೋಟರಿ ತುಮಕೂರು ಪೂರ್ವದ ಅಧ್ಯಕ್ಷ ವಿಜಯ್‍ಕುಮಾರ್, ಭಾವಿ ಅಧ್ಯಕ್ಷ ಸೋಮಶೇಖರ್, ರವಿಶಂಕರ್, ಡಿ.ಆರ್.ಮಲ್ಲೇಶಯ್ಯ, ನಾಗರಾಜಶೆಟ್ಟರು ಇತರರು ಹಾಜರಿದ್ದರು.