ಚಳ್ಳಕೆರೆ
ತಾಲ್ಲೂಕಿನ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋಸೇದೇವರಹಟ್ಟಿಯಲ್ಲಿರುವ ದೇವರ ಎತ್ತುಗಳಿಗೆ ಮೇವಿನ ಕೊರತೆಯ ಬಗ್ಗೆ ಈಗಾಗಲೇ ವರದಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಹಲವಾರು ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಕನ್ನಡ ಪರ ಸಂಘಟನೆಗಳು ಉಚಿತ ಮೇವು ನೀಡುವ ಮೂಲಕ ಜಾನುವಾರುಗಳ ರಕ್ಷಣೆಗೆ ಮುಂದಾಗಿರುವುದು ಹೆಮ್ಮೆಯ ವಿಷಯವೆಂದು ಜಯಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಚಂದ್ರಣ್ಣ ತಿಳಿಸಿದರು.
ಅವರು, ಸೋಮವಾರ ತಮ್ಮ ಸಂಘಟನೆಯಿಂದ ಒಂದು ಲೋಡ್ ಉಚಿತ ಮೇವನ್ನು ದೇವರ ಎತ್ತುಗಳಿಗೆ ವಿತರಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಮಳೆ ವೈಪಲ್ಯದ ಹಿನ್ನೆಲೆಯಲ್ಲಿ ದೇವರ ಎತ್ತುಗಳು ಮೇವಿನಲ್ಲದೆ ಪರದಾಡುವ ಸ್ಥಿತಿಯನ್ನು ಅರಿತ ಕೂಡಲೇ ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈರವರ ಮಾರ್ಗದರ್ಶನದಲ್ಲಿ ಒಂದು ಲೋಡ್ ಮೇವನ್ನು ಇಲ್ಲಿಗೆ ತಂದು ಜಾನುವಾರುಗಳಿಗೆ ವಿತರಣೆ ಮಾಡಲಾಗಿದೆ. ಈಗಾಗಲೇ ಕೆಲವು ಸಂಘಟನೆಗಳು ಈ ಕಾರ್ಯವನ್ನು ಮಾಡಿದ್ದು, ಅವರಿಗೂ ಸಹ ಅಭಿನಂದನೆಗಳನ್ನು ಸಲ್ಲಿಸಿದರು. ದೇವರ ಹೆಸರಿನಲ್ಲಿರುವ ಜಾನುವಾರುಗಳು ಉಪವಾಸದಿಂದ ನರಳುವ ಸುದ್ದಿ ಅತ್ಯಂತ ನೋವಿನ ಸಂಗತಿಯಾಗಿದೆ ಎಂದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ ಮಾತನಾಡಿ, ಕಳೆದ ಹಲವಾರು ವರ್ಷಗಳ ಮಳೆ ವೈಪಲ್ಯದ ಬಗ್ಗೆ ಜಿಲ್ಲಾ ಹಾಗೂ ತಾಲ್ಲೂಕು ಆಡಳಿತಕ್ಕೆ ಸ್ಪಷ್ಟ ವಾಸ್ತವ ಸ್ಥಿತಿ ಅರಿವಿದ್ದರೂ ಜಾನುವಾರುಗಳಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಸೌಲಭ್ಯವನ್ನು ಕಲ್ಪಿಸಬೇಕಿತ್ತು. ಇತ್ತೀಚಿನ ದಿನಗಳಲ್ಲಿ ತಾಲ್ಲೂಕು ಆಡಳಿತ ಸ್ವಲ್ಪ ಭಾಗದ ಮೇವು ವಿತರಿಸಿ ಸಹಕರಿಸಿದ್ದು, ಮುಂದಿನ ದಿನಗಳಲ್ಲೂ ಸಹ ಜಾನುವಾರುಗಳ ಸಂರಕ್ಷಣೆಗೆ ಸರ್ಕಾರ ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ರಾಜೇಂದ್ರ, ಜಿಲ್ಲಾ ಉಪಾಧ್ಯಕ್ಷ ಮಂಜುನಾಥಸೇನ್, ಸಿದ್ದೇಶ್, ತಾಲ್ಲೂಕು ಅಧ್ಯಕ್ಷ ಬಿ.ಪ್ರಶಾಂತ್‍ನಾಯಕ, ಚಿತ್ರದುರ್ಗ ತಾಲ್ಲೂಕು ಅಧ್ಯಕ್ಷ ಸಂತೋಷ್ ಮುಂತಾದವರು ಮೇವು ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.