ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ

ಹೊನ್ನಾಳಿ:

         ಆರೋಗ್ಯಕ್ಕಿಂತ ಮಿಗಿಲಾದ ಸಂಪತ್ತು ಯಾವುದೂ ಇಲ್ಲ. ಮನುಷ್ಯನಿಗೆ ಆರೋಗ್ಯವೇ ನಿಜವಾದ ಭಾಗ್ಯ ಎಂದು ಸಾಯಿ ಗುರುಕುಲ ಸಿಬಿಎಸ್‍ಇ ವಸತಿಯುತ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಜಿ. ಮರಿಗೌಡ ಹೇಳಿದರು.

         ತಾಲೂಕಿನ ಎಚ್. ಕಡದಕಟ್ಟೆಯ ಸಾಯಿ ಗುರುಕುಲ ಸಿಬಿಎಸ್‍ಇ ವಸತಿಯುತ ವಿದ್ಯಾ ಸಂಸ್ಥೆಯಲ್ಲಿ ಬುಧವಾರ ಸಂಸ್ಥೆಯ ದಶಮಾನೋತ್ಸವ ಸಮಾರಂಭದ ಪ್ರಯುಕ್ತ ಹಮ್ಮಿಕೊಂಡ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

         ಮನುಷ್ಯ ತಾನು ಸೇವಿಸುವ ಆಹಾರದ ಬಗ್ಗೆ ಜಾಗರೂಕನಾಗಿರಬೇಕು. ಸಾಧ್ಯವಾದಷ್ಟು ಸೊಪ್ಪು-ತರಕಾರಿಗಳನ್ನು ಆಹಾರದಲ್ಲಿ ಹೆಚ್ಚಾಗಿ ಬಳಸಬೇಕು. ತರಕಾರಿಗಳನ್ನು ಹಸಿಯಾಗಿ ಬಳಸಿದರೆ ಇನ್ನೂ ಒಳ್ಳೆಯದು. ಜಿಡ್ಡಿನ ಅಂಶ ಇರುವ ಆಹಾರ ಪದಾರ್ಥಗಳನ್ನು ವರ್ಜಿಸಬೇಕು. ಕನಿಷ್ಟ ಪಕ್ಷ ವರ್ಷಕ್ಕೆ ಒಮ್ಮೆ ವೈದ್ಯರನ್ನು ಸಂಪರ್ಕಿಸಿ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು. ಪ್ರತಿ ದಿನ ನಿಯಮಿತವಾಗಿ ಸರಳ ವ್ಯಾಯಾಮ ಮಾಡಬೇಕು. ಯೋಗ, ಧ್ಯಾನ ಮತ್ತಿತರ ಚಟುವಟಿಕೆಗಳಲ್ಲಿ ತೊಡಗಬೇಕು ಎಂದು ಸಲಹೆ ನೀಡಿದರು.

         ವಿದ್ಯಾ ಸಂಸ್ಥೆಯ ನಿರ್ದೇಶಕ ಡಿ.ಎಸ್. ಪ್ರದೀಪ್ ಮಾತನಾಡಿ, ಸದಾ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುವತ್ತ ಆಸ್ಥೆ ಹೊಂದಿರುವ ಸಾಯಿ ಗುರುಕುಲ ಚಾರಿಟೇಬಲ್ ಟ್ರಸ್ಟ್ ಸಾರ್ವಜನಿಕರಿಗಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಂಡಿದೆ. ಶಿವಮೊಗ್ಗದ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ತಜ್ಞ ವೈದ್ಯರು ಹಾಗೂ ಶಿವಮೊಗ್ಗದ ಮಿಡ್-ಟೌನ್ ರೋಟರಿ ಚಾರಿಟಿ ಫೌಂಡೇಷನ್‍ನ ಸ್ವಯಂ ಸೇವಕರು ಇದರಲ್ಲಿ ಪಾಲ್ಗೊಂಡಿದ್ದಾರೆ. ಇದನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು.

        ಸಂಸ್ಥೆಯ ವಿದ್ಯಾರ್ಥಿಗಳ ಪೋಷಕರು ಹಾಗೂ ತಾಲೂಕಿನ ಜನತೆ ಇಂಥ ಶಿಬಿರಗಳಲ್ಲಿ ಭಾಗವಹಿಸಬೇಕು. ಸಾರ್ವಜನಿಕರ ಹಿತದೃಷ್ಟಿಯಿಂದ ರಕ್ತದಾನ ಶಿಬಿರವನ್ನೂ ಏರ್ಪಡಿಸಲಾಗಿದೆ. ಅಪಘಾತಗಳಲ್ಲಿ ಗಾಯಗೊಂಡವರಿಗೆ, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ರಕ್ತದ ಅವಶ್ಯಕತೆ ಇರುತ್ತದೆ. ಆದ್ದರಿಂದ, ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುವ ಮೂಲಕ ಅಮೂಲ್ಯ ಜೀವಗಳನ್ನು ಸಂರಕ್ಷಿಸಲು ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ತಿಳಿಸಿದರು.

        ಸಂಸ್ಥೆಯ ನಿರ್ದೇಶಕರಾದ ಡಿ.ಎಸ್. ಅರುಣ್, ಸೋಮಪ್ಪ, ಆಡಳಿತಾಧಿಕಾರಿ ದಯಾನಂದಪ್ರಭು, ಪ್ರಾಂಶುಪಾಲ ಸಿ.ಜಿ. ಸುರೇಂದ್ರ, ಉಪ ಪ್ರಾಂಶುಪಾಲ ಇಸ್ಮಾಯಿಲ್, ಶಿಕ್ಷಣ ಸಂಯೋಜಕ ಹರೀಶ್, ಎಲ್ಲಾ ಶಿಕ್ಷಕರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಸುಮಾರು 500ಕ್ಕೂ ಅಧಿಕ ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link