ಆರೋಗ್ಯ ಕರ್ನಾಟಕ ಯೋಜನೆಯಡಿ ಉಚಿತ ಚಿಕಿತ್ಸೆ

ಚಿತ್ರದುರ್ಗ :

        ಬಡವರ ಸಾರ್ವತ್ರಿಕ ಆರೋಗ್ಯ ರಕ್ಷಣೆಗಾಗಿ ಸರ್ಕಾರದ ಆರೋಗ್ಯ ಇಲಾಖೆಯಿಂದ ಆಯುಷ್ಮಾನ್ ಭಾರತ, ಅರೋಗ್ಯ ಕರ್ನಾಟಕ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಸಾರ್ವಜನಿಕರಿಗೆ ಉಚಿತವಾಗಿ ಚಿಕಿತ್ಸೆ ದೊರೆಯುವ ಮಹತ್ವದ ಯೋಜನೆ ಇದಾಗಿದೆ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಹೇಳಿದರು.

         ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಿತ್ರದುರ್ಗ, ಗ್ರಾಮ ಪಂಚಾಯ್ತಿ ಅನ್ನೇಹಾಳ್ ಮತ್ತು ಹ್ಯಾಂಡ್ಸ್ ತರಬೇತಿ ಸಂಸ್ಥೆಯವರ ಸಹಯೋಗದೊಂದಿಗೆ ಅನ್ನೇಹಾಳ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಕ್ಕೇಹರಿವು ಗ್ರಾಮದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

         ಉದ್ಯೋಗ ನಿರ್ವಹಣೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಪ್ರಮುಖ ಅಂಶವಾಗಿದೆ. ಸಮರ್ಥವಾಗಿ ಕೆಲಸಗಳನ್ನು ನಿರ್ವಹಿಸಲು ಆರೋಗ್ಯವಂತರಾಗಿರಲೇಬೇಕು. ಇದರಿಂದ ದುಡಿಮೆ ಮಾಡುವ ಅವಧಿಯ ಸಂಪೂರ್ಣ ಉಪಯೋಗವಾಗಿ, ಗುಣಾತ್ಮಕ ಮತ್ತು ಉತ್ಪಾದಿತ ಕೆಲಸಗಳಾಗುತ್ತವೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯಿಂದ ಆಯುಷ್ಮಾನ್ ಭಾರತ, ಅರೋಗ್ಯ ಕರ್ನಾಟಕ ಯೋಜನೆಗಳ ಉಪಯೋಗ ಪಡೆದುಕೊಳ್ಳಬೇಕು.

        ಆಯಷ್ಮಾನ್ ಭಾರತ ಯೋಜನೆಯು ಒಂದು ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಾಗಿದ್ದು, ಗ್ರಾಮೀಣ ಬಡ ಕುಟುಂಬಗಳಿಗೆ ನಗರವಾಸಿ ಬಡ ಕುಟುಂಬಗಳಿಗೆ ಆರ್ಥಿಕ ಸಾಮಾಜಿಕ ಜಾತಿಗಣತಿ ಆಧಾರದ ಮೇಲೆ ಈ ಹಿಂದೆ ಆರ್.ಎಸ್.ಬಿ.ವೈ. ಯೋಜನೆಯ ಎಲ್ಲಾ ಫಲಾನುಭವಿಗಳಿಗೆ ಸದಸ್ಯರ ಮಿತಿಯಿಲ್ಲದೇ ಕುಟುಂಬದ ಎಲ್ಲಾ ಸದಸ್ಯರಿಗೆ ರೂ.5.00 ಲಕ್ಷಗಳ ತನಕ ಪ್ರಾಥಮಿಕ, ದ್ವಿತೀಯ ಮತ್ತು ತೃತೀಯ ಹಂತದ ಚಿಕಿತ್ಸಾ ವೆಚ್ಚವನ್ನು ಭರಿಸುವ ಯೋಜನೆಯಾಗಿದೆ.

         ಆರೋಗ್ಯ ಕರ್ನಾಟಕ ಯೋಜನೆಯು ರಾಜ್ಯದ ಎಲ್ಲಾ ನಿವಾಸಿಗಳಿಗೆ ಸಾರ್ವತ್ರಿಕ ಆರೋಗ್ಯ ರಕ್ಷಣೆ ಒದಗಿಸುವ ವಿಶಿಷ್ಠ ಯೋಜನೆಯಾಗಿದೆ. 5 ಸದಸ್ಯರ ಪ್ರತಿ ಕುಟುಂಬಕ್ಕೆ ವಾರ್ಷಿಕ ರೂ.30,000/-ದ ವರೆಗೆ ದ್ವಿತೀಯ ಹಂತದ ಚಿಕಿತ್ಸಾ ವೆಚ್ಚ ಭರಿಸುವುದು, ರೂ.1.50 ಲಕ್ಷದವರೆಗೂ ತೃತೀಯ ಹಂತದ ಚಿಕಿತ್ಸಾ ಪ್ಯಾಕೇಜ್ ಪಡೆಯಬಹುದಾಗಿದೆ. ಅಲ್ಲದೇ ಹೆಚ್ಚುವರಿಯಾಗಿ ರೂ.50,000/- ಚಿಕಿತ್ಸಾ ವೆಚ್ಚ ಭರಿಸಲಾಗುವುದು.

           ಎಲ್ಲಾ ಹಂತದ ಚಿಕಿತ್ಸೆಗಳು ಸರ್ಕಾರಿ ಆಸ್ಪತ್ರೆಗಳಲ್ಲಿ, ಸರ್ಕಾರಿ ವೈದ್ಯರ ಚಿಕಿತ್ಸೆ ನಿರ್ದೇಶನದಲ್ಲಿ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಎಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ಮಿತ್ರರನ್ನು ಕಂಡು ಸಲಹೆ ಪಡೆದುಕೊಳ್ಳಬಹುದು. ಚಿತ್ರದುರ್ಗದ ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ, ಜಿಲ್ಲಾ ಆಸ್ಪತ್ರೆಗಳಲ್ಲಿ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ಮಿತ್ರರು ಕಾರ್ಯ ನಿರ್ವಹಿಸುತ್ತಿರುತ್ತಾರೆ. ಸಾರ್ವಜನಿಕರು ತಮ್ಮ ಆರೋಗ್ಯ ಸಮಸ್ಯೆ ಏನೇ ಇರಲಿ, ಇವರ ಬಳಿ ಬಂದು ಸಲಹೆ ಸೂಚನೆಗಳನ್ನು ಪಡೆದು ಮುಂದುವರೆಬಹುದು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ತಿಳಿಸಿದರು.

         ಅನ್ನೇಹಾಳ್ ಗ್ರಾಮಪಂಚಾಯ್ತಿ ಅಧ್ಯಕ್ಷೆ ಚಂದ್ರಮ್ಮ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಸದಸ್ಯ ಕೆ.ಮಂಜುನಾಥ ಸರ್ಕಾರದ ಈ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಿ ಎಂದರು. ನಿವೃತ್ತ ಕೃಷಿ ಅಧಿಕಾರಿ ಹೆಚ್.ಶಿವಲಿಂಗಪ್ಪ ಸಿರಿಧಾನ್ಯಗಳ ಮಹತ್ವ ಕುರಿತು ಮಾತನಾಡಿದರು. ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಎಮ್. ಖಾಸಿಂಸಾಬ್ ಅವರು ಹೆಚ್1ಎನ್1 ರೋಗ ನಿಯಂತ್ರಣ ಕುರಿತು ತಿಳಿಸಿದರು.
ಕಾರ್ಯಕ್ರಮದಲ್ಲಿ ಹ್ಯಾಂಡ್ಸ್ ಸಂಸ್ಥೆ ವ್ಯವಸ್ಥಾಪಕ ಕೆ.ಎಸ್. ಹಡಪದ್, ಸಿದ್ದೇಶ್, ಮಧು, ಹೇಮಲತಾ ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link