ಜನರಿಗೆ ಕಾರ್ಪೊರೇಟರ್‍ರಿಂದ ಉಚಿತ ತರಕಾರಿ ವಿತರಣೆ

ತುಮಕೂರು

   ರೈತರು ಬೆಳೆದಿರುವ ವಿವಿಧ ಬಗೆಯ ತರಕಾರಿಗಳನ್ನು ಕಾರ್ಪೊರೇಟರ್ ಒಬ್ಬರು ಸಗಟಾಗಿ ಖರೀದಿಸಿ, ನಿರ್ದಿಷ್ಟ ಸ್ಥಳದಲ್ಲಿ ಆ ತರಕಾರಿಗಳನ್ನು ಮಿನಿ ಮಾರುಕಟ್ಟೆ ರೂಪದಲ್ಲಿ ರಾಶಿಹಾಕಿ, ತಮ್ಮ ವಾರ್ಡ್‍ನ ಸಾರ್ವಜನಿಕರಿಗೆ ಸುಮಾರು ಒಂದು ವಾರಕ್ಕಾಗುವಷ್ಟು ತರಕಾರಿಗಳನ್ನು ಉಚಿತವಾಗಿ ವಿತರಿಸಿದ ಅಪರೂಪದ ಹಾಗೂ ವಿಶೇಷ ಕಾರ್ಯಕ್ರಮ ತುಮಕೂರು ನಗರದಲ್ಲಿ ನಡೆದಿದೆ.

    ತುಮಕೂರು ಮಹಾನಗರ ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರೂ ಆಗಿರುವ 23 ನೇ ವಾರ್ಡ್ ಕಾರ್ಪೊರೇಟರ್ ಟಿ.ಕೆ.ನರಸಿಂಹಮೂರ್ತಿ ಅವರು ತಮ್ಮ ವಾರ್ಡ್ ವ್ಯಾಪ್ತಿಯಲ್ಲಿರುವ ಭಾಗ್ಯನಗರದಲ್ಲಿ ಭಾನುವಾರ ಸಂಜೆ ಈ ವಿಶೇಷ ಕಾರ್ಯಕ್ರಮವನ್ನು ತಮ್ಮ ಸ್ವಂತ ವೆಚ್ಚದಲ್ಲಿ ನಡೆಸಿದ್ದು, ಆ ಭಾಗದ ನೂರಾರು ಜನರು ಇದರ ಉಪಯೋಗ ಪಡೆದುಕೊಂಡರು.

20 ರೀತಿಯ ತರಕಾರಿ

   ನಗರದ ಬೆಳಗುಂಬ ರಸ್ತೆಯಲ್ಲಿ ಹನುಮಂತಪುರ ಪಕ್ಕದಲ್ಲೇ ಭಾಗ್ಯನಗರ ಇದ್ದು, ಸುತ್ತಮುತ್ತ ರೈತಾಪಿ ವರ್ಗ ಬೆಳೆದಿದ್ದ ಮೂಲಂಗಿ, ಕ್ಯಾರೆಟ್, ಸೋರೆಕಾಯಿ, ಪಡವಲಕಾಯಿ, ಗೆಡ್ಡೆಕೋಸು, ನಿಂಬೆಹಣ್ಣು, ಟೊಮ್ಯಾಟೊ, ಕೋಸು, ಕೊತ್ತಂಬರಿ ಸೊಪ್ಪು, ಪುದೀನಸೊಪ್ಪು, ಬದನೆಕಾಯಿ ಮೊದಲಾದ ಸುಮಾರು 20 ರೀತಿಯ ತರಕಾರಿಗಳನ್ನು ತಮ್ಮ ಸ್ವಂತ ವೆಚ್ಚದಲ್ಲಿ ನರಸಿಂಹಮೂರ್ತಿ ಅವರು ಖರೀದಿಸಿದರು. ಭಾಗ್ಯನಗರದಲ್ಲಿ ಸರ್ಕಾರಿ ಶಾಲೆ ಪಕ್ಕದ ಜಾಗದಲ್ಲಿ ಈ ತರಕಾರಿಗಳನ್ನು ವ್ಯವಸ್ಥಿತವಾಗಿ ರಾಶಿ ಹಾಕಿಸಿದರು.

    ಸಾರ್ವಜನಿಕರು ಮಾಸ್ಕ್ ಧರಿಸಿಕೊಂಡು, ಸಾಮಾಜಿಕ ಅಂತರ ಕಾಯ್ದುಕೊಂಡು ಸರತಿ ಸಾಲಿನಲ್ಲಿ ನಿಲ್ಲುವಂತೆ ಗುರುತು ಹಾಕಿಸಿದರು. ಸಾಲಿನಲ್ಲಿ ಕೈಚೀಲದೊಂದಿಗೆ ಬಂದ ಸಾರ್ವಜನಿಕರಿಗೆ ಸುಮಾರು ಒಂದು ವಾರಕ್ಕಾಗುವಷ್ಟು ಎಲ್ಲ ರೀತಿಯ ತರಕಾರಿಗಳನ್ನು ಉಚಿತವಾಗಿ ವಿತರಿಸಲಾಯಿತು. ಸಂಜೆ 5 ಗಂಟೆಯಿಂದ ರಾತ್ರಿ 7-30 ರವರೆಗೆ ಜನರಿಗೆ ತರಕಾರಿಗಳನ್ನು ವಿತರಿಸಿ, ನರಸಿಂಹಮೂರ್ತಿ ಮತ್ತು ಅವರ ತಂಡದವರು ಸಂತೋಷಪಟ್ಟರು. ಈ ವಿಶೇಷ ಕಾರ್ಯಕ್ರಮಕ್ಕೆ 20 ನೇ ವಾರ್ಡ್ ಕಾರ್ಪೊರೇಟರ್ ಎ. ಶ್ರೀನಿವಾಸ್, ತಿಗಳ ಜನಾಂಗದ ಪ್ರಮುಖರಾದ ರವೀಶ್ ಜಹಂಗೀರ್, ಟಿ.ಎಲ್. ಕುಂಭಯ್ಯ, ಕುಂಬಿ ನರಸಯ್ಯ ಮತ್ತು ಶಿವಣ್ಣ ಅವರುಗಳು ಕೈಜೋಡಿಸಿದರು.

ಗಣ್ಯರಿಂದ ವಿತರಣೆ

     ಉಚಿತ ತರಕಾರಿ ವಿತರಣೆ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದ ತುಮಕೂರು ನಗರದ ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಹಾನಗರ ಪಾಲಿಕೆ ಮೇಯರ್ ಫರೀದಾಬೇಗಂ, ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ, ಮಹಾನಗರ ಪಾಲಿಕೆ ಆಯುಕ್ತ ಟಿ.ಭೂಬಾಲನ್, ತಹಸೀಲ್ದಾರ್ ಮೋಹನ್ ಕುಮಾರ್, ತುಮಕೂರು ಗ್ರಾಮಾಂತರ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಲಕ್ಷ್ಮಯ್ಯ ಮೊದಲಾದ ಗಣ್ಯರು ಆಗಮಿಸಿ ಸಾರ್ವಜನಿಕರಿಗೆ ತರಕಾರಿ ವಿತರಿಸಿದರು. ಮಹಾನಗರ ಪಾಲಿಕೆಯ ಪರಿಸರ ಇಂಜಿನಿಯರ್‍ಗಳಾದ ಮೃತ್ಯುಂಜಯ ಮತ್ತು ಕೃಷ್ಣಮೂರ್ತಿ ಹಾಗೂ ಆರೋಗ್ಯ ಶಾಖೆಯ ಸಿಬ್ಬಂದಿ ತರಕಾರಿ ವಿತರಣೆಗೆ ಅಗತ್ಯವಿದ್ದ ಸೂಕ್ತ ವ್ಯವಸ್ಥೆಗಳನ್ನು ಮಾಡಿದ್ದರು.

    ಕಾರ್ಪೊರೇಟರ್ ನರಸಿಂಹಮೂರ್ತಿ ಅವರು ಈಗಾಗಲೇ ತಮ್ಮ ವಾರ್ಡ್‍ನ ಬಡಜನರಿಗೆ ತಮ್ಮ ಸ್ವಂತ ವೆಚ್ಚದಲ್ಲಿ ಹಾಲು ಹಾಗೂ ಆಹಾರಧಾನ್ಯ ವಿತರಣೆ, ಮಾಸ್ಕ್‍ಗಳ ವಿತರಣೆ ಕಾರ್ಯವನ್ನು ನಡೆಸಿದ್ದು, ಇದೀಗ ತರಕಾರಿ ವಿತರಣೆ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap