ಚಿತ್ರದುರ್ಗ:
ಸಂವಿಧಾನ ಬದಲಾವಣೆ ಮಾಡಲು ಹೊರಟಿರುವ ದೇಶದ್ರೋಹಿಗಳನ್ನು ಕಾನೂನಿನಡಿ ಬಂಧಿಸುವಂತೆ ಒತ್ತಾಯಿಸಿ ಸಂವಿಧಾನ ಉಳಿಸಿ ಹೋರಾಟ ಸಮಿತಿಯಿಂದ ಅ.6 ರಂದು ಬೆಳಿಗ್ಗೆ 11ಕ್ಕೆ ಡಿ.ಸಿ.ಸರ್ಕಲ್‍ನಲ್ಲಿ ಬಹಿರಂಗ ಸಭೆ ನಡೆಸಲಾಗುವುದು ಎಂದು ಸಂವಿಧಾನ ಉಳಿಸಿ ಹೋರಾಟ ಸಮಿತಿ ಸಂಘಟಕ ಮಹೇಶ್ವರಪ್ಪ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ನಿಂತಿರುವುದೇ ಸಂವಿಧಾನದ ಅಡಿಯಲ್ಲಿ. ಅಂತಹ ಶ್ರೇಷ್ಟವಾದ ಸಂವಿಧಾನವನ್ನೇ ಬದಲಾವಣೆ ಮಾಡಲು ಹೊರಟಿರುವವರು ಉಗ್ರಗಾಮಿಗಳು, ಭಯೋತ್ಪಾದಕರಿಗಿಂತ ಅಪಾಯಕಾರಿಯಾದವರು. ಅಂಬೇಡ್ಕರ್‍ರವರ ಸಮಾನತೆಯ ಸಂವಿಧಾನವನ್ನೇ ಸಾತ್ವಿಕವಾಗಿ ಸುಟ್ಟರೆ ದೇಶವನ್ನೇ ಸುಟ್ಟಂತೆ. ಆದುದರಿಂದ ಸಂವಿಧಾನ ವಿರೋಧಿ ಕೆಲಸ ಮಾಡುವವರನ್ನು ಕೂಡಲೇ ಬಂಧಿಸಿ ಕಾನೂನು ರೀತಿ ಶಿಕ್ಷಿಸಬೇಕು. ಇಲ್ಲವಾದಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಪೇಜಾವರ ಶ್ರೀಗಳು ಸಂವಿಧಾನದ ವಿರುದ್ದ ಮಾತನಾಡಿದ್ದಾರೆ. ಕೇಂದ್ರದ ಮಂತ್ರಿ ಅನಂತಕುಮಾರ ಹೆಗಡೆ ಸಂವಿಧಾನವನ್ನು ಬದಲಾವಣೆ ಮಾಡುವುದಕ್ಕಾಗಿಯೇ ಕೇಂದ್ರದಲ್ಲಿ ಬಿಜೆಪಿ.ಅಧಿಕಾರಕ್ಕೆ ಬಂದಿರುವುದು ಎಂದು ಹೇಳಿಕೆ ನೀಡಿದ್ದರೂ ಇಲ್ಲಿಯವರೆಗೂ ಅವರ ಮೇಲೆ ಯಾವ ಕ್ರಮ ಕೈಗೊಳ್ಳದಿರುವುದನ್ನು ಗಮನಿಸಿದರೆ ಆಳುವ ಸರ್ಕಾರಗಳು ಸಂವಿಧಾನ ವಿರೋಧಿಗಳಿಗೆ ಕುಮ್ಮಕ್ಕು ನೀಡುತ್ತಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.
ಅದಕ್ಕಾಗಿ ಅ.6 ರಂದು ಗಾಂಧಿ ಸರ್ಕಲ್‍ನಲ್ಲಿ ಮಾನವ ಸರಪಳಿ ನಿರ್ಮಿಸಿ ನಂತರ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಅಹಿಂದ ನಾಯಕ ಮುರುಘರಾಜೇಂದ್ರ ಒಡೆಯರ್ ಮಾತನಾಡಿ ಅನಾದಿ ಕಾಲದಿಂದಲೂ ಪಟ್ಟಭದ್ರ ಹಿತಾಸಕ್ತಿಗಳು ದೇಶದಲ್ಲಿ ಅಸಮಾನತೆಯನ್ನು ಉಂಟು ಮಾಡುವ ಮೂಲಕ ಜಾತಿ-ಜಾತಿ, ಧರ್ಮಗಳ ನಡುವೆ ಕೋಮುಭಾವನೆಯನ್ನು ಬಿತ್ತುತ್ತಿದ್ದಾರೆ.
ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಗತ್ತೆ ಮೆಚ್ಚುವಂತೆ ಸಂವಿಧಾನವನ್ನು ರಚಿಸಿ ಭಾರತಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಕೆಲವು ಕೋಮುವಾದಿಗಳು ಸಂವಿಧಾನವನ್ನು ಬದಲಾವಣೆ ಮಾಡಲು ಹೊರಟಿರುವುದನ್ನು ವಿರೋಧಿಸಿ ಅ.6 ರಂದು ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ವರ್ಗಬೇಧ, ವರ್ಣಬೇಧ, ಬಡವ-ಶ್ರೀಮಂತ, ಮೇಲು-ಕೀಳು ಎನ್ನುವ ಅಸಮಾನತೆಯನ್ನು ದೇಶದಲ್ಲಿ ಬಿತ್ತುತ್ತಿರುವ ಗುಂಪು ಸಂವಿಧಾನ ಬದಲಾವಣೆಗೂ ಕೈಹಾಕಿದೆ. ಅಂತಹ ದೇಶದ್ರೋಹಿಗಳನ್ನು ಕೂಡಲೆ ಬಂಧಿಸಿ ಕಾನೂನು ರೀತಿಯಲ್ಲಿ ಶಿಕ್ಷಿಸಿ ಸಂವಿಧಾನದ ಗೌರವವನ್ನು ಕೇಂದ್ರ ಸರ್ಕಾರ ಎತ್ತಿಹಿಡಿಯಬೇಕು ಎಂದು ಒತ್ತಾಯಿಸಿದರು.
ಮೆಹಬೂಬ್‍ಖಾತೂನ್ ಮಾತನಾಡುತ್ತ ಕೆಲವು ಕೋಮುವಾದಿ ಸಂಘಟನೆಗಳು ಸಂವಿಧಾನವನ್ನು ಬದಲಾವಣೆ ಮಾಡುವುದಾಗಿ ಹೇಳಿಕೊಂಡು ಕೆಳವರ್ಗದವರು, ಶೋಷಿತರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ಮಾಡಿಕೊಂಡು ಬರುತ್ತಿವೆ. ಸಂವಿಧಾನವನ್ನು ಬದಲಿಸಿದರೆ ಇಡಿ ದೇಶದ ಆಡಳಿತ ವ್ಯವಸ್ಥೆಯನ್ನು ಬುಡಮೇಲು ಮಾಡಿದಂತಾಗುತ್ತದೆ. ಆದ್ದರಿಂದ ಸಂವಿಧಾನ ವಿರೋಧಿಗಳನ್ನು ಕೂಡಲೆ ಬಂಧಿಸಬೇಕು ಎಂದು ಆಗ್ರಹಿಸಿದರು.
ನಗರಸಭೆ ಸದಸ್ಯರುಗಳಾದ ಮಹಮದ್ ಜೈಲುದ್ದೀನ್, ನಸ್ರುಲ್ಲಾ, ಕೆ.ಕುಮಾರ್, ನರಸಿಂಹಮೂರ್ತಿ, ಸತೀಶ್, ಅರವಿಂದ್, ರಮೇಶ್, ನೆಲ್ಸನ್‍ಮಂಡೇಲ್ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ