ಬೆಂಗಳೂರು
ಮುಖ್ಯಮಂತ್ರಿಯಾಗಿದ್ದಾಗ ಬಿ.ಎಸ್.ಯಡಿಯೂರಪ್ಪ ರಾಜ್ಯದ ರೈತರು, ಜನ ಸಾಮಾನ್ಯರ ತೆರಿಗೆ ಹಣವನ್ನು ಲೂಟಿ ಮಾಡಿ ಬಿಜೆಪಿ ವರಿಷ್ಠ ನಾಯಕರಿಗೆ 1800 ಕೋಟಿ ರೂ ಕಪ್ಪ ಪಾವತಿಸಿದ್ದಾರೆ ಎಂದು ಏಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
ತುಮಕೂರು ರಸ್ತೆಯ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಮೈದಾನದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಆಯೋಜಿಸಿದ್ದ ಬೃಹತ್ ಪರಿವರ್ತನಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಯಡಿಯೂರಪ್ಪ ಅವರ ಡೈರಿಯಲ್ಲಿ ನಮೂದಿಸಿರುವಂತೆ ಅರುಣ್ ಜೇಟ್ಲಿ ಅವರಿಗೆ 150 ಕೋಟಿ ರೂ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಎಲ್.ಕೆ. ಅಡ್ವಾಣಿ ಅವರಿಗೂ ಸಹ ಹಣ ನೀಡಿದ್ದಾರೆ. ಈ ಹಣ ಎಲ್ಲಿಂದ ಬಂತು. ಅದು ಕರ್ನಾಟಕದ ಸಾಮಾನ್ಯ ಜನರ, ರೈತರಿಗೆ ಸೇರಿದ ತೆರಿಗೆ ಹಣ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಶ್ರೀಮಂತರ ಪರವಾಗಿರುವ ಪಕ್ಷ. ಪ್ರಧಾನಿ ನರೇಂದ್ರ ಮೋದಿ ಅವರು ಸಹ 15 ಶ್ರೀಮಂತ ಉದ್ಯಮಿಗಳ 3.5 ಲಕ್ಷ ಕೋಟಿ ರೂ ಸಾಲ ಮನ್ನಾ ಮಾಡಿದ್ದಾರೆ. ಇದು ಸಹ ಬಡವರ ಹಣ. ಮೋದಿ ಕಳೆದ ಚುನಾವಣೆ ಸಂದರ್ಭದಲ್ಲಿ ಬಡವರ ಖಾತೆಗೆ 15 ಲಕ್ಷ ರೂ ನೀಡುವುದಾಗಿ ಹೇಳಿದ್ದು ಸುಳ್ಳು ಎಂಬುದು ಇದೀಗ ಸಾಬೀತಾಗಿದೆ. ಸರ್ಕಾರ 15 ಲಕ್ಷ ರೂ ಹಣವನ್ನು ಖಾತೆಗೆ ಹಾಕಲು ಸಾಧ್ಯವಿಲ್ಲ.
ಶ್ರೀಮಂತ ಉದ್ಯಮಿಗಳಿಗೆ ಬಿಜೆಪಿ ಹಣ ನೀಡಲು ಸಾಧ್ಯವಾಗುವುದಾದರೆ ಕಾಂಗ್ರೆಸ್ ಪಕ್ಷ ದೇಶದ ಬಡವರು ಮತ್ತು ರೈತರಿಗೆ ಹಣ ನೀಡಲು ಬಯಸುತ್ತದೆ. ಇದೇ ಉದ್ದೇಶದಿಂದ ಇತ್ತೀಚೆಗೆ ನ್ಯಾಯ್ ಯೋಜನೆ ಜಾರಿಗೆ ತರುವುದಾಗಿ ಘೋಷಿಸಿದೆ. ಶೇ 20 ರಷ್ಟು ಬಡವರ ಖಾತೆಗೆ ವಾರ್ಷಿಕ 72 ಸಾವಿರ ರೂ ಹಣ ಹಾಕುತ್ತೇವೆ. ಇದು ಬಡವರ ವಿರುದ್ಧ ನಾವು ಘೋಷಿಸುವ ಸರ್ಜಿಕಲ್ ಸ್ಟ್ರೈಕ್, ಐದು ವರ್ಷಗಳಲ್ಲಿ ಪ್ರತಿಯೊಂದು ಬಡ ಕುಟುಂಬ ಕನಿಷ್ಠ ಮಾಸಿಕ 12 ಸಾವಿರ ರೂ ಹಣ ಪಡೆಯುವಂತೆ ಮಾಡುತ್ತೇವೆ ಎಂದು ರಾಹುಲ್ ಗಾಂಧಿ ಘೋಷಿಸಿದರು.
ಆದರೆ ರೈತರ ಸಾಲ ಮನ್ನಾ ಮಾಡಲು ಮೋದಿ ಸರ್ಕಾರದಲ್ಲಿ ಹಣ ಇಲ್ಲ. ಮೈತ್ರಿ ಸರ್ಕಾರವಿರುವ ಕರ್ನಾಟಕದಲ್ಲಿ ಸಾಲ ಮನ್ನಾ ಮಾಡಲಾಯಿತು, ಕಾಂಗ್ರೆಸ್ ಆಡಳಿತವಿರುವ ಮಧ್ಯ ಪ್ರದೇಶ, ಚತ್ತೀಸ್ ಗಢ, ಪಂಜಾಬ್ ನಲ್ಲೂ ಸಾಲ ಮನ್ನಾ ಮಾಡಿದ್ದು ಅವರಿಗೆ ಎಲ್ಲಿಂದ ಹಣ ಬಂತು. ದೇಶದಲ್ಲಿ ಹಣ ಇದೆ. ಆದರೆ ಅದನ್ನು ಬಡವರು, ರೈತರಿಗೆ ಕೊಡುವ ಮನಸ್ಸು ಮೋದಿ ಅವರಿಗಿಲ್ಲ ಎಂದು ಕುಟುಕಿದರು.
ಮೋದಿ ಸರ್ಕಾರ ನೋಟು ಅಮಾನ್ಯಿಕರಣದ ಮೂಲಕ ಬಡವರನ್ನು ಶೋಷಿಸುವ, ಹಿಂಸಿಸುವ ಕೆಲಸ ಮಾಡಿತು. ಜಿಎಸ್ ಟಿಯಲ್ಲಿ ಐದು ರೀತಿಯ ವಿವಿಧ ತೆರಿಗೆಗಳನ್ನು ಹಾಕಲಾಯಿತು. ಒಂದು ಕಡೆ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗುತ್ತಿದೆ. ಮತ್ತೊಂದೆಡೆ ಆರ್ಥಿಕ ಪರಿಸ್ಥಿತಿ ಅಧೋಗತಿಗಿಳಿಯುತ್ತಿದೆ. ನಾವು ಅಧಿಕಾರಕ್ಕೆ ಬಂದಲ್ಲಿ ಗಬ್ಬರ್ ಸಿಂಗ್ ಜಿಎಸ್ ಟಿಯಲ್ಲಿ ಸುಧಾರಣೆ ತರುತ್ತೇವೆ. ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡಲು ಉದ್ಯಮ ಆರಂಭಿಸುವವರಿಗೆ ಇರುವ ಎಲ್ಲಾ ಅಡೆತಡೆಗಳನ್ನು ತೆಗೆದುಹಾಕುತ್ತೇವೆ ಎಂದು ರಾಹುಲ್ ಗಾಂಧಿ ಭರವಸೆ ನೀಡಿದರು.
ನರೇಂದ್ರ ಮೋದಿ ಹಲವು ಸುಳ್ಳು ಆಶ್ವಾಸನೆಗಳನ್ನು ನೀಡಿ ದೇಶ ವಿಭಜಿಸುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಾರದಂತೆ ನೋಡಿಕೊಳ್ಳಬೇಕಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಸೋಲಿಸುವುದೇ ಎರಡೂ ಪಕ್ಷಗಳ ಗುರಿಯಾಗಬೇಕು. ಐದು ವರ್ಷಗಳಲ್ಲಿ ಬಡವರು, ದುಡಿಯುವವರ ಪರವಾಗಿ ಮೋದಿ ಸರ್ಕಾರ ಯಾವುದೇ ಕಾರ್ಯಕ್ರಮಗಳನ್ನು ರೂಪಿಸಿಲ್ಲ. ತನ್ನ ಎಲ್ಲಾ ಯೋಜನೆಗಳು ಶ್ರೀಮಂತರು, ಉದ್ಯಮಿಗಳ ಕೇಂದ್ರೀಕೃತವಾಗಿತ್ತು ಎಂದು ಆರೋಪಿಸಿದರು.
ಜಗತ್ತಿನ ಅತಿದೊಡ್ಡ ರಫೆಲ್ ಗುತ್ತಿಗೆಯನ್ನು ಅನಿಲ್ ಅಂಬಾನಿ ಅವರಿಗೆ ವಹಿಸಿ 30 ಸಾವಿರ ಕೋಟಿ ರೂ ಹಣವನ್ನು ನಿರಾಯಾಸವಾಗಿ ಅವರಿಗೆ ನೀಡಿದ್ದಾರೆ ಎಂದು ರಾಹುಲ್ ಗಾಂಧಿ ಪುನರುಚ್ಚರಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಐದು ವರ್ಷಗಳಲ್ಲಿ ಮೋದಿ ಆಡಳಿತದಿಂದ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ರೈತರು ಕಣ್ಣೀರಿನಿಂದ ಕೈ ತೊಳೆಯುತ್ತಿದ್ದಾರೆ. ದಲಿತರು, ಅಲ್ಪ ಸಂಖ್ಯಾತರು ತೊಂದರೆಗೆ ಸಿಲುಕಿದ್ದಾರೆ. ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರ ಇಡಬೇಕು. ದೇಶದ ಸಮಾನತೆ, ಸಂವಿಧಾನ ರಕ್ಷಿಸುವವವರು ಒಟ್ಟಿಗೆ ಸೇರಿ ಬಿಜೆಪಿಯನ್ನು ಸೋಲಿಸಬೇಕು. ಈ ಸಂದೇಶ ಇಡೀ ದೇಶಕ್ಕೆ ರವಾನೆಯಾಗಬೇಕು. ಯುಪಿಎ ನೇತೃತ್ವದ ಮಿತ್ರ ಪಕ್ಷಗಳು ಅಧಿಕಾರಕ್ಕೆ ಬರಬೇಕು. ರಾಹುಲ್ ಗಾಂಧಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂದು ಆಶಿಸಿದರು.
ಮೇ ತಿಂಗಳಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ದಲಿತರು, ಅಲ್ಪ ಸಂಖ್ಯಾತರು, ರೈತರು, ಎಲ್ಲಾ ಜನ ಸಮುದಾಯಗಳ ಪರವಾಗಿ ಸರ್ಕಾರ ಕೆಲಸ ಮಾಡುತ್ತಿದೆ. ಎಲ್ಲಾ 28 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಸೋಲಿಸಲು ಸೂಕ್ತ ಕಾರ್ಯತಂತ್ರ ರೂಪಿಸಬೇಕಾಗಿದೆ ಎಂದ ಅವರು, ಬಿಜೆಪಿ ಸರ್ಕಾರ, ಸಂವಿಧಾನ ಬದಲಾವಣೆ ಮಾಡಲು, ಮೀಸಲಾತಿ ತೆಗೆಯಲು ಹೊರಟಿದೆ.
ಸಂವಿಧಾನದಲ್ಲಿ ಹಿಂದೂ ಆಚಾರ, ವಿಚಾರಕ್ಕೆ ಅವಕಾಶ ನೀಡಲು ಸಂವಿಧಾನ ಬದಲಾವಣೆಗೆ ಮುಂದಾಗಿದೆ. ಇಂತಹವರನ್ನು ಅಧಿಕಾರದಿಂದ ದೂರ ಇಡಬೇಕು ಎಂದರು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಮೋದಿ ಸರ್ಕಾರ ಎಲ್ಲಾ ರಂಗಗಳಲ್ಲೂ ವಿಫಲವಾಗಿದೆ. ಇದೀಗ ದೇಶದ ಎಲ್ಲೆಡೆ ಬದಲಾವಣೆಯ ಗಾಳಿ ಬೀಸುತ್ತಿದೆ. ಇದನ್ನು ಎರಡೂ ಪಕ್ಷಗಳ ಕಾರ್ಯಕರ್ತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.