ಹೊನ್ನಾಳಿ:
ಸಾರ್ವಜನಿಕರು ಮನೆಗಳು ಮತ್ತು ವಾಣಿಜ್ಯ ಕಟ್ಟಡಗಳ ಮೇಲೆ, ಮನೆಯ ಮುಂದಿನ ಕಂಬದ ಮೇಲ್ಭಾಗದಲ್ಲಿ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕಗಳನ್ನು ಅಳವಡಿಸಿಕೊಂಡರೆ ಆರ್ಥಿಕವಾಗಿ ಸಬಲರಾಗಬಹುದು. ಹಾಗಾಗಿ, ಇದನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ದೀಟೂರಿನ ನಿಸರ್ಗ ಗ್ರಾಮೀಣಾಭಿವೃದ್ಧಿ ಮತ್ತು ವಿದ್ಯಾ ಸಂಸ್ಧೆಯ ಕಾರ್ಯದರ್ಶಿ ಕೆ.ಎ. ಸಂತೋಷ್ ಹೇಳಿದರು.
ತಾಲೂಕಿನ ಸಿಂಗಟಗೆರೆ ಗ್ರಾಮದ ಬಸವೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಅಭಿವೃದ್ಧಿ ಸಂಸ್ಥೆ ಹಾಗೂ ದೀಟೂರಿನ ನಿಸರ್ಗ ಗ್ರಾಮೀಣಾಭಿವೃದ್ಧಿ ಮತ್ತು ವಿದ್ಯಾ ಸಂಸ್ಧೆಗಳ ಸಂಯುಕ್ತಾಶ್ರಯದಲ್ಲಿ ನವೀಕರಿಸಬಹುದಾದ ಇಂಧನ ಮತ್ತು ಘನ ತ್ಯಾಜ್ಯ ನಿರ್ವಹಣೆ, ಮಳೆ ನೀರು ಕೊಯ್ಲು ಎಂಬ ವಿಷಯಗಳ ಕುರಿತು ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರಿಗೆ ಸೋಮವಾರ ಹಮ್ಮಿಕೊಂಡ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ದಿನಗಳಲ್ಲಿ ಕೆಪಿಟಿಸಿಎಲ್‍ನಿಂದ ವಿದ್ಯುತ್ ಪಡೆದುಕೊಂಡರೆ ಆರ್ಥಿಕ ಹೊರೆ ಹೆಚ್ಚಾಗುತ್ತದೆ. ಮನೆಗಳ ಮೇಲೆ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕ ಅಳವಡಿಕೊಂಡರೆ ಅದರಿಂದ ಲಭಿಸುವ ವಿದ್ಯುತ್ತನ್ನು ಸ್ವಂತಕ್ಕೆ ಉಪಯೋಗಿಸಬಹುದು. ಹೆಚ್ಚುವರಿ ವಿದ್ಯುತ್ತನ್ನು ಹತ್ತಿರದ ಕೆಪಿಟಿಸಿಎಲ್‍ಗೆ ಮಾರಾಟ ಮಾಡಬಹುದು. ಅಲ್ಲದೇ, ಸೋಲಾರ್ ವಿದ್ಯುತ್ ಉತ್ಪಾದನಾ ಘಟಕಗಳಿಂದ ಬೀದಿ ದೀಪ, ಸೌರಶಕ್ತಿ ಪಂಪ್‍ಸೆಟ್‍ಗಳೂ ಕಾರ್ಯನಿರ್ವಹಿಸುತ್ತವೆ ಎಂದು ಮಾಹಿತಿ ನೀಡಿದರು.
ಸಂಪನ್ಮೂಲ ವ್ಯಕ್ತಿ ಆರ್. ರೇಖಾ ಮಳೆ ನೀರು ಕೊಯ್ಲು, ಘನ ತ್ಯಾಜ್ಯ ನಿರ್ವಹಣೆ ಮತ್ತು ಮರುಬಳಕೆ ಮಾಡುವುದರ ಬಗ್ಗೆ ವಿವರಿಸಿದರು.ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಅಭಿವೃದ್ಧಿ ಸಂಸ್ಥೆ ಸಹಾಯಕ ಬಾಲಾಜಿ ಮಾತನಾಡಿದರು. ಸಂಸ್ಥೆಯ ಸಿಬ್ಬಂದಿ ಸವಿತ, ಸೌಭಾಗ್ಯ, ಶೈಲಜಾ, ಉಷಾ, ಶೋಭಾ ಇತರರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಹಿಳಾ ಸಂಘಗಳ ಸುಮಾರು 86 ಸದಸ್ಯರು ಭಾಗವಹಿಸಿದ್ದರು.