ತುಮಕೂರು
ನಗರಾದ್ಯಂತ ದೀರ್ಘಕಾಲದಿಂದ ತೀವ್ರವಾಗಿ ಕಾಡುತ್ತಿರುವ ಹಂದಿಗಳ ಹಾವಳಿ ತಡೆಗೆ ತುಮಕೂರು ಮಹಾನಗರ ಪಾಲಿಕೆ ನಡೆಸುತ್ತಿರುವ ಕಾರ್ಯಾಚರಣೆಯ ಎರಡನೆಯ ದಿನವಾದ ಶುಕ್ರವಾರ ಪಾಲಿಕೆಯ ತಂಡವು ಹಂದಿ ಜೋಗರಿಂದ ತೀವ್ರ ಪ್ರತಿರೋಧ ಎದುರಿಸುವಂತಾಯಿತು. ಮಾತಿನ ಚಕಮಕಿ ಹಾಗೂ ಪ್ರತಿರೋಧದಿಂದ ಕೆಲಹೊತ್ತು ಗಂಭೀರ ವಾತಾವರಣ ಸೃಷ್ಟಿಯಾದ ಪ್ರಸಂಗ ಜರುಗಿತು.
ತುಮಕೂರು ನಗರದ ಶಾಂತಿ ನಗರ ಹಿಂಭಾಗದ ಬನಶಂಕರಿ ಬಡಾವಣೆಯಲ್ಲಿ ಶುಕ್ರವಾರ ಮಧ್ಯಾಹ್ನ ಈ ಘಟನೆ ನಡೆಯಿತು. ಬಿಗಿ ಪೆÇಲೀಸ್ ಬಂದೋಬಸ್ತ್ ನಡುವೆಯೂ ಹಂದಿಜೋಗರ ಪ್ರತಿಭಟನೆ ಮತ್ತು ಮಾತಿನ ಚಕಮಕಿ ಅಲ್ಲಿ ಕೆಲ ಹೊತ್ತು ಗಂಭೀರ ವಾತಾವರಣವನ್ನು ಉಂಟುಮಾಡಿತು. ಈ ಬೆಳವಣಿಗೆ ನೋಡಿ ಸ್ಥಳೀಯ ನಾಗರಿಕರು ತಲ್ಲಣಗೊಂಡು ಮೂಕಪ್ರೇಕ್ಷಕರಾದರು.
ಪಾಲಿಕೆಯು ಗುರುವಾರ (ಅ.25)ದಿಂದ ಹಂದಿ ಹಿಡಿಯುವ ಕಾರ್ಯಾಚರಣೆ ಆರಂಭಿಸಿದೆ. ತಮಿಳುನಾಡಿನಿಂದ ಹಂದಿ ಹಿಡಿಯುವ 15 ಜನರ ತಂಡವೊಂದು ಇಲ್ಲಿಗೆ ಬಂದಿದ್ದು, ಆ ತಂಡವು ಕಾರ್ಯಾಚರಣೆ ನಡೆಸುತ್ತಿದೆ. ಈ ತಂಡವು ಲಾರಿಯೊಂದರಲ್ಲಿ ಕುಳಿತಿದ್ದು, ಹಂದಿಗಳನ್ನು ಹುಡುಕಿ ಬಲೆ ಬೀಸಿ ತಮ್ಮದೇ ವಿಧಾನದಲ್ಲಿ ಅವುಗಳನ್ನು ಹಿಡಿದು ವಾಹನದೊಳಕ್ಕೆ ಹಾಕಿಕೊಳ್ಳುತ್ತಿದೆ. ಪಾಲಿಕೆಯ ಆರೋಗ್ಯಾಧಿಕಾರಿ ಡಾ.ಕೆ. ನಾಗೇಶ್ ಕುಮಾರ್ ನೇತೃತ್ವದಲ್ಲಿ ಪರಿಸರ ಇಂಜಿನಿಯರ್‍ಗಳು, ಆರೋಗ್ಯ ನಿರೀಕ್ಷಕರುಗಳು ಜೊತೆಯಲ್ಲಿದ್ದು, ಹಂದಿ ಹಿಡಿಯುವ ಕಾರ್ಯಾಚರಣೆಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಈ ತಂಡಕ್ಕೆ ಸೂಕ್ತ ರಕ್ಷಣೆ ಒದಗಿಸಲು ಪೆÇಲೀಸರ ತಂಡವೊಂದು ವಾಹನದಲ್ಲಿ ಜತೆಯಲ್ಲಿರುತ್ತದೆ.
ಎರಡನೆಯ ದಿನವಾದ ಶುಕ್ರವಾರ (ಅ.26) ಬೆಳಗಿನಿಂದಲೇ ಹಂದಿ ಹಿಡಿಯುವ ಕಾರ್ಯಾಚರಣೆ ಆರಂಭಿಸಲಾಗಿತ್ತು. ನಗರದ ಮರಳೂರಿನ ಎಸ್.ಎಸ್.ಐ.ಟಿ. ಹಿಂಭಾಗ, ರಾಮಾಜೋಯಿಸ್ ನಗರ, ಮರಳೂರು ದಿಣ್ಣೆ ಮೂಲಕ ಈ ತಂಡವು ಅಪರಾಹ್ನ 12 ರ ಹೊತ್ತಿಗೆ ಬನಶಂಕರಿ ಬಡಾವಣೆಯಲ್ಲಿ ಕಾರ್ಯಾಚರಣೆಗೆ ತೊಡಗಿತು. ಆಗ ಸಮೀಪವೇ ಇರುವ ಹಂದಿಜೋಗರ ಗುಡಿಸಲು ಪ್ರದೇಶದಿಂದ ಮಹಿಳೆಯರೂ ಸೇರಿದಂತೆ ಹಲವು ಹಂದಿಜೋಗರು ಗುಂಪಾಗಿ ಬಂದು ಹಂದಿ ಹಿಡಿಯುವ ಕಾರ್ಯಾಚರಣೆಗೆ ತೀವ್ರ ಪ್ರತಿರೋಧ ಒಡ್ಡಿದರು. ಪಾಲಿಕೆಯ ಅಧಿಕಾರಿಗಳು ಮತ್ತು ಪೊಲೀಸರೊಡನೆ ವಾಗ್ವಾದಕ್ಕಿಳಿದರು.
“ನಮ್ಮ ಹಂದಿ ಹಿಡಿಯಬಾರದು. ಈಗಾಗಲೇ ಹಿಡಿದಿರುವುದನ್ನು ಬಿಟ್ಟುಬಿಡಬೇಕು. ನಾವು ಬ್ಯಾಂಕ್‍ನಿಂದ ಸಾಲ ತಂದು ಹಂದಿ ಸಾಕಿ ಜೀವನ ಮಾಡುತ್ತಿದ್ವೆದೇವೆ. ನಾವು ಹಂದಿಗಳನ್ನು ಗೂಡಿನಲ್ಲಿಟ್ಟು ಸಾಕುತ್ತಿದ್ದೇವೆ” ಎಂಬ ಸಮರ್ಥನೆಯೊಂದಿಗೆ ಮಾತಿಗಿಳಿದರು. “ಹಂದಿ ಹಾವಳಿ ಬಗ್ಗೆ ನಮಗೆ ನಾಗರಿಕರಿಂದ ದೂರುಗಳು ಬಂದಿದೆ. ಆದ ಕಾರಣ ನಾವು ಕಾನೂನಿನ ಪ್ರಕಾರ ಕ್ರಮ ಜರುಗಿಸುತ್ತಿದ್ದೇವೆ” ಎಂದು ಅಧಿಕಾರಿಗಳು ಹಾಗೂ ಪೊಲೀಸರು ಪ್ರತಿಕ್ರಿಯಿಸಿದರು. ಆದರೆ ಹಂದಿಜೋಗರು ಇದನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ. ಅವರು ಪೊಲೀಸರು ಮತ್ತು ಅಧಿಕಾರಿಗಳ ವಿರುದ್ಧ ತಿರುಗಿಬಿದ್ದರು.
ಈ ಮಧ್ಯ ಸ್ಥಳೀಯ ನಿವಾಸಿಗರಾದ ಒಂದಿಬ್ಬರು ನಾಗರಿಕರು ಧಾವಿಸಿ ಬಂದು “ಹಂದಿ ಹಾವಳಿಯಿಂದ ಇಲ್ಲಿ ನಮಗೆ ತುಂಬ ತೊಂದರೆ ಆಗುತ್ತಿದೆ. ಇಲ್ಲಿನ ವಾತಾವರಣ ಕಲುಷಿತವಾಗುತ್ತಿದೆ. ಹಂದಿ ಹಿಡಿಯಲೇ ಬೇಕು” ಎಂದು ಪಾಲಿಕೆಯ ಅಧಿಕಾರಿಗಳು ಮತ್ತು ಪೊಲೀಸರ ಬಳಿ ಕೇಳಿಕೊಂಡರು. ಆದರೆ ಅಲ್ಲೇ ಇದ್ದ ಹಂದಿಜೋಗರು ಆ ನಾಗರಿಕರ ವಿರುದ್ಧವೂ ತಿರುಗಿಬಿದ್ದರು. ಇವರ ಆರ್ಭಟ ನೋಡಿ ಆ ನಾಗರಿಕರು ಗಾಬರಿಯಿಂದ ಮೌನವಾದರು. ಸುತ್ತಮುತ್ತಲಿನ ನಿವಾಸಿಗರು ಸಹ ಮೂಕಪ್ರೇಕ್ಷಕರಾಗಿ ಉಳಿದರು.
ಅದೇ ಹೊತ್ತಿಗೆ ಒಂದಿಬ್ಬರು ಮಹಿಳೆಯರು ಜೋರಾಗಿ ಕೂಗಾಡುತ್ತ ರಂಪಾಟ ಮಾಡತೊಡಗಿದರು. ಸುತ್ತಮುತ್ತ ಓಡುತ್ತ ಪೊಲೀಸರಿಗೆ ಹಾಗೂ ಹಂದಿ ಹಿಡಿಯುವವರಿಗೆ ಹಿಡಿಶಾಪ ಹಾಕಿದರು. ಏರಿದ ದನಿಯಲ್ಲಿ ಅವಾಚ್ಯವಾಗಿ ನಿಂದಿಸಲಾರಂಭಿಸಿದರು. ಇವರಿಗೆ ಪೂರಕವಾಗಿ ಯುವಕರ ತಂಡಗಳು ಸ್ಮಾರ್ಟ್ ಮೊಬೈಲ್ ಫೋನ್‍ಗಳನ್ನು ಹಿಡಿದು ಬೈಕ್‍ಗಳಲ್ಲಿ ಸುತ್ತುವರೆದರು. ಇಷ್ಟೆಲ್ಲ ಗದ್ದಲದ ಮಧ್ಯ ಹಂದಿ ಹಿಡಿಯುವವರು ಹಂದಿಯ ಬೆನ್ನಟ್ಟಿದಾಗ ಆ ಹಂದಿ ಅಲ್ಲೇ ಇದ್ದ ಪೇದೆಯನ್ನು ಸೇರಿತು. ಅದನ್ನು ಹಿಡಿಯಲು ಸುತ್ತುವರಿದಾಗ, ಅದಕ್ಕೆ ಹಂದಿಜೋಗರ ತಂಡ ತೀವ್ರ ಪ್ರತಿರೋಧ ಒಡ್ಡಿತು. ಒಂದು ಸಂದರ್ಭದಲ್ಲಂತೂ ಯುವತಿಯೊಬ್ಬಳು ಹಂದಿ ಹಿಡಿಯುವ ತಂಡದ ವ್ಯಕ್ತಿಯ ಮೇಲೆ ಮಣ್ಣನ್ನು ಹಿಡಿಹಿಡಿಯಾಗಿ ಎರಚಿದ ಪ್ರಸಂಗವೂ ಜರುಗಿತು. ಆ ಹಂದಿ ತಪ್ಪಿಸಿಕೊಂಡಿದ್ದರಿಂದ ಅಲ್ಲಿ ಹಂದಿ ಹಿಡಿಯಲಾಗದೆ ತಂಡ ವಾಪಸ್ಸಾಯಿತು.
ಆಗ ಮತ್ತೊಂದು ಬೆಳವಣಿಗೆ ನಡೆಯಿತು. ಹಂದಿಗಳನ್ನು ಹಿಡಿದಿದ್ದ ಲಾರಿಯ ಮುಂದೆ ಬಂದ ಹಂದಿ ಜೋಗರ ಮಹಿಳೆಯು ಸದರಿ ಲಾರಿಯನ್ನು ಮುಂದಕ್ಕೆ ಬಿಡುವುದಿಲ್ಲವೆಂದು ಪಟ್ಟು ಹಿಡಿದ ಪ್ರಸಂಗ ಜರುಗಿತು. ಆ ಲಾರಿಯಲ್ಲಿದ್ದ ತಂಡದವರು ಹೊರಬಂದು ಆ ಮಹಿಳೆಯನ್ನು ಪಕ್ಕಕ್ಕೆ ಸರಿಸಿದರೂ, ಆಕೆ ಪಟ್ಟು ಬಿಡದೆ ಲಾರಿಯ ಮುಂದೆ ನಿಂತು ಪ್ರತಿಭಟಿಸಿದಳು. ಕೊನೆಗೆ ಪೊಲೀಸರು ಧಾವಿಸಿ ಆಕೆಯನ್ನು ಪಕ್ಕಕ್ಕೆ ತಳ್ಳಿ, ವಾಹನ ಮುಂದಕ್ಕೆ ಹೋಗುವಂತೆ ಮಾಡಿದರು.
ಇವೆಲ್ಲ ಬೆಳವಣಿಗೆಗಳಿಂದ ಅಲ್ಲಿ ಕೆಲಹೊತ್ತು ಗಂಭೀರ ವಾತಾವರಣ ಉಂಟಾಯಿತಾದರೂ, ಪೊಲೀಸರು ಮತ್ತು ಪಾಲಿಕೆ ಅಧಿಕಾರಿಗಳ ಸಂಯಮ ಹಾಗೂ ಸಕಾಲಿಕ ಕ್ರಮದಿಂದ ವಾತಾವರಣ ತಿಳಿಯಾಯಿತು.
ಈ ಬಡಾವಣೆಯಲ್ಲಿ ಕಾರ್ಯಾಚರಣೆಯ ತಂಡ ತೆರಳುವಾಗ ದಾರಿಯುದ್ದಕ್ಕೂ ಅವುಗಳ ಬೆನ್ನ ಹಿಂದೆಯೇ ಬೈಕ್‍ಗಳಲ್ಲಿ ಮೊಬೈಲ್ ಫೋನ್ ಹಿಡಿದ ಹಂದಿಜೋಗರ ಯುವಕರ ತಂಡಗಳು ಹಿಂಬಾಲಿಸುತ್ತಿದ್ದುದು ಕಂಡುಬಂದಿತು. ಕೆಲ ಸಂದರ್ಭಗಳಲ್ಲಿ ಪೊಲೀಸರು ಇವರನ್ನು ಚದುರಿಸುತ್ತಿದ್ದ ಘಟನೆಗಳೂ ಅಲ್ಲಲ್ಲಿ ನಡೆದವು.
ನಿನ್ನೆ 98, ಇಂದು 40 ಹಂದಿ
ಪಾಲಿಕೆಯ ಆರೋಗ್ಯಾಧಿಕಾರಿ ಡಾ.ಕೆ.ನಾಗೇಶ್ ಕುಮಾರ್ ಅವರು “ಕಾರ್ಯಾಚರಣೆಯ ಮೊದಲ ದಿನವಾದ ಗುರುವಾರ (ಅ.25) ನಗರದ ಗೋಕುಲ ಬಡಾವಣೆ, ಮಂಜುನಾಥ ನಗರ, ಬಟವಾಡಿ, ಕ್ಯಾತಸಂದ್ರ, ಗಿರಿನಗರ ಸುತ್ತಮುತ್ತ ಬೀದಿಗಳಲ್ಲಿ ಅಡ್ಡಾಡುತ್ತಿದ್ದ 98 ಹಂದಿಗಳನ್ನು ಹಿಡಿಯಲಾಗಿದೆ. ಎರಡನೆಯ ದಿನವಾದ ಶುಕ್ರವಾರ (ಅ.26) ಮಧ್ಯಾಹ್ನದವರೆಗೆ ಎಸ್.ಎಸ್.ಐ.ಟಿ. ಹಿಂಭಾಗ, ಮರಳೂರು ದಿಣ್ಣೆ, ಸರಸ್ವತಿಪುರಂ, ರಾಮಾಜೋಯಿಸ್ ನಗರದಲ್ಲಿ ಕಾರ್ಯಾಚರಣೆ ನಡೆಸಿದ್ದು 40 ಹಂದಿಗಳನ್ನು ಹಿಡಿಯಲಾಗಿದೆ” ಎಂದು ತಿಳಿಸಿದ್ದಾರೆ.
ಕಲ್ಲೆಸೆತದಿಂದ ಆಗ ಕಾರ್ಯಾಚರಣೆ ಸ್ಥಗಿತ
ಇತ್ತೀಚೆಗಷ್ಟೇ ಮಹಾನಗರ ಪಾಲಿಕೆಯು ನಗರದ ಬಟವಾಡಿ ರಿಂಗ್ ರಸ್ತೆ ಬಳಿ ಕಾರ್ಯಾಚರಣೆ ನಡೆಸಿತ್ತು. ಆಗ ಹಂದಿ ಹಿಡಿಯುವ ಕಾರ್ಯಾಚರಣೆ ತಂಡದ ಮೇಲೆ ಹಂದಿಜೋಗರ ತಂಡದವರು ಕಲ್ಲೆಸೆದಿದ್ದರು. ಇದಕ್ಕೆ ಹೆದರಿ ಅಂದು ಕಾರ್ಯಾಚರಣೆಯನ್ನು ಅಷ್ಟಕ್ಕೇ ಸ್ಥಗಿತಗೊಳಿಸಲಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು. ಇದೀಗ ಪಾಲಿಕೆಯು ಪೂರ್ಣಸಿದ್ಧತೆ ಮಾಡಿಕೊಂಡು ಪೊಲೀಸ್ ರಕ್ಷಣೆಯೊಂದಿಗೆ ಕಾರ್ಯಾಚರಣೆ ನಡೆಸುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ







