ಹೆಚ್.ಕಡದಕಟ್ಟೆ ಗ್ರಾ.ಪಂ.ನಲ್ಲಿ ಅಭಿವೃದ್ಧಿಗೆ ಹಿನ್ನಡೆ

ದಾವಣಗೆರೆ:

    ಗ್ರಾಮ ಪಂಚಾಯಿತಿ ಆಡಳಿತದಲ್ಲಿ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಮತ್ತು ಅವರ ಸಹೋದರ ಶಿವಶಂಕರಯ್ಯ ಅವರ ಹಸ್ತಕ್ಷೇಪದಿಂದಾಗಿ, ಹೊನ್ನಾಳಿ ತಾಲೂಕಿನ ಹೆಚ್.ಕಡದಕಟ್ಟೆ ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನಡೆಯಾಗಿದೆ ಎಂದು ಗ್ರಾ.ಪಂ. ಅಧ್ಯಕ್ಷೆ ಲಕ್ಷ್ಮಮ್ಮ ಆರೋಪಿಸಿದ್ದಾರೆ.

     ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಚ್.ಕಡದಕಟ್ಟೆ ಗ್ರಾಮ ಪಂಚಾಯಿತಿಯಲ್ಲಿ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯರ ಅಣ್ಣ ಶಿವಶಂಕರಯ್ಯರ ಪತ್ನಿ ಎಂ.ಎಸ್.ಲೀಲಾ ಸದಸ್ಯೆ ಆಗಿರುವ ಕಾರಣಕ್ಕೆ ಶಾಸಕರು ಮತ್ತು ಅವರ ಸಹೋದರ ಪಂಚಾಯ್ತಿ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ಅಭಿವೃದ್ಧಿ ಕಾಮಗಾರಿ ನಡೆಯದಂತೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ದೂರಿದರು.

     ಕಡದಕಟ್ಟೆ ಗ್ರಾ.ಪಂ. ಅಧ್ಯಕ್ಷರ ಸ್ಥಾನ ಎಸ್ಟಿ ಮಹಿಳೆಗೆ ಮೀಸಲಾಗಿದ್ದು, 2015ರಿಂದ ಈ ಪಂಚಾಯ್ತಿಯಲ್ಲಿ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿಕೊಂಡು ಬಂದಿದ್ದೆ. ಆದರೆ, ಪಂಚಾಯ್ತಿಯ ಕೆಲ ಸದಸ್ಯರ ಅಕ್ರಮಗಳಿಗೆ ಸಹಕಾರ ನೀಡಿಲಿಲ್ಲ ಎಂಬ ಕಾರಣಕ್ಕೆ ಪಂಚಾಯ್ತಿಯ ಒಟ್ಟು 18 ಸದಸ್ಯರ ಪೈಕಿ 12 ಜನರನ್ನು ತಮ್ಮ ವಿರುದ್ಧ ಎತ್ತಿಕಟ್ಟಿ, ಅವಿಶ್ವಾಸ ಗೊತ್ತುವಳಿ ಮಂಡಿಸಿ ಕೆಲ ತಿಂಗಳ ಹಿಂದೆ ಅಧಿಕಾರದಿಂದ ಕೆಳಗೆ ಇಳಿಸಿದ್ದರು. ಆದರೆ, ಅಧ್ಯಕ್ಷರ ಸ್ಥಾನಕ್ಕೆ ಮೀಸಲಾಗಿರುವ ಎಸ್ಟಿ ಮಹಿಳೆ ತಾವೊಬ್ಬರೆ ಇರುವುದರಿಂದ ಪುನಃ ತಾವೇ 2020ರ ಜನವರಿ 21ರಿಂದ ಕಾನೂನುಬದ್ಧವಾಗಿ ಅಧ್ಯಕ್ಷೆಯಾಗಿ ಪುನರ್ ಆಯ್ಕೆಯಾಗಿದ್ದೇನೆ ಎಂದು ಅವರು ಮಾಹಿತಿ ನೀಡಿದರು.

     ನನ್ನ ವಿರುದ್ಧ ಅವಿಶ್ವಾಸ ಮಂಡಿಸಿ ನನ್ನನ್ನು ಅಧ್ಯಕ್ಷೆ ಸ್ಥಾನದಿಂದ ಇಳಿಸಿದ ತಕ್ಷಣವೇ ಹೊನ್ನಾಳಿ ಶಾಸಕರ ಸಹೋದರ ಶಿವಶಂಕರಯ್ಯ ತಮಗೆ ಬೇಕಾದವರನ್ನು ಪ್ರಭಾರ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿಕೊಂಡು ತಮಗೆ ಬೇಕಾದ ರೀತಿಯಲ್ಲಿ ಆಡಳಿತ ನಡೆಸಿದ್ದಾರೆ. ಅಲ್ಲದೆ, ನಾನೇ ಮತ್ತೂ ಪಂಚಾಯ್ತಿಯ ಅಧ್ಯಕ್ಷೆಯಾಗಿ ಪುನರ್ ಆಯ್ಕೆಯಾಗಿರುವುದರಿಂದ ಹತಾಶರಾಗಿರುವ ಶಿವಶಂಕರಯ್ಯ ಪಂಚಾಯ್ತಿಯಲ್ಲಿ ಪಿಡಿಓ ಆಗಿ ವಿಜಯಗೌಡರ್ ಎಂಬುವರು ಕಾರ್ಯನಿರ್ವಸುತ್ತಿದ್ದರೂ ತಮ್ಮ ಸಹೋದರ, ಶಾಸಕ ಎಂ.ಪಿ.ರೇಣುಕಾಚಾರ್ಯರ ಪ್ರಭಾವ ಬಳಸಿ ಮತ್ತು ಅವರಿಂದ ಶಿಫಾರಸು ಪತ್ರ ಪಡೆದು ಜಯಕುಮಾರ್ ಎಂಬ ಭ್ರಷ್ಟ ಪಿಡಿಓ ಅವರನ್ನು ಪಂಚಾಯಿತಿಗೆ ಹಾಕಿಸಿಕೊಂಡು ಬಂದಿದ್ದಾರೆ ಎಂದು ಆಪಾದಿಸಿದರು.

    ನಮ್ಮ ಈಗ ಪಂಚಾಯ್ತಿಯಲ್ಲಿ ಒಂದೇ ಹುದ್ದೆಯಲ್ಲಿ ಇಬ್ಬರು ಪಿಡಿಓಗಳಿದ್ದಾರೆ. ಆದ್ದರಿಂದ ತಾವು ಯಾರಿಂದ ಕೆಲಸ ಮಾಡಿಸಿಕೊಳ್ಳಬೇಕೆಂಬ ಗೊಂದಲ ಕಾಡುತ್ತಿದೆ. ಈಗ ಹಾಲಿ ಕಾರ್ಯನಿರ್ವಹಿಸುತ್ತಿರುವ ಪಿಡಿಓ ವಿಜಯಗೌಡರ್ ನಿತ್ಯವೂ ಕರ್ತವ್ಯಕ್ಕೆ ಹಾಜುರಾಗುತ್ತಿದ್ದು, ಶಾಸಕರ ಪ್ರಭಾವದಿಂದ ಬಂದಿರುವ ಪಿಡಿಓ ಜಯಕುಮಾರ್ ಕಳೆದ 20 ದಿನಗಳಿಂದ ಕರ್ತವ್ಯಕ್ಕೆ ಹಾಜುರಾಗದೆ, ದಾಖಲೆಗಳನ್ನು ತಮ್ಮ ಬಳಿ ಇಟ್ಟುಕೊಂಡು ಹೋಗಿದ್ದಾರೆ. ಹೀಗಾಗಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

     ವಿಜಯಗೌಡರ್ ಪ್ರಾಮಾಣಿಕರಾಗಿದ್ದಾರೆ. ಆದರೆ, ರೇಣುಕಾಚಾರ್ಯರ ಪ್ರಭಾವದಿಂದ ಬಂದಿರುವ ಜಯಕುಮಾರ್ ಜಗಳೂರು ಮತ್ತು ಹರಿಹರ ತಾಲೂಕುಗಳ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸಿದ್ದ ಸಂದರ್ಭದಲ್ಲಿ ಅಂದಾಜು 6 ಕೋಟಿಗೂ ಹೆಚ್ಚು ತ್ತ ಅವ್ಯವಹಾರ ನಡೆಸಿರುವ ಆರೋಪವನ್ನು ಹೊತ್ತಿರುವುದಲ್ಲದೆ, ತನಿಖೆಯನ್ನು ಎದುರಿಸುತ್ತಿದ್ದಾರೆ. ಇಂತಹ ಪಿಡಿಓ ಜತೆ ಸೇರಿ ನಾನು ಕೆಲಸ ಮಾಡಿದರೆ, ಮುಂದೊಂದು ದಿನ ತಾವು ಜೈಲು ಪಾಲಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.

    ಹೆಚ್.ಕಡದಕಟ್ಟೆ ಗ್ರಾಮ ಪಂಚಾಯಿತಿ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದನ್ನು ಶಾಸಕರು ಮತ್ತು ಅವರ ಸಹೋದರ ತಕ್ಷಣವೇ ನಿಲ್ಲಿಸಬೇಕು. ಮೂಲಸ್ಥಾನದಲ್ಲಿ ಪಿಡಿಓ ಆಗಿರುವ ವಿಜಯಗೌಡರ್ ಅವರನ್ನೆ ಪಂಚಾಯಿತಿಯಲ್ಲಿ ಮುಂದುವರೆಸಬೇಕು. ಇಬ್ಬರು ಪಿಡಿಒಗಳ ನಿಯೋಜನೆ ಆಗಿರುವ ಗೊಂದಲವನ್ನು ತಕ್ಷಣವೇ ಬಗೆಹರಿಸಬೇಕೆಂದು ಅವರು ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಕುಂದೂರು ಗ್ರಾ.ಪಂ. ಸದಸ್ಯೆ ಪುಷ್ಪಾ ಪ್ರಸನ್ನಕುಮಾರ್ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link