ವಸಂತ ನರಸಾಪುರ : ಮೂಲಭೂತ ಸೌಕರ್ಯಕ್ಕೆ ಆಧ್ಯತೆ : ಜಗದೀಶ್ ಶೆಟ್ಟರ್

ತುಮಕೂರು
 
    ಜಿಲ್ಲೆಯ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಸ್ಥಳೀಯರಿಗೆ ಉದ್ಯೋಗವಕಾಶ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರು ತಿಳಿಸಿದರು.
    ತುಮಕೂರು ತಾಲೂಕಿನ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಫುಡ್‍ಪಾರ್ಕ್ ಸೇರಿದಂತೆ ವಿವಿಧ ಕೈಗಾರಿಕಾ ಪ್ರದೇಶಗಳಿಗೆ ಭೇಟಿ ನೀಡಿ ಅವರು ಮಾತನಾಡಿದರು. ಈ ಕೈಗಾರಿಕಾ ಪ್ರದೇಶದಲ್ಲಿರುವ ಫುಡ್‍ಪಾರ್ಕ್ ಸ್ಥಳೀಯರಿಗೆ ಉದ್ಯೋಗವಕಾಶ ಕಲ್ಪಿಸಬೇಕು. ಅಲ್ಲದೇ ಕೈಗಾರಿಕೆಗಳ ಸ್ಥಾಪನೆಗೆ ರೈತರು ಜಮೀನು ಕಳೆದುಕೊಂಡಿದ್ದು, ಸೂಕ್ತ ಬೆಲೆಯನ್ನು ನೀಡಬೇಕು ಎಂದು ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸಚಿವರ ಗಮನಕ್ಕೆ ತಂದರು. 
    ಇದಕ್ಕೆ ಪ್ರತಿಕ್ರಯಿಸಿದ ಸಚಿವರು ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗವಕಾಶ ಕಲ್ಪಿಸಬೇಕು ಎಂಬ ನಿಮ್ಮ ಮನಸ್ಸಿನ ಭಾವನೆ ಅರ್ಥವಾಗಿದೆ. ಕೈಗಾರಿಕಾ ಪ್ರದೇಶದಲ್ಲಿ ಕಲ್ಪಿಸಬೇಕಾಗಿದ್ದ ಮೂಲಭೂತ ಸೌಕರ್ಯಗಳು ಮತ್ತಿತರ ಅಂಶಗಳನ್ನು ತಿಳಿದುಕೊಂಡು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
    ಕಳೆದ 2007ರಲ್ಲಿ ಮೊದಲ ಹಂತವಾಗಿ 700 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಪ್ರದೇಶವನ್ನು ಕೆ.ಐ.ಡಿ.ಬಿ, ವತಿಯಿಂದ ಅಭಿವೃದ್ಧಿಪಡಿಸಿ ಕೈಗಾರಿಕೆಗಳಿಗೆ ಹಂಚಿಕೆ ಮಾಡಲಾಗಿದೆ. ಇದೀಗ 2 ಮತ್ತು 3ನೇ ಹಂತದ ಕೈಗಾರಿಕಾ ಪ್ರದೇಶ ಅಭಿವೃದ್ಧಿಪಡಿಸಲಾಗುತ್ತಿದೆ. ಒಟ್ಟಾರೆ ಸುಮಾರು 13 ಸಾವಿರ ಎಕರೆ ಪ್ರದೇಶದಲ್ಲಿ ವಸಂತನರಸಾಪುರ ಕೈಗಾರಿಕಾ ಪ್ರದೇಶ ಅಭಿವೃದ್ಧಿಯಾಗಲಿದೆ ಎಂದು ಕೆ.ಐ.ಡಿ.ಬಿ ಅಧಿಕಾರಿಗಳು ಸಚಿವರಿಗೆ ವಿವರಿಸಿದರು.
    ಸುಮಾರು 529,58 ಎಕರೆ ಪ್ರದೇಶದಲ್ಲಿ ತುಮಕೂರು ಮೆಷನ್ ಟೂಲ್‍ಪಾರ್ಕ್ 519,55 ಎಕರೆ ಪ್ರದೇಶದಲ್ಲಿ ಜಪಾನೀಸ್ ಪಾರ್ಕ್‍ನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಸೀಮಿತವಾದ 220 ಕೆವಿ ವಿದ್ಯುತ್ ಪೂರೈಕೆ ಸ್ಥಾವರ ನಿರ್ಮಾಣವಾಗುತ್ತಿದ್ದು, ಮುಂದಿನ ಅಕ್ಟೋಬರ್ ತಿಂಗಳೊಳಗಾಗಿ ಕಾರ್ಯಾರಂಭ ಮಾಡಲಿದೆ. 5 ಎಮ್.ಎಲ್.ಡಿ ನೀರನ್ನು ಕುಪ್ಪೂರು ಕೆರೆಯಿಂದ ಕೈಗಾರಿಕಾ ವಲಯಕ್ಕೆ ಹರಿಸಲು ಕ್ರಮವಹಿಸಲಾಗಿದೆ ಎಂದು ಅಧಿಕಾರಿಗಳು ಪಿಪಿಟಿಯ ಮೂಲಕ ತಿಳಿಸಿದರು. 
    ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಸೊಗಡು ಶಿವಣ್ಣ ಅವರು ವಸಂತನರಸಾಪುರ ಕೈಗಾರಿಕಾ ಪ್ರದೇಶವು ದೊಡ್ಡದಾದ ಕೈಗಾರಿಕಾ ಪ್ರದೇಶವಾಗಿದ್ದು, ಕೈಗಾರಿಕೆಗಳು ಸ್ಥಾಪನೆಯಾಗುತ್ತಿರುವ ಆರಂಭದಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸುವಂತೆ ಪರಿಸರ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
    ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಅಗತ್ಯವಿರುವ ಮಾನವ ಸಂಪನ್ಮೂಲವನ್ನು ಪೂರೈಕೆ ಸಂಬಂಧ ಕೇಂದ್ರೀಕೃತ ಕೌಶಲ್ಯ ತರಬೇತಿ ಕೇಂದ್ರವನ್ನು ಈ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪಿಸಬೇಕು. ಸ್ಮಾರ್ಟ್‍ಸಿಟಿ ಹಾಗೂ ಕೌಶಲ್ಯ ತರಬೇತಿ ಇಲಾಖೆ ವತಿಯಿಂದ ಪ್ರತ್ಯೇಕವಾಗಿ ಸ್ಕಿಲ್ ತರಬೇತಿ ಕೇಂದ್ರಗಳನ್ನು ಸ್ಥಾಪಿಸುತ್ತಿದ್ದು, ಕೌಶಲ್ಯ ತರಬೇತಿಯನ್ನು  ಕೇಂದ್ರೀಕೃತವಾಗಿ ನೀಡಿದರೆ ಒಳಿತು ಎಂದು ಶಾಸಕ ಜ್ಯೋತಿಗಣೇಶ್ ಅವರು ಸಚಿವರಿಗೆ ತಿಳಿಸಿದರು.
    ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್‍ಗುಪ್ತ, ಆಯುಕ್ತ ಗುಂಜನ್‍ಕೃಷ್ಣ, ಜಿಲ್ಲಾಧಿಕಾರಿ ಡಾ: ರಾಕೇಶ್‍ಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಡಾ: ಕೋನ ವಂಶಿಕೃಷ್ಣ, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ನಾಗರಾಜ್, ಕೆ.ಐ.ಡಿ.ಬಿ, ಅಭಿವೃದ್ಧಿ ಅಧಿಕಾರಿ ಸುನಿಲ್ ಮತ್ತಿತರರು ಹಾಜರಿದ್ದರು.ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡುವ ಮುನ್ನ ಸಚಿವರು ಸಿದ್ಧಗಂಗಾ ಮಠಕ್ಕೆ ತೆರಳಿ ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದರು.
      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link