ಹುಳಿಯಾರು
ಚಿಕ್ಕನಾಯಕನಹಳ್ಳಿ ತಾಲೂಕಿಗೆ ಹೇಮಾವತಿ ಯೋಜನೆ ಮಂಜೂರಾಗಿ 8 ವರ್ಷಗಳಾಗಿದ್ದರೂ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಸರ್ಕಾರ ಈ ಬಜೆಟ್‍ನಲ್ಲಿ ಹಣ ಮೀಸಲಿಟ್ಟು ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಮುಂದಾಗಬೇಕಿದೆ ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಹುಳಿಯಾರು ಸಮೀಪದ ಕೆಂಕೆರೆ ಗ್ರಾಮದ ಸುವರ್ಣ ಗ್ರಾಮ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ತಾನು ಶಾಸಕನಾಗಿ ಆರಿಸಿ ಬಂದ ನಂತರ ಅಧಿಕಾರಿಗಳು, ಜನಪ್ರತಿನಿಧಿಗಳು ಹೀಗೆ ಹೇಮಾವತಿ ಸಂಬಂಧ ಐದಾರು ಸಭೆಗಳನ್ನು ಮಾಡಲಾಗಿದೆ. ಚಳಿಗಾಲದ ಅಧಿವೇಷನದಲ್ಲಿ ಈ ಬಗ್ಗೆ ಧ್ವನಿ ಎತ್ತಿದ್ದೇನೆ. ಬಾಕಿಯಿದ್ದ 8 ಕೋಟಿ ರೂ. ಭೂ ಪರಿಹಾರ ಹಣ ಬಿಡುಗಡೆ ಮಾಡಿಸಿ ಈಗಾಗಲೇ ರೈತರಿಗೆ ಕೊಡಿಸಲಾಗಿದೆ. ಇನ್ನೂ 3.5 ಕೋಟಿ ರೂ. ಭೂ ಪರಿಹಾರ ಬಾಕಿ ಕೊಡಬೇಕಿದ್ದು ಶೀಘ್ರ ಬಿಡುಗಡೆ ಮಾಡುವ ಜೊತೆಗೆ ಕಾಮಗಾರಿಗೆ ಹಣದ ತೊಂದರೆಯಾಗದಂತೆ ಹೇಮಾವತಿ ಯೋಜನೆಗೆಂದೇ ಬಜೆಟ್‍ನಲ್ಲಿ ಹಣ ಮೀಸಲಿಟ್ಟು ಕಾಮಗಾರಿಗೆ ವೇಗ ಕೊಡುವಂತೆ ಒತ್ತಾಯಿಸಿದರು.
ಕಳೆದ 10 ವರ್ಷಗಳಿಂದ ಚಿ.ನಾ.ಹಳ್ಳಿ ತಾಲೂಕಿನಲ್ಲಿ ಒಂದೇ ಒಂದು ಕಿ.ಮೀ ಗ್ರಾಮೀಣ ರಸ್ತೆಯನ್ನು ಪಿಡ್ಲ್ಯೂಡಿಗೆ ಅಪ್‍ಗ್ರೇಟ್ ಮಾಡಿಲ್ಲ. ಹಾಗಾಗಿ ರಸ್ತೆ ದುರಸ್ಥಿ ಭಾಗ್ಯ ಕಾಣದಂತ್ತಾಗಿದ್ದು ಈಗಲಾದರೂ ತಾಲೂಕಿನ 100 ಕಿ.ಮೀ ಗ್ರಾಮೀಣ ರಸ್ತೆಯನ್ನು ಮೇಲ್ದರ್ಜೆಗೇರಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗಿದೆ
ಹುಳಿಯಾರನ್ನು ಸ್ಲಂ ಬೋರ್ಡ್‍ಗೆ ಸೇರಿಸಿದರೆ ನೂರಾರು ಮನೆ ಗ್ರ್ಯಾಂಟ್ ಲಭಿಸುತ್ತದೆ, ರಸ್ತೆ, ಚರಂಡಿ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆಂದು ಸ್ಲಂ ಬೋರ್ಡ್ ಸೇರಿಸುವಂತೆಯೂ, ತಾಲೂಕಿನ ಎಲ್ಲಾ ಹೋಬಳಿಯಲ್ಲಿರುವಂತೆ ಹುಳಿಯಾರಿಗೂ ವಸತಿ ಶಿಕ್ಷಣ ಶಾಲೆ ಕೊಡುವಂತೆ, ಚಿ.ನಾ.ಹಳ್ಳಿಗೆ ಪಾಲಿಟೆಕ್ನಿಕ್ ಕಾಲೇಜು, ಕೆಂಕೆರೆ ಮತ್ತು ಬರಶಿಡ್ಲಹಳ್ಳಿಗೆ ಪಶು ಆಸ್ಪತ್ರೆ, ಹುಳಿಯಾರು ಆಸ್ಪತ್ರೆ ಮೇಲ್ದರ್ಜೆಗೇರಿಸುವಂತೆ ಸರ್ಕಾರಕ್ಕೆ ಒತ್ತಡ ತರಲಾಗಿದೆ ಎಂದು ಅವರು ವಿವರಿಸಿದರು.
ಕೆಂಕೆರೆ ಗ್ರಾಪಂ ಅಧ್ಯಕ್ಷೆ ಆಶಾಉಮೇಶ್, ತಾಪಂ ಮಾಜಿ ಅಧ್ಯಕ್ಷ ಕೆಂಕೆರೆ ನವೀನ್, ಮಚ್ಚು ಬಸವರಾಜು, ಬೆಂಕಿಬಸವರಾಜು, ಭಟ್ಟರಹಳ್ಳಿ ದಿನೇಶ್, ಚನ್ನಬಸವಯ್ಯ, ಪಿಡಬ್ಲ್ಯೂಡಿ ಎಇಇ ಸಿ.ಎಸ್.ಚಂದ್ರಶೇಖರ್ ಸೇರಿದಂತೆ ಗುತ್ತಿಗೆದಾರರು ಮತ್ತಿತರರು ಪಾಲ್ಗೊಂಡಿದ್ದರು.