ಬಿಜೆಪಿ ಅಭ್ಯರ್ಥಿ ಜಿ ಎಸ್ ಬಸವರಾಜು ನಾಮಪತ್ರ

ತುಮಕೂರು

       ಸಾವಿರಾರು ಕಾರ್ಯಕರ್ತರ ಬೃಹತ್ ಶಕ್ತಿ ಪ್ರದರ್ಶನದೊಂದಿಗೆ ಮಾಜಿ ಸಂಸದ ಜಿ ಎಸ್ ಬಸವರಾಜು ಮಂಗಳವಾರ ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.ಇದೇ ಕ್ಷೇತ್ರದಿಂದ ಏಳು ಬಾರಿ ಲೋಕಸಭೆಗೆ ಸ್ಪರ್ಧಿಸಿ, ನಾಲ್ಕು ಸಾರಿ ಗೆಲುವು ಪಡೆದಿದ್ದ ಜಿಎಸ್‍ಬಿ, ಐದನೇ ಬಾರಿಗೆ ಪಾರ್ಲಿಮೆಂಟ್ ಪ್ರವೇಶಿಸಲು ಎಂಟನೇ ಚುನಾವಣೆಯಲ್ಲಿ ಪ್ರತಿಸ್ಪರ್ಧಿಯಾದ ಮೈತ್ರಿ ಪಕ್ಷದ ಅಭ್ಯರ್ಥಿ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರನ್ನು ಎದುರಿಸಲು ಸಜ್ಜಾಗಿದ್ದಾರೆ.

        ಇದಕ್ಕೂ ಮೊದಲು ಕುಣಿಗಲ್ ವೃತ್ತದ ಬಳಿಯ ಗಣೇಶ ದೇವಸ್ಥಾನದಲ್ಲಿ ಜಿಎಸ್‍ಬಿ ಹಾಗೂ ಮುಖಂಡರು ಹಾಜರಿದ್ದು ನಾಮಪತ್ರಕ್ಕೆ ಪೂಜೆ ಮಾಡಿಸಿದರು. ನಂತರ ಎಂಟು ವಿಧಾನ ಸಭಾಕ್ಷೇತ್ರಗಳಿಂದ ಬಂದು ಸೇರಿದ್ದ ಸಾವಿರಾರು ಕಾರ್ಯಕರ್ತರೊಂದಿಗೆ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ಬಸವರಾಜು ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಮಾಜಿ ಸಚಿವ, ಬಿಜೆಪಿ ಜಿಲ್ಲಾ ಉಸ್ತುವಾರಿ ವಿ. ಸೋಮಣ್ಣ ನೇತೃತ್ವದಲ್ಲಿ ಶಾಸಕರಾದ ಜೆ ಸಿ ಮಾಧುಸ್ವಾಮಿ, ಬಿ ಸಿ ನಾಗೇಶ್, ಜಿ ಬಿ ಜ್ಯೋತಿಗಣೇಶ್, ಮಸಾಲೆ ಜಯರಾಮ್, ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಶಾಸಕರಾದ ಸುರೇಶ್ ಗೌಡ, ಡಾ. ಎಂ ಆರ್ ಹುಲಿನಾಯ್ಕರ್ ಮೊದಲಾದ ಮುಖಂಡರು ಮೆರವಣಿಗೆಯಲ್ಲಿ ಜೊತೆಯಾಗಿದ್ದರು.

       ಕಾರ್ಯಕರ್ತರು ಬಿಜೆಪಿ ಬಾವುಟ ಹಿಡಿದು ಮೋದಿ ಮೋದಿ ಎಂದು ಘೋಷಣೆ ಕೂಗುತ್ತಾ ಮೆರವಣಿಗೆ ಸಾಗಿದರು. ವಿವಿಧ ಜಾನಪದ ಕಲಾತಂಡಗಳ ಆಕರ್ಷಕ ಪ್ರದರ್ಶನ ಮೆರವಣಿಗೆಯ ಸಂಭ್ರಮ ಹೆಚ್ಚಿಸಿತ್ತು. ಗಣೇಶ ದೇವಸ್ಥಾನದಿಂದ ಆರಂಭವಾಗಿ ಬಿ ಹೆಚ್ ರಸ್ತೆ, ಎಂ ಜಿ ರಸ್ತೆ ಮೂಲಕ ಮೆರವಣಿಗೆ ಸಾಗಿತು.

        ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಅವರಿಗೆ ಜಿ ಎಸ್ ಬಸವರಾಜು ನಾಮಪತ್ರ ಸಲ್ಲಿಸುವ ವೇಳೆ ವಿ ಸೋಮಣ್ಣ, ಜೆ ಸಿ ಮಾಧುಸ್ವಾಮಿ, ಸೊಗಡು ಶಿವಣ್ಣ, ಸುರೇಶ್ ಗೌಡ ಸಾಥ್ ನೀಡಿದ್ದರು.

ಅನುಭವಿ ನಾಯಕ

        ಜಿ ಎಸ್ ಬಸವರಾಜು ಅವರಿಗೆ ತುಮಕೂರು ಲೋಕಸಭಾ ಚುನಾವಣೆ ಹೊಸದಲ್ಲ. ಇಲ್ಲಿ ಏಳು ಬಾರಿ ಚುನಾವಣೆ ಎದುರಿಸಿದ್ದಾರೆ. 1984ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಇವರು ಮೊದಲ ಪ್ರಯತ್ನದಲ್ಲೇ ಪಾರ್ಲಿಮೆಂಟಿಗೆ ಆಯ್ಕೆಯಾದರು. ನಂತರ 1989ರ ಚುನಾವಣೆಯಲ್ಲೂ ಮರು ಆಯ್ಕೆಯಾದರು. 1991ರಲ್ಲಿ ನಡೆದ ಉಪಚುನಾವಣೆಯಲ್ಲಿ ಜಿಎಸ್‍ಬಿ ಪರಾಭವಗೊಂಡರು. ನಂತರದ ಎರಡು ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಬಸವರಾಜುರವರಿಗೆ ಸೀಟು ನಿರಾಕರಿಸಿತ್ತು. 1999ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಪಡೆದರು. ಮುಂದಿನ 2004ರ ಚುನಾವಣೆ ಸೋತರು. ಅದಾಗಿ 2009ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಲೋಕಸಭೆಗೆ ಆಯ್ಕೆಯಾದರು.

        2014ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಸವರಾಜು ಕಾಂಗ್ರೆಸ್‍ನ ಮುದ್ದಹನುಮೇಗೌಡರ ವಿರುದ್ಧ ಸೋಲು ಕಂಡರು. ಈಗ ತಮ್ಮ ಎಂಟನೇ ಚುನಾವಣೆಯಲ್ಲಿ ಬಿಜೆಪಿ ಹುರಿಯಾಳಾಗಿ ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಲೋಕಸಭಾ ಸಮರಕ್ಕೆ ಸಜ್ಜಾಗಿದ್ದಾರೆ.

ಶಾಸಕರಾಗಲಿಲ್ಲ.

        ತುಮಕೂರು ಬಳಿಯ ಗಂಗಸಂದ್ರದವರಾದ ಜಿ ಎಸ್ ಬಸವರಾಜು ಅವರು ಶಾಸಕರಾಗಬೇಕೆಂದು ಮೊದಲಿಗೆ ಬಯಸಿದ್ದರು. ಆದರೆ ಅವರಿಗೆ ಶಾಸಕ ಸ್ಥಾನಕ್ಕಿಂತಾ ಸಂಸತ್ ಸ್ಥಾನವೇ ಒಲಿದುಬಂದಿತ್ತು. ಸಂಸತ್ ಚುನಾವಣೆಗೆ ಪ್ರಯತ್ನಿಸುವ ಮೊದಲು ಗುಬ್ಬಿ ಕ್ಷೇತ್ರದಿಂದ ರೆಡ್ಡಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದರು. ನಂತರ ಇಂದಿರಾ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದರು. ಈ ಎರಡೂ ಚುನಾವಣೆಗಳಲ್ಲೂ ಸೋತರು. ನಂತರ ಜಿಎಸ್‍ಬಿ ಶಾಸಕ ಸ್ಥಾನದ ಪ್ರಯತ್ನ ಮಾಡಲಿಲ್ಲ, ಲೋಕಸಭಾ ಸದಸ್ಯರಾಗಿ ಗೆಲ್ಲುತ್ತಾ ಹೋದರು.

      ಸತತ 22 ವರ್ಷ ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷಗಾಗಿ ಜಿ ಎಸ್ ಬಸವರಾಜು ದಾಖಲು ಮಾಡಿದ್ದಾರೆ. ಇದಲ್ಲದೆ ಸೋನಿಯಾ ಗಾಂಧಿಯವರು ಅಧ್ಯಕ್ಷರಾಗಿದ್ದ ಕಾಂಗ್ರೆಸ್ ಪಕ್ಷದ ಪಾರ್ಲಿಮೆಂಟ್ ಬೋರ್ಡ್ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ ಬಸವರಾಜು, ಕಾಂಗ್ರೆಸ್ ಪಕ್ಷದಲ್ಲಿ ಪ್ರಭಾವಿ ನಾಯಕರಾಗಿದ್ದರು. ನಂತರ ಕಾಂಗ್ರೆಸ್ ಪಕ್ಷದಲ್ಲಿ ಆದ ರಾಜಕೀಯ ಬದಲಾವಣೆಯಿಂದ ಬೇಸತ್ತು ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರ್ಪಡೆಯಾಗಿ ಒಮ್ಮೆ ಬಿಜೆಪಿ ಸಂಸದರಾಗಿಯೂ ಚುನಾಯಿತರಾಗಿದ್ದರು. ಈಗ ಬಿಜೆಪಿ ಅಭ್ಯರ್ಥಿಯಾಗಿ ಮತ್ತೊಂದು ಚುನಾವಣೆ ಎದುರಿಸಲು ಸಿದ್ಧವಾಗಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link