ಬೆಂಗಳೂರು
ಈಟಿವಿ, ಜಿಟಿವಿ, ಕಸ್ತೂರಿ ಹಾಗೂ ಪ್ರಜಾಟಿವಿಯ ಮೊದಲ ಸುದ್ದಿವಾಚಕರಾಗಿ ನಾಡಿನ ಗಮನ ಸೆಳೆದಿದ್ದ ಗಜಾನನ ಹೆಗಡೆ ನಿಧನರಾಗಿದ್ದಾರೆ. ಅವರಿಗೆ 51 ವರ್ಷ ವಯಸ್ಸಾಗಿತ್ತು.
ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಗಜಾನನ ಹೆಗಡೆ ರಂಗಭೂಮಿ, ಸಂಗೀತ, ಹಿನ್ನೆಲೆ ಕಂಠದಾನ ಕಲಾವಿದ ಸೇರಿದಂತೆ ಹತ್ತು ಹಲವು ಆಯಾಮಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದರು.
ಕೆಲಕಾಲದಿಂದ ಅಸ್ವಸ್ಥತೆಯಿಂದ ಬಳಲುತ್ತಿದ್ದ ಅವರು, ಇಂದು ಕಿಮ್ಸ್ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ನಿರರ್ಗಳ ಮಾತು, ವಾಗ್ಮಿತೆಯಿಂದ ಗಜಾನನ ಹೆಚ್ಚು ಜನಪ್ರಿಯತೆ ಗಳಿಸಿದ್ದರು. ಅಚ್ಚುಕಟ್ಟಾದ ನಿರೂಪಣೆಗೆ ಹೆಸರಾಗಿದ್ದ ಅವರು, ಕಳೆದ ಎರಡು ದಶಕಗಳಲ್ಲಿ ಹಲವು ನಿರೂಪಕರನ್ನು ಹುಟ್ಟು ಹಾಕಿದ್ದರು.
ಹೆಗಡೆ ಈಟಿವಿಯಿಂದ ಪ್ರವರ್ಧಮಾನಕ್ಕೆ ಬಂದವರು. ಹಮೀದ್ ಪಾಳ್ಯ, ಜಯಪ್ರಕಾಶ ಶೆಟ್ಟಿ, ರಂಗನಾಥ ಭಾರದ್ವಾಜ್ ಮತ್ತಿತರ ಪ್ರಮುಖ ನಿರೂಪಕರು ಇವರ ಸಹೋದ್ಯೋಗಿಯಾಗಿದ್ದವರು. ಸಜ್ಜನ, ಸ್ವಾಭಿಮಾನಿ, ಸಂಸ್ಕಾರವಂತ, ಸಂಗೀತ ಪ್ರೇಮಿ ಆಗಿದ್ದ ಹೆಗಡೆ ಬಹುಮುಖ ಪ್ರತಿಭಾವಂತ.
ನೀನಾಸಂ ವಿದ್ಯಾರ್ಥಿಯಾಗಿದ್ದ ಅವರು ಇತ್ತೀಚೆಗೆ ಬದುಕು ನಡೆಸಲು ತುಂಬಾ ಹೆಣಗಾಡಿದ್ದರು. ಜಾತ್ಯಾತೀತ ಮನೋಭಾವ ಹೊಂದಿದ್ದ ಹೆಗಡೆ ಅವರ ಪ್ರತಿಭೆಯ ಅನಾವರಣಕ್ಕೆ ಸರಿಯಾದ ಅವಕಾಶ ಸಿಗಲಿಲ್ಲ. ಹಲವು ವಲಯಗಳಲ್ಲಿ ಅಗಾಧ ಪ್ರತಿಭೆ ಹೊಂದಿದ್ದ ಗಜಾನನ ಹೆಗಡೆ ಅವರು ಯಾವುದೇ ಕ್ಷೇತ್ರದಲ್ಲಿ ಹೆಚ್ಚು ಕಾಲ ತಮ್ಮನ್ನು ಅರ್ಪಿಸಿಕೊಂಡಿರಲಿಲ್ಲ.
ಇತ್ತೀಚೆಗೆ ವೈವಾಹಿಕ ಬದುಕಿನಲ್ಲೂ ವಿಫಲರಾಗಿದ್ದ ಗಜಾನನ ಹೆಗಡೆ ಅವರನ್ನು ಅವರ ಸಂಗಾತಿ ಮತ್ತು ಮಕ್ಕಳು ತೊರೆದು ದೂರ ಉಳಿದಿದ್ದರು ಎನ್ನಲಾಗಿದೆ. ವಿದ್ಯುನ್ಮಾನಮಾಧ್ಯಮಗಳಲ್ಲಿ ವೇತನ ಸಮಸ್ಯೆ ಎದುರಾದ ನಂತರ ಅವರ ಬದುಕು ಮತ್ತಷ್ಟು ದುರ್ಬರಗೊಂಡಿತ್ತು. ಇತ್ತೀಚೆಗೆ ಮನೆಯಲ್ಲಿ ಮಕ್ಕಳಿಗೆ ಸಂಗೀತ ಹೇಳಿಕೊಟ್ಟು ಜೀವನ ಸಾಗಿಸುತ್ತಿದ್ದರು.
ಏನೇನೋ ಆಗಬಹುದಾಗಿದ್ದವರು ಯಾವ್ಯಾವುದೋ ಕಾರಣಗಳಿಂದಾಗಿ ತಮ್ಮ ಸಾಮರ್ಥ್ಯಕ್ಕೆ ತಕ್ಕ ಎತ್ಕರವನ್ನೇರದೆ ವಿದಾಯ ಹೇಳಿಬಿಡುತ್ತಾರೆ. ಅಂತಹ ಸಾಲಿಗೆ ಗಜಾನನ ಹೆಗಡೆ ಸೇರ್ಪಡೆಯಾಗಿದ್ದಾರೆ. ಸಂಗೀತ ಅಥವಾ ರಂಗಭೂಮಿ ಯನ್ನೇ ಬದುಕಾಗಿಸಿಕೊಂಡಿದ್ದರೆ ನಾಡಿನ ದಿಗ್ಗಜರ ಸಾಲಿನಲ್ಲಿ ಅವರು ನಿಲ್ಲಬಹುದಾಗಿತ್ತು. ಗಜಾನನ ಹೆಗಡೆ. ಪರಿಸ್ಥಿತಿಯ ಕೈಗೊಂಬೆಯಾಗಿ ಅಧೀರರಾಗದಿದ್ದರೆ ಟೀವಿ ನಿರೂಪಕರಾಗಿಯೂ ಎತ್ತರಕ್ಕೇರಬಹುದಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








