ತಿಪಟೂರು
ಮಹಾತ್ಮ ಗಾಂಧೀಜಿಯವರು ಭೌತಿಕವಾಗಿ ಇಲ್ಲದಿದ್ದರೂ ಅವರ ಆದರ್ಶಗಳು ಎಲ್ಲರಿಗೂ ದಾರಿದೀಪವಾಗಿವೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಪ್ರಧಾನ ಕಾರ್ಯದರ್ಶಿ ಮಾದಾಪುರ ಶಿವಪ್ಪ ತಿಳಿಸಿದರು.
ನಗರದ ನಿವೃತ್ತ ನೌಕರರ ಸಂಘದ ಆವರಣದಲ್ಲಿ ತಾಲ್ಲೂಕು ನಿವೃತ್ತ ನೌಕರರ ಸಂಘದ ವತಿಯಿಂದ ನಡೆದ ಮಾಸಿಕ ಸಭೆಯಲ್ಲಿ ಗಾಂಧಿ ಜಯಂತಿ, ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಎಂಜಿನಿಯರ್ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು,
ಗಾಂಧೀಜಿಯವರು ನಮಗೆ ಮಾರ್ಗದರ್ಶಕರೂ, ಚಿಂತನಾಶೀಲರಾಗಿದ್ದು, ಅವರ ನಿಸ್ವಾರ್ಥ ಆದರ್ಶ ನಮ್ಮ ಮುಂದಿದೆ. ಗಾಂಧೀಜಿಯವರು ಶ್ರೀಮಂತ ಕುಟುಂಬದಲ್ಲಿ ಜನಿಸಿದರೂ ಸರಳ ಜೀವನ ಅನುಭವಿಸುತ್ತಾ ಆತ್ಮತೃಪ್ತಿಯನ್ನು ಕಂಡುಕೊಳ್ಳುತ್ತಿದ್ದರು. 1928ರಲ್ಲಿ ತಿಪಟೂರಿಗೆ ಗಾಂಧೀಜಿ ಆಗಮಿಸಿದ್ದರು. ಅವರು ನಡೆದಾಡಿದ ಈ ಭೂಮಿ ನಿಜಕ್ಕೂ ಶ್ರೇಷ್ಠ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಜಿ.ಟಿ. ಶಂಕರೇಗೌಡರು ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಸುತ್ತಾ ಅ.10 ರಂದು ಬೆಳಿಗ್ಗೆ 10 ಗಂಟೆಗೆ ಸಂಘದ ಆವರಣದಲ್ಲಿ ಜೈನ್ ಆಸ್ಪತ್ರೆ ವತಿಯಿಂದ ಮೆಡಿಕಲ್ ಕ್ಯಾಂಪ್ ಆಯೋಜಿಸಿದ್ದು ಸದಸ್ಯರು, ಸಾರ್ವಜನಿಕರು ಭಾಗವಹಿಸಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಎಂಜಿನಿಯರ್ ಬಿ. ಮಂಜುನಾಥ್ರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ಬಾಲಕೃಷ್ಣ, ಸದಸ್ಯರಾದ ಕೆ. ಮಲ್ಲಪ್ಪ, ವಿ.ಎನ್. ಮಹದೇವಯ್ಯ ಸೇರಿದಂತೆ ಇತರೆ ಸದಸ್ಯರು ಭಾಗವಹಿಸಿದ್ದರು.
