ದಾವಣಗೆರೆ
ಕಂಪ್ಲಿ ಶಾಸಕ ಗಣೇಶ್ ಇತ್ತೀಚೆಗೆ ಈಗಲ್ಟನ್ ರೆಸಾರ್ಟ್‍ನಲ್ಲಿ ತೋರಿದ ವರ್ತನೆಯಿಂದಾಗಿ ರಾಜಕಾರಣಿಗಳಿಗೆ ಇದ್ದ ಅಲ್ಪಸ್ವಲ್ಪ ಮರ್ಯಾದೆಯೂ ಹೋಗುವಂತಾಗಿದ್ದು, ಇದು ಸಾರ್ವಜನಿಕ ವಲಯದಲ್ಲಿ ತಲೆ ತಗ್ಗಿಸುವಂತಹ ವಿಚಾರವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಶ್ರೀನಿವಾಸ ತಿಳಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಯ ಶಾಸಕ ಆನಂದ್ ಸಿಂಗ್ ಮೇಲೆ ಶಾಸಕ ಗಣೇಶ್ ಹಲ್ಲೆ ಮಾಡಿದ್ದು ಸರಿಯಲ್ಲ. ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿರುವ ಗಣೇಶ್ ವಿರುದ್ಧ ಪೊಲೀಸ್ ಇಲಾಖೆಯು ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಿದ್ದು, ಈ ವಿಚಾರದಲ್ಲಿ ಸರ್ಕಾರವು ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದರು.ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಅದೇ ಪಕ್ಷದ ಶಾಸಕ ಗಣೇಶ್ ವಿರುದ್ಧ ಇಲಾಖೆ ಸೂಕ್ತ ಕಾನೂನು ಕ್ರಮ ಜರುಗಿಸಲಿದೆ. ಈ ವಿಚಾರದಲ್ಲಿ ಸರ್ಕಾರದ ಮಧ್ಯ ಪ್ರವೇಶದ ಪ್ರಶ್ನೆಯೇ ಇಲ್ಲ ಎಂದರು.
ತುಮಕೂರು ಶ್ರೀಸಿದ್ಧಗಂಗಾ ಮಠದಲ್ಲಿ ಸರ್ಕಾರದ ನಿರ್ದೇಶನದಂತೆ ಅಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಗೋಪಿನಾಥ್ ಕಾರ್ಯ ನಿರ್ವಹಿಸಿದ್ದಾರೆ. 15 ಲಕ್ಷ ಜನರಲ್ಲಿ ಸಚಿವರನ್ನು ಗುರುತಿಸುವುದು ಸಹಜವಾಗಿಯೇ ಯಾರಿಗಾದರೂ ಕಷ್ಟ ಎಂದರು.
ಶ್ರೀ ಸಿದ್ದಗಂಗಾ ಮಠಕ್ಕೆ ಲಿಂಗೈಕ್ಯ ಡಾ.ಶಿವಕುಮಾರ ಮಹಾಸ್ವಾಮಿಗಳ ಅಂತಿಮ ದರ್ಶನಕ್ಕೆ ಸುಮಾರು 15 ಲಕ್ಷಕ್ಕೂ ಅಧಿಕ ಭಕ್ತ ಸಾಗರವೇ ಹರಿದು ಬರುತ್ತಿತ್ತು. ಸಹಜವಾಗಿಯೇ ಸರ್ಕಾರದ ನಿರ್ದೇಶನದಂತೆ ಅಂದು ಎಸ್ಪಿ ದಿವ್ಯಾ ಗೋಪಿನಾಥ್ ಕಾರ್ಯ ನಿರ್ವಹಿಸಿದ್ದಾರಷ್ಟೇ ಎಂದ ಅವರು, ಗುರುತಿನ ಪತ್ರ ಇಲ್ಲದಿದ್ದರೆ ಒಳಗೆ ಬಿಡುವುದಿಲ್ಲವೆಂದು ಸಚಿವರನ್ನು ತಡೆದಿದಿದ್ದರು. ಅಲ್ಲಿಯೇ ಸಮೀಪವಿದ್ದ ನಾನು ಅಹಿತಕರ ಘಟನೆ ನಡೆಯುವ ವಿಚಾರ ತಿಳಿಯುತ್ತಲೇ ಸ್ಥಳಕ್ಕೆ ತೆರಳಿ, ಪರಿಸ್ಥಿತಿ ತಿಳಿಗೊಳಿಸಿದ್ದೇನೆಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
