ಬೆಂಗಳೂರು
ಮೈಸೂರಿನಿಂದ ಸ್ನೇಹಿತನಿಂದ ಗಾಂಜಾ ತರಿಸಿಕೊಂಡು ಕಾರಿನಲ್ಲಿ ಸಂಚರಿಸುತ್ತ ಮಾರಾಟ ಮಾಡುತ್ತಿದ್ದ ತರಕಾರಿ ವ್ಯಾಪಾರಿಯೊಬ್ಬನನ್ನು ಸುದ್ದಗುಂಟೆಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ಮಡಿವಾಳದ ಸಿದ್ದಾರ್ಥ ನಗರದ ಮಂಜುನಾಥ (30) ಬಂಧಿತ ಆರೋಪಿಯಾಗಿದ್ದಾನೆ.ಬಂಧಿತನಿಂದ 1 ಲಕ್ಷ ಮೌಲ್ಯದ 4 ಕೆಜಿ ಗಾಂಜಾ, ಹೋಂಡಾ ಸಿಟಿ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಡಾ. ಬೋರಲಿಂಗಯ್ಯ ತಿಳಿಸಿದ್ದಾರೆ.
ಆರೋಪಿಯು ಮೈಸೂರಿನ ಸ್ನೇಹಿತ ಆನಂದ್ ಎಂಬಾತನಿಂದ ಗಾಂಜಾ ಖರೀದಿಸಿಕೊಂಡು ಬಂದು ಬಿಸ್ಮಿಲ್ಲಾ ನಗರ, ಬಿಜಿ ರೋಡ್, ಬಿಇಟಿ ಕಾಲೇಜು ಇನ್ನಿತರ ಕಡೆಗಳಲ್ಲಿ ಹೋಂಡಾ ಸಿಟಿ ಕಾರಿನಲ್ಲಿ ಸಂಚರಿಸುತ್ತ ಮಾರಾಟ ಮಾಡುತ್ತಿದ್ದ.ಗಾಂಜಾ ಖರೀದಿ ಮಾಡುತ್ತಿದ್ದ ವ್ಯಕ್ತಿಯೊಬ್ಬ ನೀಡಿದ ಮಾಹಿತಿಯಾಧರಿಸಿ ಕಾರ್ಯಾಚರಣೆ ನಡೆಸಿದ ಸುದ್ದಗುಂಟೆ ಪಾಳ್ಯ ಪೊಲೀಸ್ ಇನ್ಸ್‍ಪೆಕ್ಟರ್ ಮತ್ತವರ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯು ಮಡಿವಾಳದಲ್ಲಿ ತರಕಾರಿ ಅಂಗಡಿ ಇಟ್ಟುಕೊಂಡಿದ್ದು, ತಾಯಿಯನ್ನು ಅಂಗಡಿಯಲ್ಲಿ ಬಿಟ್ಟು ಗಾಂಜಾ ಮಾರಾಟ ಮಾಡಲು ತೆರಳುತ್ತಿದ್ದು, ಇದೇ ಮೊದಲ ಬಾರಿಗೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.
ಇಸ್ಪೀಟ್ ಅಡ್ಡೆ ಮೇಲೆ ದಾಳಿ
ಮಹದೇವಪುರದ ಕಾಮಧೇನು ಲೇಔಟ್‍ನ ಖಾಲಿ ನಿವೇಶನವೊಂದರ ಶೆಡ್‍ನಲ್ಲಿ ನಡೆಸುತ್ತಿದ್ದ ಇಸ್ಪೀಟ್ ದಂಧೆಯ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು 10 ಮಂದಿಯನ್ನು ಬಂಧಿಸಿ 1 ಲಕ್ಷ 11 ಸಾವಿರ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ.
ಬೈಕ್‍ಗೆ ಬೆಂಕಿ
ಕಾಮಾಕ್ಷಿಪಾಳ್ಯದ ಪೈಪ್‍ಲೈನ್ ರಸ್ತೆಯ ಮೊದಲ ಕ್ರಾಸ್‍ನ ಮನೆಯ ಮುಂಭಾಗ ನಿಲ್ಲಿಸಿದ್ದ ಸುಜುಕಿ ಬೈಕ್‍ಗೆ ದುಷ್ಕರ್ಮಿಗಳು ಮಂಗಳವಾರ ರಾತ್ರಿ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.ಬೆಂಕಿಯಿಂದ ಬೈಕ್ ಸಂಪೂರ್ಣ ಸುಟ್ಟು ಹೋಗಿದ್ದು, ಈ ಸಂಬಂಧ ದೂರು ದಾಖಲಿಸಿರುವ ಕಾಮಾಕ್ಷಿ ಪಾಳ್ಯ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.