ಕುಣಿಗಲ್
ಸರ್ಕಾರ ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ನಾಗರೀಕರಲ್ಲಿಯೂ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುತ್ತಲೇ ಬಂದಿದೆ. ಆದರೆ ನಮ್ಮ ಕುಣಿಗಲ್ ಪಟ್ಟಣದ ಕೆಲವೆಡೆ ಕಸದ ರಾಶಿ ಬಿದ್ದು ತಿಪ್ಪೆಯಾಗಿ ನಿರ್ಮಾಣವಾಗಿದ್ದರೂ ಸ್ವಚ್ಛತೆಗೆ ಮಾತ್ರ ಪುರಸಭೆ ಆದ್ಯತೆ ಕೊಡುವಲ್ಲಿ ವಿಫಲವಾಗಿದೆ ಎಂಬುದಕ್ಕೆ ಈ ತಿಪ್ಪೇರಾಶಿ ಸಾಕ್ಷಿಯಾಗಿದೆ.
ಪುರಸಭೆಯ ಚುನಾವಣೆ ಸಮೀಪಿಸುತ್ತಿರುವುದರಿಂದ ಈಗಿನ ಪುರಸಭಾ ಸದಸ್ಯರುಗಳು ಸೇರಿದಂತೆ ಹೊಸ ಆಕಾಂಕ್ಷಿಗಳ ಪಟ್ಟಿ ನಿತ್ಯ ಬೆಳೆಯುತ್ತಲೇ ಇದೆ. ಆದರೆ ಇಲ್ಲಿ ಸ್ವಚ್ಛತೆಗೆ ಮಾತ್ರ ಒತ್ತು ಕೊಟ್ಟು ನಿಂತು ಸ್ವಚ್ಛತೆ ಮಾಡಿಸುವವರು ಇಲ್ಲದಂತಾಗಿದೆ.
ಪಟ್ಟಣದಲ್ಲಿರುವ ಏಕೈಕ ಉದ್ಯಾನವನ ಇರುವುದು ತುಮಕೂರು ರಸ್ತೆಯ ಮಹಾವೀರನಗರದಲ್ಲಿ ಪಟ್ಟಣದಲ್ಲಿ ಇನ್ನೂ ಕೆಲವು ಉದ್ಯಾನವನಗಳು ಇವೆ. ಆದರೆ ನಾಗರೀಕರಿಗೆ ಹೆಚ್ಚು ಪ್ರಿಯವಾದ ಮತ್ತು ಪರಿಚಿತವಾದ ಉದ್ಯಾನವನ ಇದೊಂದೆ. ಈ ಉದ್ಯಾನವನಕ್ಕೆ ಹೊಂದಿಕೊಂಡಂತೆ ಸಾರ್ವಜನಿಕ ಕಚೇರಿಗಳು ಸೇರಿದಂತೆ ಶಾಲಾ ಕಾಲೇಜುಗಳು, ಸಂತೆ ಮೈದಾನ, ದೇವಾಲಯಗಳು ಇದ್ದು ನಿತ್ಯ ಸಾವಿರಾರು ಜನ ಸಂಚರಿಸುವ ಜನನಿಬೀಡ ಸ್ಥಳವಾಗಿದೆ.
ಇಲ್ಲಿ ಸಂತೆ ನಡೆಯುವುದು ಬುಧವಾರ ಮಾತ್ರ. ಆದರೆ ನಿತ್ಯ ಮುಂಜಾನೆಯ ಸಂತೆ ನಡೆಯುತ್ತಲೇ ಇರುತ್ತದೆ. ಆದ್ದರಿಂದ ಇಲ್ಲಿ ಕಸದ ರಾಶಿ ಹೆಚ್ಚಾಗುತ್ತಲೇ ಇರುತ್ತದೆ. ಪುರಸಭೆಯವರು ಮಾತ್ರ ವಾರಕ್ಕೆ ಒಮ್ಮೆ ಮಾತ್ರ ಸ್ವಚ್ಛತೆ ಮಾಡುತ್ತಾರೆ ಎಂಬುದು ಈ ಭಾಗದ ನಾಗರೀಕರ ಮತ್ತು ವಿದ್ಯಾರ್ಥಿಗಳ ಅಳಲು. ಇಲ್ಲಿ ಕೊಳೆತ ಸೊಪ್ಪು ಸೇರಿದಂತೆ ವಿವಿಧ ಬಗೆಯ ತ್ಯಾಜ್ಯ ಹಾಕುವುದರಿಂದ ಗಬ್ಬೆದ್ದು ನಾರುತ್ತದೆ.
ಇದೇ ಮಾರ್ಗವಾಗಿ ಶಾಲಾ , ಕಾಲೇಜು, ಗ್ರಂಥಾಲಯಕ್ಕೆ ಹೋಗುವ ವಿದ್ಯಾರ್ಥಿಗಳು ಮತ್ತು ಜನರು ಮೂಗು ಹಿಡಿದು ಸಾಗುತ್ತ ಪುರಸಭೆಗೆ ಹಿಡಿಶಾಪ ಹಾಕುತ್ತ ತೆರಳುವುದು ಮಾಮೂಲಿ. ಇನ್ನೂ ಹಳ್ಳಿಗಾಡಿನ ಜನರು ತಾವು ಬೆಳೆದ ತರಕಾರಿಯನ್ನು ಸಂತೆಗೆ ಮಾರಾಟ ಮಾಡಲು ಬರುವವರು ಅಯ್ಯೋ ನಮ್ಮ ಹಳ್ಳಿನೇ ಎಷ್ಟೋ ಉತ್ತಮ ಇದೇನು ಊರಾ, ಸಿಟಿನಾ ಎಂದು ಕುಣಿಗಲ್ ಪಟ್ಟಣವನ್ನು ಜರಿಯುತ್ತ ಇಲ್ಲಿನ ಜನಪ್ರತಿನಿಧಿಗಳಿಗೆ ಹಾಗೂ ಪುರಸಭಾ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತ ನಗರದ ನಾಗರೀಕರನ್ನೂ ವ್ಯಂಗ್ಯವಾಗಿ ಮಾತನಾಡಿಸಿ ನೋಡಪ್ಪಾ ನಿಮ್ಮ ಸಿಟಿನಾ ಎನ್ನುತ್ತಿದ್ದಾರೆ.
ಇನ್ನೂ ಇಲ್ಲಿರುವ ಉದ್ಯಾನವನವನ್ನ ಕೆಲ ದಶಕಗಳ ಹಿಂದೆ ಮೈಸೂರು ಸಂಸ್ಥಾನದಲ್ಲಿ ಎಂ.ಆರ್.ಎ. ಆಗಿದ್ದ ಬಾಳೇಗೌಡರು ಸುಮಾರು 7 ಎಕರೆ ಭೂಮಿಯನ್ನ ದಾನ ನೀಡಿದ್ದರು. ಇಂತಹ ಉದ್ಯಾನವನ ಇತ್ತೀಚೆಗೆ ಸುಂದರವಾಗಿರುವುದರಿಂದ ನೂರಾರು ನಾಗರೀಕರು ಬೆಳಗಿನ ವಾಯುವಿಹಾರಕ್ಕೆ ಆಗಮಿಸುತ್ತಾರೆ. ಇದೇ ಪಾರ್ಕ್‍ನ ಒಂದು ಮೂಲೆಯಲ್ಲಿ ತಿಪ್ಪೇರಾಸಿ ಗಬ್ಬೆದ್ದು ದುರ್ನಾಥ ಬೀರುತ್ತಿರುವ ದೃಶ್ಯವನ್ನು ಸಂಬಂಧ ಪಟ್ಟವರಿಗೆ ಹಲವು ಬಾರಿ ತಿಳಿಸಿದರೂ ಪ್ರಯೋಜನಕ್ಕೆ ಬಾರದೇ ಹೋಗಿದೆ. ಇನ್ನೂ ಈ ಭಾಗದ ಪುರಸಭಾ ಸದಸ್ಯರಾಗಲಿ ಅಥವಾ ಅಧಿಕಾರಿಗಳಾಗಲಿ ಗಮನಹರಿಸಿ ನಾಗರೀಕರ ಆರೋಗ್ಯಕ್ಕೆ ಧಕ್ಕೆ ಉಂಟಾಗುವುದನ್ನ ತಪ್ಪಿಸುತ್ತಾರೆಯೇ ಕಾದು ನೋಡಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ