ದಾವಣಗೆರೆ :
ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿಯತ್ತ ಸಾಗುತ್ತಿರುವ ದಾವಣಗೆರೆಯಲ್ಲಿ ಕಸ ನಿರ್ವಹಣೆಯೇ ಬಹು ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಪಾಲಿಕೆಯ ಉಪ ಮೇಯರ್ ಕೆ. ಚಮನ್ ಸಾಬ್ ಬೇಸರ ವ್ಯಕ್ತಪಡಿಸಿದರು.
ನಗರದ ಎಸ್.ಎ.ಜಿ.ಬಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ‘ಸ್ವಚ್ಚ ಭಾರತ’ (ನಗರ) ಕುರಿತು ಕ್ಷೇತ್ರ ಜನಸಂಪರ್ಕ ಕಾರ್ಯಾಲಯ, ಎಸ್.ಎ.ಜಿ.ಬಿ ಸಂಯುಕ್ತ ಪದವಿ ಪೂರ್ವ ಕಾಲೇಜು, ಮಹಾನಗರ ಪಾಲಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಸ್ವಚ್ಛ ಭಾರತ ಮಿಷನ್ ಕುರಿತ ವಿಶೇಷ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು
ಮೊದಲು ನಮ್ಮನ್ನು ನಾವು ಬದಲು ಮಾಡಿಕೊಳ್ಳಬೇಕಿದೆ. ಎಲ್ಲಿಯವರೆಗೆ ನಮ್ಮನ್ನು ನಾವು ಬದಲಾವಣೆಗೆ ಒಡ್ಡಿಕೊಳ್ಳುವುದಿಲ್ಲವೋ, ಅಲ್ಲಿಯವರೆಗೆ ಬದಲಾವಣೆ ಅಸಾಧ್ಯ. ಹಾಗಾಗಿ ನಾವು ನಮ್ಮ ಮನೆ, ಮನ, ಓಣಿ, ಕೇರಿ, ಏರಿಯಾಗಳನ್ನು ಸ್ವಚ್ಛವಾಗಿಟ್ಟುಕೊಳ್ಳೋಣ. ಹಾಗಾದಾಗ ತನ್ನಂತಾನೇ ಎಲ್ಲವೂ ಸ್ವಚ್ಛವಾಗುತ್ತದೆ ಎಂದರು.
ಬೆಳೆಯುತ್ತಿರುವ ನಗರಗಳಲ್ಲಿ ಅನುತ್ಪಾದಕ ಕಸದ ಪ್ರಮಾಣವು ಹೆಚ್ಚಾಗಿದೆ. ನಗರದಲ್ಲಿ ನೂರಾರು ಸಂಖ್ಯೆಯ ವಾಹನಗಳು, ಸಾವಿರಾರು ಸಿಬ್ಬಂದಿ ನೌಕರರ ವರ್ಗ ಈ ಸಮಸ್ಯೆಗೆ ಶ್ರಮಿಸುತ್ತಿದ್ದರೂ ತಾರ್ಕಿಕ ಅಂತ್ಯ ಹಾಡಲಾಗಿಲ್ಲ. ಹಾಗಾಗಿ ನಾವು ಮೂಲದಲ್ಲ್ಲಿಯೇ ಸಮಸ್ಯೆಗೆ ಪರಿಹಾರ ಹುಡುಕಿಕೊಂಡು ಮನೆಯಲ್ಲಿಯೇ ಹಸಿಕಸ-ಒಣಕಸ ಎಂದು ಬೇರ್ಪಡಿಸಿ ಗಾಡಿಗಳಿಗೆ ನೀಡುವ ಮೂಲಕ ಸ್ವಚ್ಛ ಭಾರತ ಅಭಿಯಾನಕ್ಕೆ ಕೈ ಜೋಡಿಸೋಣ ಎಂದು ಕರೆ ನೀಡಿದರು.
ಇಂದು ಬಳಕೆ ಆಗುತ್ತಿರುವ ಅತಿಯಾದ ಪ್ಲಾಸ್ಟಿಕ್, ರಸ್ತೆಗಳ ಕಾಂಕ್ರೀೀಕರಣ ಹಸಿರಿಗೆ ಬಹಳ ಅಪಾಯವನ್ನೊಡ್ಡುತ್ತಿವೆ. ಹಾಗಾಗಿ ಇಂದಿನ ಯುವ ಪೀಳಿಗೆ ತಂದೆ ತಾಯಿಗಳಿಗೆ ಒಳ್ಳೇಯ ಮಕ್ಕಳಾಗಿ, ಗುರುಗಳಿಗೆ ಒಳ್ಳೇಯ ವಿದ್ಯಾರ್ಥಿಗಳಾಗಿ, ಪರಿಸರಕ್ಕೆ ಕೊಡುಗೆ ನೀಡುವ ವಿದ್ಯಾರ್ಥಿಗಳಾಗಬೇಕೆಂದು ಕಿವಿಮಾತು ಹೇಳಿದರು.
ಸ್ವಚ್ಛ ಸರ್ವೇಕ್ಷಣಾ ಅಭಿಯಾನ ಸಾರ್ವಜನಿಕ ಸಹಭಾಗಿತ್ವ ವಿಭಾಗದ ವಿಜೇತ ಆದ ಟಿ.ಎಸ್. ಮಹದೇವಸ್ವಾಮಿ ಮಾತನಾಡಿ, ಮಕ್ಕಳ ಹಂತದಲ್ಲಿಯೇ ಸ್ವಚ್ಛ ಭಾರತದ ಪ್ರಜ್ಞೆ-ಪರಿಸರ ಪ್ರಜ್ಞೆ ಮೂಡಿಸಬೇಕಾಗಿದೆ. ಸ್ವಚ್ಛ ದಾವಣಗೆರೆ ನಮ್ಮ ಗುರಿ ಎಂಬ ದೃಢ ಸಂಕಲ್ಪ ಮಾಡಿದರೆ ಮಾತ್ರ ಕಾರ್ಯದಲ್ಲಿ ಯಶಸ್ಸು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಮಾಧ್ಯಮಗಳ ಸಹಕಾರದ ಕೊರತೆ ಬಹಳ ಕಾಣ ಬರುತ್ತಿದೆ.
ಬೇರೆ ಕಾರ್ಯಕ್ರಮಗಳನ್ನು ವೈಭವೀಕರಿಸುವಂತೆ ಸ್ವಚ್ಚ ಭಾರತದ ಕೆಲಸಗಳನ್ನು ಹೆಚ್ಚು ಹೆಚ್ಚು ಪ್ರಸಾರ ಮಾಡಿದರೆ ಸಾರ್ವಜನಿಕರಿಗೆ ತಿಳುವಳಿಕೆ ಮೂಡಲಿದೆ ಎಂದರು. ಇತ್ತೀಚೆಗೆ ಬಿಡುಗಡೆಯಾಗಿರುವ ವರದಿಯಂತೆ ಮಾಲಿನ್ಯದಲ್ಲಿ ದಾವಣಗೆರೆ ಐದನೇ ಸ್ಥಾನದಲ್ಲಿದೆ. ಈ ಅತಿಯಾದ ಮಾಲಿನ್ಯ ಕ್ಯಾನ್ಸರ್‍ನಂತಹ ಮಾರಕ ಖಾಯಿಲೆಗಳಿಗೆ ಕಾರಣವಾಗಬಹುದು. ಹಾಗಾಗಿ ಆ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದರು.
‘ಭೂಮಿ ಉಳಿಸಿ’ ಎಂಬ ಆಂದೋಲನ ಹಮ್ಮಿಕೊಳ್ಳಬೇಕಾದ ಪರಿಸ್ಥತಿ ಬಂದೊದಗಿದೆ. ನಮ್ಮ ತಾತ ಅಪ್ಪಂದಿರ ಕಾಲದಲ್ಲಿದ್ದ ಸ್ವಚ್ಚ ಪರಿಸರ ಈಗಿಲ್ಲ. ದಿನೇ ದಿನೇ ವಿಷಮ ಪರಿಸ್ಥಿತಿಯತ್ತ ಪರಿಸರ ಸಾಗುತ್ತಿದೆ. ಹಾಗಾಗಿ ನಾವು ಇಂದಿನಿಂದಲೇ ಮಳೆಗಾಲದಲ್ಲಿ ಆದಷ್ಟು ಹೆಚ್ಚು ಹೆಚ್ಚು ಗಿಡಗಳನ್ನು ನೆಡುವುದು, ಅವುಗಳನ್ನು ಪೋಷಿಸುವುದು ಮಾಡುವುದರಿಂದ ವಾತಾವರಣದ ಉಷ್ಣತೆ ಕಡಿಮೆ ಮಾಡಬಹುದಾಗಿದೆ ಎಂದರು.
ಪಾಲಿಕೆ ಉಪ ಆಯುಕ್ತ ರವೀಂದ್ರ ಬಿ. ಮಲ್ಲಾಪುರ ಮಾತನಾಡಿ, ಸ್ವಚ್ಛ ಭಾರತಕ್ಕಿಂತ ವೈಯುಕ್ತಿಕ ಸ್ವಚ್ಛತೆ ಮುಖ್ಯ. ಪಾಲಿಕೆಯು ಸ್ವಚ್ಚ ಭಾರತ ಕಾರ್ಯಕ್ರಮವನ್ನು ಯಶ್ವಸಿಯಾಗಿ ಮಾಡುತ್ತದೆ. ಪಾಲಿಕೆಯಷ್ಟೇ ಅಲ್ಲ ನಮ್ಮ ಮನೆ, ನಮ್ಮ ನಗರ, ನಮ್ಮ ರಸ್ತೆಗಳನ್ನು ಸ್ಚಚ್ಚವಾಗಿಡಲು ನಾವು ಶ್ರಮಿಸಬೇಕು ಎಂದರು.ಕ್ಷೇತ್ರ ಪ್ರಚಾರಾಧಿಕಾರಿ ಜಿ. ತುಕಾರಾಮ್ ಗೌಡ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಸ್ವಚ್ಛತೆಯ ಬಗ್ಗೆ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.
ಹಾಗೂ ಪರಿಸರ ಜಾಗೃತಿ ಗೀತೆಗಳನ್ನು ಹಾಡಲಾಯಿತು. ವೇದಿಕೆಯಲ್ಲಿ ಡಾ. ಹೆಚ್.ಎಸ್ ಶಾಂತ, ಸೂರ್ಯಪ್ರಕಾಶ್, ಆರ್.ಎಸ್ ನಾರಾಯಣಸ್ವಾಮಿ, ರವಿಕುಮಾರ್, ಮಾಲತೇಶ್, ವಾರ್ತಾಧಿಕಾರಿ ಅಶೋಕ್ ಕುಮಾರ್ ಡಿ, ಮಹದೇವಸ್ವಾಮಿ, ಸಂಸ್ಥೆಯ ಕ್ಷೇತ್ರ ಪ್ರಚಾರ ಸಹಾಯಕ ದರ್ಶನ್ ಮತ್ತಿತರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ