ಗ್ಯಾಸ್ ಪೈಪ್‍ಲೈನ್‍ಗೆ ಬೆಂಕಿ ಹೊತ್ತಿದ್ದು ಹೇಗೆ?

ತುಮಕೂರು
     ತುಮಕೂರು ನಗರದ ರಿಂಗ್ ರಸ್ತೆಯಲ್ಲಿ ಬಡ್ಡಿಹಳ್ಳಿ ತಿರುವಿನ ಬಳಿ ಸೋಮವಾರ ಬೆಳಗ್ಗೆ 8-45 ರಲ್ಲಿ ಇದ್ದಕ್ಕಿದ್ದಂತೆ ಗ್ಯಾಸ್ ಪೈಪ್‍ಲೈನ್‍ನಲ್ಲಿ ಸೋರಿಕೆ ಉಂಟಾಗಿ ಬೆಂಕಿ ಹೊತ್ತಿ ಉರಿದ ಘಟನೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
    ಇಲ್ಲಿ ರಿಂಗ್ ರಸ್ತೆ ಕಾಮಗಾರಿ ನಡೆಯುತ್ತಿರುವುದು ಸರಿಯಷ್ಟೇ. ಆದರೆ ಈ ಅವಘಡ ಸಂಭವಿಸಿರುವ ಸ್ಥಳದಲ್ಲಿ ಯಾವ ಕಾಮಗಾರಿಯೂ ನಡೆದಿರಲಿಲ್ಲ. ಹೀಗಿದ್ದರೂ ಅಲ್ಲಿ ಗ್ಯಾಸ್ ಪೈಪ್ ಲೈನ್‍ನಲ್ಲಿ ಸೋರಿಕೆ ಉಂಟಾಗಿದ್ದು ಹೇಗೆ? ಗ್ಯಾಸ್ ಸೋರಿಕೆಯ ಜೊತೆಗೇ ಬೆಂಕಿ ಹೊತ್ತಿಕೊಂಡಿದ್ದು ಹೇಗೆ? ಯಾವುದೋ ಕಾರಣದಿಂದ ಒಂದು ವೇಳೆ ಸೋರಿಕೆ ಆಗಿರಬಹುದೆಂಬುದನ್ನು ಒಪ್ಪಿಕೊಳ್ಳಬಹುದು. ಆದರೆ ಬೆಂಕಿ ಹೊತ್ತಿದ್ದು ಹೇಗೆ? ಯಾರಾದರೂ ಬೆಂಕಿ ಹೊತ್ತಿಸದೆ, ತಾನೆ ತಾನಾಗಿ ಬೆಂಕಿ ಹೊತ್ತಿಕೊಳ್ಳಲು ಸಾಧ್ಯವೇ? ಒಂದು ವೇಳೆ ಗ್ಯಾಸ್ ಸೋರಿಕೆಯಿಂದ ಬೆಂಕಿ ಹೊತ್ತಿದ್ದರೆ, ಈ ಪೈಪ್‍ಲೈನ್‍ನ ಸುರಕ್ಷತೆ ಬಗ್ಗೆ ಖಾತ್ರಿ ಇದೆಯೇ ಎಂಬುದು ಪ್ರತ್ಯಕ್ಷದರ್ಶಿಗಳು ಕೇಳುತ್ತಿರುವ ಪ್ರಶ್ನೆಗಳು.
ಪ್ರಮುಖರೇನು ಮಾಡುತ್ತಿದ್ದಾರೆ?
    ಗ್ಯಾಸ್ ಪೈಪ್ ಲೈನ್ ಒಡೆದು, ಸೋರಿಕೆ ಉಂಟಾಗಿ, ಬೆಂಕಿ ಹೊತ್ತಿಕೊಂಡ ಘಟನೆ ನಡೆದರೂ, ತುಮಕೂರಿನ ಪ್ರಮುಖರಿಗೆ ಆತಂಕವನ್ನು ಮೂಡಿಸಿಲ್ಲವೇ? ಅವರೆಲ್ಲ ಏನು ಮಾಡುತ್ತಿದ್ದಾರೆ ಎಂದು ಕ್ಯಾತಸಂದ್ರದ ಮಾಜಿ ನಗರಸಭಾ ಸದಸ್ಯ ಪಿ.ಎಸ್.ರಮೇಶ್ ಆಚಾರ್ ಪ್ರಶ್ನಿಸುತ್ತಿದ್ದಾರೆ. 
    ನಗರಾದ್ಯಂತ ವಸತಿ ಪ್ರದೇಶಗಳಲ್ಲಿ ಗ್ಯಾಸ್ ಪೈಪ್‍ಲೈನ್ ಅಳವಡಿಸಲಾಗಿದೆ. ಸಣ್ಣಪುಟ್ಟ ರಸ್ತೆಗಳಲ್ಲೂ ಇದು ಹಾದುಹೋಗಿದೆ. ಜನನಿಬಿಡ ಹಾಗೂ ವಾಹನ ಸಂಚಾರ ದಟ್ಟವಾಗಿರುವ ಸ್ಥಳದಲ್ಲಿ ಇಂತಹ ಅವಘಡ ಸಂಭವಿಸಿದ್ದಿದ್ದರೆ ಏನಾಗುತ್ತಿತ್ತು? ಮೇಲ್ಭಾಗ ವಿದ್ಯುತ್ ತಂತಿ ಇದ್ದಿದ್ದರೆ ಅಥವಾ ಸಮೀಪವೆ ಟ್ರಾನ್ಸ್‍ಫಾರ್ಮರ್ ಇದ್ದಿದ್ದರೆ ಅಪಾಯವಾಗುತ್ತಿರಲಿಲ್ಲವೇ? ಈಗ ಆಗಿರುವ ಘಟನೆಗೆ ಹೊಣೆಗಾರರು ಯಾರು? ಸಾರ್ವಜನಿಕರಲ್ಲಿ ಉಂಟಾಗಿರುವ ಆತಂಕ ನಿವಾರಿಸಲು ತನಿಖೆ ಆಗುವುದು ಬೇಡವೇ? ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆಯೇ ಎಂದು ಅವರು ಕೇಳುತ್ತಿದ್ದಾರೆ.
   ಇತ್ತೀಚೆಗೆ ನಗರದ ಡಾ.ರಾಧಾಕೃಷ್ಣನ್ ರಸ್ತೆಯಲ್ಲಿ ಡಿಡಿಪಿಐ ಕಚೇರಿ ಪಕ್ಕ ಸ್ಮಾರ್ಟ್‍ಸಿಟಿ ಕಾಮಗಾರಿಯ ಗುತ್ತಿಗೆದಾರರು ರಾಶಿ ಹಾಕಿದ್ದ ಪಿವಿಸಿ ಪೈಪ್ ರಾತ್ರಿ ವೇಳೆ ಇದ್ದಕ್ಕಿದ್ದಂತೆ ಹೊತ್ತಿ ಉರಿಯಿತು. ಆ ಬಗ್ಗೆ ಯಾವುದೇ ದೂರು ದಾಖಲಾಗಲಿಲ್ಲ. ಈಗ ಗ್ಯಾಸ್ ಪೈಪ್ ಲೈನ್ ಸೋರಿಕೆ ಆಗಿ ಬೆಂಕಿ ಹೊತ್ತಿಕೊಂಡಿದೆ. ಈಗಲೂ ಈ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಎಂದು ಅವರು ಅಸಮಾಧಾನದಿಂದ ಪ್ರತಿಕ್ರಿಯಿಸಿದರು.
    ಸೋಮವಾರ ಬೆಳಗ್ಗೆ ರಿಂಗ್‍ರಸ್ತೆಯಲ್ಲಿ ರಮೇಶ್ ಆಚಾರ್ ತೆರಳುತ್ತಿದ್ದಾಗ, ದಿಢೀರನೆ ಬೆಂಕಿಯು ಚಿಮ್ಮುತ್ತಿದ್ದುದನ್ನು ನೋಡಿ ಆತಂಕಗೊಂಡಿದ್ದಾರೆ. ಏನಾದರೂ ದೊಡ್ಡ ಅನಾಹುತ ಆಗಿಬಿಡಬಹುದೆಂಬ ಕಳವಳದಿಂದ ತಕ್ಷಣವೆ ಪೊಲೀಸ್ ಕೇಂದ್ರ, ಅಗ್ನಿಶಾಮಕ ಕೇಂದ್ರಗಳಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ತಕ್ಷಣವೆ ಸಂಬಂಧಿಸಿದವರು ಆಗಮಿಸಿ ಮುಂದಿನ ಕ್ರಮ ಕೈಗೊಳ್ಳಲು ಸಾಧ್ಯವಾಯಿತು.

Recent Articles

spot_img

Related Stories

Share via
Copy link
Powered by Social Snap