ಚಿತ್ರದುರ್ಗ
ದೇಶದಲ್ಲಿ ಸ್ವತಂತ್ರ್ಯಕ್ಕಿಂತ ಮುಂಚೆ ಹಾಗೂ ಆನಂತರ ಸಾವಿರಾರು ಸಂಘಟನೆಗಳು ಹುಟ್ಟಿಕೊಂಡಿವೆ. ಆ ಎಲ್ಲಾ ಸಂಘಟನೆಗಳಿಗಿಂತ ಎನ್‍ಪಿಎಸ್ ಗಟ್ಟಿಯಾಗಿ ನಿಂತು ಹೋರಾಟ ಮಾಡುತ್ತಿದೆ. ಮುಂದೊಂದು ದಿನ ಈ ಹೋರಾಟಕ್ಕೆ ಯಶಸ್ಸು ಲಭಿಸುವುದು ನಿಶ್ಚಿತ ಎಂದು ಅಪರ ಜಿಲ್ಲಾಕಾರಿ ಸಂಗಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಕರ್ನಾಟಕ ರಾಜ್ಯ ಸರಕಾರಿ ಎನ್‍ಪಿಎಸ್ ನೌಕರರ ಸಂಘ ಜಿಲ್ಲಾ ಘಟಕದಿಂದ ಗುರುವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಗೆದ್ದಿರುವ ಎಲ್ಲಾ ಇಲಾಖೆಯ ಸರಕಾರಿ ಎನ್‍ಪಿಎಸ್ ನೌಕರರಿಗೆ ಹಾಗೂ ಎಲ್ಲಾ ತಾಲೂಕಿನ ಎನ್‍ಪಿಎಸ್ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ ಅಭಿನಂದನಾ ಸಮಾರಂಭದಲ್ಲಿ ನೌಕರರನ್ನು ಸನ್ಮಾನಿಸಿ ಮಾತನಾಡಿದರು.
ಯಾವುದೇ ಹೋರಾಟ ಅಷ್ಟು ಸುಲಭವಾಗಿ ಯಶಸ್ಸು ಕಂಡಿರುವ ಇತಿಹಾಸ ಇಲ್ಲ, ಸಂಘರ್ಷ ಇದ್ದೇ ಇರುತ್ತೆ. ಹಾಗಾಗಿ ನೀವೆಲ್ಲರೂ ಸಂಘಟನೆಗೆ ದೊಡ್ಡ ಶಕ್ತಿ, ಧ್ವನಿಯಾಗಿ ನಿಲ್ಲಬೇಕು. ನೀವುಗಳೆಲ್ಲಾ ಯಾವ ಉದ್ದೇಶ ಇಟ್ಟುಕೊಂಡು ಚುನಾವಣೆಗೆ ನಿಂತು ಗೆದ್ದಿದ್ದೀರೊ ಅದನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ದೇಶಾದ್ಯಂತ ಎನ್‍ಪಿಎಸ್ ಚರ್ಚೆ ಆಗುತ್ತಿದೆ. ಎನ್‍ಪಿಎಸ್ ರದ್ದಾಗಬೇಕು ಎಂದು ಇಡೀ ದೇಶದಲ್ಲಿ ಚರ್ಚೆ ಆಗುತ್ತಿದೆ. ಒಂದು ಹಂತದ ಮಟ್ಟಿಗೆ ಹೋರಾಟ ಯಶಸ್ಸು ಕಂಡಿದೆ. ಅದು ಪರಿಪೂರ್ಣ ಆಗುವವರೆಗೂ ಹೋರಾಟ ಗಟ್ಟಿಯಾಗಿ ನಿಲ್ಲಬೇಕು. ಸಂಘಟನೆಗೆ ಆರ್ಥಿಕ ಚೈತನ್ಯ ತುಂಬಬೇಕಾಗಿದೆ. ಅದಕ್ಕೆ ಎಲ್ಲರ ಸಹಕಾರ ಬೇಕು. ಸಣ್ಣಪುಟ್ಟ ಭಿನ್ನಾಭಿಪ್ರಾಯ ಮರೆತು ಹೋರಾಟದಲ್ಲಿ ತನು, ಮನ, ಧನ ಅರ್ಪಿಸಬೇಕು ಎಂದರು
ಸಂಘದ ರಾಜ್ಯ ಹಿರಿಯ ಉಪಾಧ್ಯಕ್ಷ ಸಿದ್ದಪ್ಪ ಸಂಗಣ್ಣ ಮಾತನಾಡಿ, ಕಳೆದ ಮೂರು ವರ್ಷದಿಂದ ಏಕೈಕ ಉದ್ದೇಶದಿಂದ ಶಿಸ್ತುಬದ್ಧ ಸಂಘಟನೆ ಕಟ್ಟಿಕೊಂಡಿದ್ದೇವೆ. ಸರಕಾರ ಎನ್‍ಪಿಎಸ್ ಜಾರಿ ಮಾಡುವ ಮೂಲಕ ಎನ್‍ಪಿಎಸ್ ಹಾಗೂ ಓಪಿಎಸ್ ಎಂಬುದಾಗಿ ಸರಕಾರವೇ ಎರಡು ಬಗೆಯ ನೌಕರರನ್ನು ಸೃಷ್ಟಿಸಿದೆ. ನಮ್ಮ ಹೋರಾಟ ಗಟ್ಟಿಯಾಗಿದ್ದು ಶೀಘ್ರವೇ ಅಂತ್ಯ ಕಾಣಲಿದೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು.
ಸರಕಾರ ಮತ್ತು ಸಾರ್ವಜನಿಕರಿಗಾಗಿ ಸುಮಾರು 33 ವರ್ಷಗಳ ಕಾಲ ಸೇವೆ ಸಲ್ಲಿಸುವ ನಾವು ನಿವೃತ್ತಿ ಹೊಂದಿದ ಬಳಿಕ ಸಾಮಾಜಿಕ ಭದ್ರತೆ ಯೋಜನೆಗಳಡಿ ತೆಗೆದುಕೊಳ್ಳುವ ಪಿಂಚಣಿಗಿಂತ ಕನಿಷ್ಠ ಪಿಂಚಣಿ ಪಡೆದುಕೊಳ್ಳುವ ನಮ್ಮ ನೋವು, ಸಮಸ್ಯೆಗಳಿಗಾಗಿ ಸಂಘಟನೆ ಕಟ್ಟಿಕೊಂಡಿದ್ದೇವೆ. ಸರಕಾರಿ ನೌಕರರ ಸಭೆಗಳಲ್ಲಿ ಎನ್‍ಪಿಎಸ್ ಕೂಗು ಜೋರಾಗಬೇಕು. ನಮ್ಮ ಈ ಹೋರಾಟಕ್ಕೆ ಎಲ್ಲರೂ ಕೈಜೋಡಿಸ ಬೇಕು. ನಿಶ್ಚಿತ ಪಿಂಚಣಿ ಪಡೆಯುವವರೆಗೂ ನಮ್ಮ ಈ ಹೋರಾಟ ನಿಶ್ಚಿತ ಎಂದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಹನುಮಂತಪ್ಪ ಮಾತನಾಡಿ, ಎನ್‍ಪಿಎಸ್ ಸಂಘಟನೆಗೆ ಬಲ ಬರಬೇಕಾದರೆ, ಉತ್ತಮ ಸ್ಥಾನ ಮಾನ ಸಿಗಬೇಕಾದರೆ ಸರಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಗೆದ್ದಿರುವವರು ಬಹಳ ಮುಖ್ಯ. ರಕ್ತ ಕೊಟ್ಟೆವು ಪಿಂಚಣಿ ಬಿಡೆವು, ಬೆಳಗಾವಿ ಚಲೋ, ಪ್ರೀಡಂ ಪಾರ್ಕ್ ಧರಣಿ ಸೇರಿದಂತೆ ಕಳೆದ ಮೂರು ವರ್ಷಗಳಿಂದ ಸಾಕಷ್ಟು ಹೋರಾಟ ಮಾಡಿಕೊಂಡು ಬಂದಿದ್ದೇವೆ. ಮುಂದಿನ ದಿನಗಳಲ್ಲಿ ಸಂಘಟನೆ ಇನ್ನಷ್ಟು ಗಟ್ಟಿಗೊಳ್ಳಬೇಕಾದರೆ ಸಂಘದ ಚುನಾವಣೆಯಲ್ಲಿ ಗೆದ್ದಿರುವವರು ಪ್ರಮುಖ ಪಾತ್ರ ವಹಿಸಬೇಕು ಎಂದು ತಿಳಿಸಿದರು.
ಎನ್‍ಪಿಎಸ್ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ.ಎಸ್.ಆರ್. ಲೇಪಾಕ್ಷ ಅಧ್ಯಕ್ಷತೆ ವಹಿಸಿದ್ದರು. ದಾವಣಗೆರೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಆರ್. ಮೋಹನ್ ಕುಮಾರ್, ರಾಜ್ಯ ಸಮಿತಿ ಸದಸ್ಯೆ ಆರ್.ಮೋಕ್ಷದಾಯಿನಿ, ಜಿಲ್ಲಾ ಸಂಚಾಲಕ ಟಿ.ಕೃಷ್ಣಮೂರ್ತಿ, ಖಜಾಂಚಿ ಎಚ್.ರಂಗಸ್ವಾಮಿ, ತಾಲೂಕು ಅಧ್ಯಕ್ಷರಾದ ಲಿಂಗರಾಜ್ ಎಸ್. ಇಟಗಿ, ಎಂ.ಪ್ರಭು, ಪ್ರಶಾಂತ್, ಮಂಜಪ್ಪ, ಸುರೇಶ್, ಯತೀಶ್, ಮಮತ, ಗುರುಮೂರ್ತಿ, ಟಿ.ಶಿವಣ್ಣ, ಡಿ.ಕಲ್ಲೇಶ್, ಮಹಾಲಕ್ಷ್ಮಿ ಮತ್ತಿತರರಿದ್ದರು.