ಹರಪನಹಳ್ಳಿ:
ಸರ್ಕಲ್‍ಗಳಿಗೆ ಮಹನೀಯರ ನಾಮಕರಣ ಮಾಡಲು ಸಲಹೆ ಸೂಚನೆ, ಮುಖ್ಯರಸ್ತೆ ಬದಿಯ ಮನೆಗಳ ಮತ್ತು ಮಳಿಗೆಗಳ ಡೋರ್‍ನಂಬರ್ ರದ್ದತಿ ಏಕೆ, ಕಾರಣವಾದವರನ್ನು ಮುಂದಿನ ಸಭೆಗೆ ಕರೆದು ಸೂಕ್ತ ಕ್ರಮಕ್ಕೆ ಸದಸ್ಯರು ಆಗ್ರಹ, ನಗರೋತ್ಥಾನದ ಕಾಮಗಾರಿ ಹಾಗೂ ಯುಜಿಡಿ ಕಾಮಗಾರಿ ಕಳಪೆ ಮತ್ತು ಅಪೂರ್ಣವಾಗಿದ್ದು ಮೂಲ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ, ಇವು ಪುರಸಭೆಯ ಸಾಮಾನ್ಯ ಸಭೆಯ ಚರ್ಚೆಯ ವಿಷಯಗಳು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಸಾಮಾನ್ಯ ಸಭೆ ಜರುಗಿತು. ಸಭೆಗೂ ಮುನ್ನ ಅಗಲಿದ ನಾಯಕರುಗಳಾದ ಹೆಚ್ . ಎನ್ . ಅನಂತಕುಮಾರ್, ನಟ ಅಂಬರೀಶ್, ಜಾಫರ್ ಷರೀಪ್ ಹಾಗೂ ಮಾಜಿ ಶಾಸಕ ಎಂ.ಪಿ.ರವೀಂದ್ರರ ಆತ್ಮಕ್ಕೆ ಶಾಂತಿಕೋರಿ ಒಂದು ನಿಮಿಷದ ಮೌನಾಚರಣೆ ಮಾಡಿದರು.
ಮುಖ್ಯರಸ್ತೆಯ ಬದಿಯ ಗ್ಯಾಸ್ ಏಜನ್ಸಿಯಿಂದ ಹೊಸ ಬಸ್ ನಿಲ್ದಾಣದ ಎದುರುಗಡೆ ರಸ್ತೆವರೆಗೆ ಮನೆ ಹಾಗೂ ಮಳಿಗೆಗಳ ಡೋರ್ ನಂಬರ್ ರದ್ದು ಮಾಡಿದ್ದೇಕೆ. ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಪುರಸಭೆಯಲ್ಲಿ ಇಂತಹ ಕಾರ್ಯಗಳು ನೆಡೆದಿವೆ ಎಂಬ ಆರೋಪಗಳಿವೆ. ನಿಮ್ಮ ಉತ್ತರವೇನು ಎಂದು ಡೆಂಕಿ ಇಮ್ರಾನ್ ಪ್ರಶ್ನಿಸಿದರು.
ರಸ್ತೆ ಪಕ್ಕದ ಸ್ಥಳ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಸ್ಥಳವಾಗಿದ್ದು, ಪುರಸಭೆಯವರು ಅನಧಿಕೃತ ಕಟ್ಟಡ ಕಟ್ಟಿಕೊಳ್ಳಲು ಅವಕಾಶ ನೀಡಿ ಡೋರ್‍ನಂಬರ್ ನೀಡಿರುತ್ತಾರೆ ಎಂದು ಲೋಕಾಯುಕ್ತರಿಗೆ ನೀಡಿದ ದೂರಿನ ಅನ್ವಯ ಲೋಕಾಯುಕ್ತರ ತನಿಖೆಯಾಗಿ ಸ್ಥಳ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ್ದು ಪುರಸಭೆ ಮುಖ್ಯಾಧಿಕಾರಿಗಳೇ ನೇರ ಹೊಣೆಗಾರಿಕೆ ಹೊಂದಿದ್ದೀರಿ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ನಿಮ್ಮ ಮೇಲೆ ಕ್ರಿಮಿನಲ್ ದಾವೆ ಹೂಡಬೇಕಾಗುತ್ತದೆ ಎಂದು ಲೋಕಾಯುಕ್ತರು ಮುಖ್ಯಾಧಿಕಾರಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಆಗಿನ ಮುಖ್ಯಾಧಿಕಾರಿ ಐ. ಬಸವರಾಜ್ ಡೋರ್ ನಂಬರ್ ರದ್ದು ಮಾಡಿರುತ್ತಾರೆ. ಈಗಿರುವಂತೆ ಮುಂದುವರಿಸಲು ನಮಗೂ ಇಷ್ಟವಿದ್ದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ ಎಂದು ಅಧ್ಯಕ್ಷರು ಉತ್ತರಿದರು.
ಮುಖ್ಯಾಧಿಕಾರಿ ಐ.ಬಸವರಾಜ್ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುವ ಹಕ್ಕಿರಲಿಲ್ಲ. ಸದಸ್ಯರ ಗಮನಕ್ಕೆ ತರದೇ ಇಂತಹ ಕ್ರಮ ಕೈಗೊಂಡಿರುವುದು ತಪ್ಪಾಗಿದ್ದು. ಮುಂದಿನ ಸಭೆಯಲ್ಲಿ ಅವರನ್ನು ಕರೆಸಿ ಸೂಕ್ತ ಕಾರಣಕೇಳಿ ಹಾಗೂ ಅವರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಸರ್ವ ಸದಸ್ಯರು ಆಗ್ರಹಿಸಿದರು. ಅಧ್ಯಕ್ಷರು ಸಮ್ಮತಿ ಸೂಚಿಸಿದರು.
ನಗರದಲ್ಲಿ ಯುಜಿಡಿ ಕಾಮಗಾರಿ ಅಪೂರ್ಣವಾಗಿ ಕಳಪೆಯಿಂದ ಕೂಡಿದೆ ಇಲ್ಲಿಯವರೆಗೂ ಪೂರ್ಣಗೊಳಿಸುವಲ್ಲಿ ವಿಫಲರಾಗಿರುವ ಗುತ್ತಿಗೆದಾರರನ್ನು ಸಭೆಗೆ ಆಹ್ವಾನಿಸಬೇಕಿತ್ತು. ಅವೈಜ್ಞಾನಿಕ ಪದ್ದತಿಯಲ್ಲಿ ಮಾಡಿರುವ ಕಾಮಗಾರಿಯಿಂದ ಮುಂದಿನ ದಿನಗಳಲ್ಲಿ ಸಾಕಷ್ಟು ತೊಂದರೆಗಳು ಉದ್ಭವವಾಗಲಿವೆ ಆದ್ದರಿಂದ ಗುತ್ತಿಗೆದಾರರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಕಾಮಗಾರಿಯನ್ನು ಉಪಯೋಗ ಯೋಗ್ಯವಾಗುವಂತೆ ಸರಿ ಮಾಡಿಸಿಕೊಡುವಂತೆ ಸೂಚಿಸಬೇಕು ಎಂದು ಸದಸ್ಯ ಮಾಬೂಸಾಬ್ ಹಾಗೂ ಇತರರು ಆಗ್ರಹಿಸಿದರು.
ಊರ ಹೊರಗೆ ನಿಗಧಿ ಮಾಡಿರುವ ಯುಜಿಡಿ ವ್ಯರ್ಥದ ಸಂಗ್ರಹ ಟ್ಯಾಂಕ್‍ಗಳ ಕಾಮಗಾರಿಯೂ ಸಂಪೂರ್ಣ ಕಳಪೆಯಾಗಿದೆ ಕ್ರಮಕ್ಕೆ ಮುಂದಾಗುವಂತೆ ಸದಸ್ಯ ಅಣ್ಣಪ್ಪ ಹಾಗೂ ಬೂದಿನವೀನ್ ದ್ವನಿಗೂಡಿಸಿದರು.
ಅಧ್ಯಕ್ಷ ಹೆಚ್.ಕೆ.ಹಾಲೇಶ್ ಮಾತನಾಡಿ. ಇಲಾಖೆಯ ಚೀಫ್ ಇಂಜನೀಯರ್ ಹಾಗೂ ಎಇಇ ಅವರಿಗೆ ಈ ಬಗ್ಗೆ ಮಾಹಿತಿ ನೀಡಿ ಮುಂದಿನ ಸಭೆಗೆ ಆಹ್ವಾನಿಸಿ ಚರ್ಚಿಸಿದ ನಂತರ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು ಎಂದರು.
ನಗರೋತ್ಥನದ ಕಾಮಗಾರಿಗಳ ಮೂಲ ಗುತ್ತಿಗೆದಾರ ಕಾಣೆಯಾಗಿದ್ದಾರಾ, ಅವರ ಕಿರು ಗುತ್ತಿಗೆದಾರರು ಕಾಮಗಾರಿಗಳನ್ನು ಅಪೂರ್ಣಗೊಳಿಸಿದ್ದಾರೆ. ಇವರ ಬಗ್ಗೆಯೂ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಡಿಷ್ ವೆಂಕಟೇಶ್ ಕೇಳಿದರು. ಈ ಎರಡೂ ಅತಿಮುಖ್ಯ ಕಕಾಮಗಾರಿಗಳ ಗುತ್ತಿಗೆ ದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಇತರೆ ಸದಸ್ಯರೂ ಸಹಮತ ನೀಡಿದರು.
ಇವರ ಮೇಲೆ ಕ್ರಮಕ್ಕೆ ಮುಂದಾಗಲು ತೀರ್ಮಾನ ತೆಗೆದುಕೊಳ್ಳುವುದಗಿ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿ ನಾಗರಾಜ್ ನಾಯ್ಕ್ ತಿಳಿಸಿದರು.ನಗರದ ಪ್ರಮುಖ ವೃತ್ತಗಳಿಗೆ ಮಹನೀಯರ ಹೆಸರಿಡಲು ಚರ್ಚೆಗಳು ನೆಡೆದವು ಮುಂದಿನ ಸಭೆಯಲ್ಲಿ ನಾಮಕರಣದ ಬಗ್ಗೆ ಕ್ರಮ ಕೈಗೊಳ್ಳಲು ಹಾಗೂ ಆಕ್ಷೇಪಣೆಗಳಿಗೆ ಅವಕಾಶ ನೀಡುವ ಬಗ್ಗೆ ಚರ್ಚೆಗಳಾದವು.
ಕಾರ್ಯನಿರತ ಪತ್ರಕರ್ತರಿಗೆ ಗೋಕರ್ಣೇಶ್ವರ ದೇವಸ್ಥಾನದ ಬಳಿಯಿರುವ ಪುರಸಭೆಗೆ ಸಂಬಂಧಿಸಿದ ಕಟ್ಟಡವನ್ನು ಪ್ರಸ್‍ಕ್ಲಬ್ ಗಾಗಿ ನೀಡಲು ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.ಇಂದಿರಾ ಕ್ಯಾಂಟೀನ್ ನಿರ್ಮಿಸಲು ಸ್ಥಳ ನಿಗಧಿಯಾಗಿದ್ದು, ಅನಿವಾರ್ಯ ಕಾರಣದಿಂದ ಬೇರೆ ಸ್ಥಳ ಗುರುತಿಸಲು ಸಭೆಯಲ್ಲಿ ಸಾಕಷ್ಟು ಚರ್ಚೆಗಳಾಗಿ, ಅಂತಿಮ ಹಂತದಲ್ಲಿ ಬಸ್ ನಿಲ್ದಾಣದ ಬಳಿ ಅಥವಾ ಪ್ರವಾಸಿ ಮಂದಿರದ ಬಳಿ ಸ್ಥಾಪಿಸಲು ಸದಸ್ಯರ ಮದ್ಯೆ ಗೊಂದಲಗಳು ಉಂಟಾಗಿ, ಅಂತಿಮವಾಗಿ ಸಂಬಂಧಪಟ್ಟ ಇಂಜಿನೀಯರ್‍ಗಳು ಸ್ಥಳಪರಿಶೀಲನೆ ನಂತರ ಕ್ರಮಕ್ಕೆ ಮುಂದಾಗುವುದಾಗಿ ವಿಷಯಕ್ಕೆ ತೆರೆ ಎಳೆಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ