ಚಿತ್ರದುರ್ಗ:
ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಗೌರವ ಸಿಗಬೇಕಾದರೆ ಕ್ರೀಡಾಪಟುಗಳು ಹೆಚ್ಚು ಹೆಚ್ಚು ಪದಕಗಳನ್ನು ಗಳಿಸಿಬೇಕು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಕಲಾ ಕಾಲೇಜು(ಸ್ವಾಯತ್ತ) ಚಿತ್ರದುರ್ಗ ವತಿಯಿಂದ ಸರ್ಕಾರಿ ಕಲಾ ಕಾಲೇಜು ಆವರಣದಲ್ಲಿ ಶನಿವಾರ ನಡೆದ 2018-19 ನೇ ಸಾಲಿನ ಕ್ರೀಡಾ, ಸಾಂಸ್ಕøತಿಕ, ಎನ್.ಸಿ.ಸಿ., ಎನ್.ಎಸ್.ಎಸ್., ಯುವ ರೆಡ್‍ಕ್ರಾಸ್ ಹಾಗೂ ಸ್ಕೌಟ್ಸ್ ಅಂಡ್ ಗೈಡ್ಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ನೆರವೇರಿಸಿ ಮಾತನಾಡಿದರು.
ವಿದ್ಯಾರ್ಥಿ ಜೀವನ ಶಿಕ್ಷಣದ ಜೊತೆ ಎಂಜಾಯ್ ಮಾಡುವ ಕಾಲ. ಕಳೆದುಕೊಂಡರೆ ಮತ್ತೆ ಸಿಗುವುದಿಲ್ಲ.ಅದಕ್ಕಾಗಿ ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ, ಎನ್.ಸಿ.ಸಿ., ಎನ್.ಎಸ್.ಎಸ್. ಇನ್ನಿತರೆ ಸಾಂಸ್ಕತಿಕ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಒಲಂಪಿಕ್ಸ್‍ನಲ್ಲಿ ನಮ್ಮ ದೇಶ ಚಿನ್ನದ ಪದಕಗಳನ್ನು ಪಡೆಯಲು ಆಗಲಿಲ್ಲ. ಆದರೆ ಏಷಿಯನ್ ಗೇಮ್ಸ್‍ನಲ್ಲಿ ಮಹಿಳೆಯರು ಹೆಚ್ಚಿನ ಪದಕಗಳನ್ನು ಗೆದ್ದಿರುವುದು ಸಮಾಧಾನದ ಸಂಗತಿ. ಹಿಂದೆ ಕ್ರೀಡೆಗೆ ಹೆಚ್ಚಿನ ಪ್ರಾಮುಖ್ಯತೆ ಇತ್ತು. ಇತ್ತೀಚಿನ ದಿನಗಳಲ್ಲಿ ಕ್ರೀಡಾಪಟುಗಳಿಗೆ ಸರಿಯಾದ ಪ್ರೋತ್ಸಾಹ ಇಲ್ಲದಂತಾಗಿದೆ. ಹಳ್ಳಿಗಾಡಿನ ಕ್ರೀಡಾಪಟುಗಳು ಗಟ್ಟಿಯಾಗಿರುತ್ತಾರೆ. ಅದಕ್ಕೆ ತಕ್ಕಂತೆ ಸರ್ಕಾರ ಉತ್ತೇಜನ ನೀಡಬೇಕು ಎಂದು ಒತ್ತಾಯಿಸಿದರು.
ಪೌಷ್ಟಿಕ ಆಹಾರ ಕ್ರೀಡಾಪಟುಗಳಿಗೆ ಮುಖ್ಯವಾಗಿ ಬೇಕು. ಇಂದು ನಿಮಗೆ ಶಿಕ್ಷಣ ಹಾಗೂ ಹಾಸ್ಟೆಲ್‍ಗಳು ಸಿಕ್ಕಿದೆಯೆಂದರೆ ಅದಕ್ಕೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ದಿವಂಗತ ಡಿ.ದೇವರಾಜ ಅರಸುರವರು ಕಾರಣ ಎಂದು ನೆನಪಿಸಿಕೊಂಡ ಶಾಸಕರು ಮಲಹೊರುವ ಪದ್ದತಿಯನ್ನು ಬಸವಲಿಂಗಪ್ಪನವರು ನಿಷೇಧಿಸಿದರು ಎಂದು ಸ್ಮರಿಸಿಕೊಂಡರು.
ಬಡವರು ಯಾರಾದರೂ ಮೃತಪಟ್ಟರೆ ಅಂತ್ಯಸಂಸ್ಕಾರಕ್ಕೆ ನೆರವು ನೀಡಬೇಕಾಗಿದ್ದ ಸರ್ಕಾರ 2015 ರಿಂದ ಅಂತ್ಯ ಸಂಸ್ಕಾರದ ಹಣವನ್ನು ನೀಡಿಲ್ಲ. ನಗರದಲ್ಲಿ ಸಾಕಷ್ಟು ವಸತಿ ಸಮಸ್ಯೆಗಳಿದೆ. ನಿವೇಶನ ಕೋರಿ ಹದಿಮೂರು ಸಾವಿರ ಅರ್ಜಿಗಳು ಬಂದಿವೆ. ಸಾಮಾಜಿಕ ಸಮಸ್ಯೆಗಳನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಂಡಿರಬೇಕು. ವಯಸ್ಸಾದ ತಂದೆ-ತಾಯಿಗಳನ್ನು ತಿರಸ್ಕರಿಸಿ ವೃದ್ದಾಶ್ರಮಕ್ಕೆ ಕಳಿಸಬೇಡಿ. ಮುಪ್ಪಿನ ಕಾಲದಲ್ಲಿ ಜೋಪಾನ ಮಾಡಿ ಗುರು-ಹಿರಿಯರನ್ನು ಗೌರವದಿಂದ ಕಾಣುವ ಗುಣ ಬೆಳೆಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಬುದ್ದಿಮಾತು ಹೇಳಿದರು.
ಉನ್ನತ ಶಿಕ್ಷಣಕ್ಕೆ ನಮ್ಮಲ್ಲಿ ಹಣ ಇಲ್ಲ ಎಂದು ಯಾರು ಚಿಂತಿಸುವುದು ಬೇಡ. ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಯಾವುದೇ ಜಾಮೀನು ಇಲ್ಲದೆ ಶಿಕ್ಷಣಕ್ಕೆ ಸಾಲ ನೀಡಬೇಕು. ಅದೇ ರೀತಿ ಮುದ್ರಾ ಬ್ಯಾಂಕ್, ಜನಧನ್ ಹೀಗೆ ಅನೇಕ ಜನಪರ ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ ಅವುಗಳನ್ನೆಲ್ಲಾ ಬಳಸಿಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಶಾಸಕರು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕ್ರೀಡೆ, ಎನ್.ಸಿ.ಸಿ., ಎನ್.ಎಸ್.ಎಸ್., ಸಾಂಸ್ಕತಿಕ ಕಾರ್ಯಕ್ರಮ,
ಯುವ ರೆಡ್‍ಕ್ರಾಸ್ ಹಾಗೂ ಸ್ಕೌಟ್ಸ್ ಅಂಡ್ ಗೈಡ್ಸ್ ಚಟುವಟಿಕೆಗಳಿಂದ ಸೇವಾ ಮನೋಭಾವ ಬೆಳೆಯುತ್ತದೆ. ಜೀವದ ಹಂಗು ತೊರೆದು ನಮ್ಮ ಸೈನಿಕರು ಪಾಕಿಸ್ತಾನ ಗಡಿಭಾಗದಲ್ಲಿ ದೇಶವನ್ನು ಕಾಯುತ್ತಿದ್ದಾರೆ. ಆದರೆ ಪಾಕಿಸ್ತಾನದ ಸೈನಿಕರು ನಮ್ಮ ದೇಶದ ಕೆಲವು ಸೈನಿಕರನ್ನು ಅಪಹರಿಸಿ ಕತ್ತು ಸೀಳಿ ಕಠೋರವಾಗಿ ಹತ್ಯೆ ಮಾಡುತ್ತಿದ್ದಾರೆ. ದೇಶದಲ್ಲಿ ವಿವಿಧ ಪಕ್ಷಗಳು ಅಧಿಕಾರಕ್ಕೆ ಕಿತ್ತಾಡುವುದು ಬೇರೆ ವಿಚಾರ. ಆದರೆ ದೇಶದ ಪ್ರಶ್ನೆ ಬಂದಾಗ ಮೊದಲು ದೇಶ ನಂತರ ರಾಜಕೀಯ ಎನ್ನುವ ಬದ್ದತೆ ಎಲ್ಲರಲ್ಲಿಯೂ ಇರಬೇಕು. ಆಗ ಮಾತ್ರ ಭಾರತ ಸದೃಢವಾಗಿರಲು ಸಾಧ್ಯ ಎಂದು ಹೇಳಿದರು.
ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕ ಪ್ರೊ.ಎಸ್.ಮಲ್ಲೇಶ್ವರಪ್ಪ ಮಾತನಾಡಿ ಪಾಠದ ಜೊತೆ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಬೇಕು. ಇದರಿಂದ ಸ್ಪರ್ಧಾತ್ಮಕ ಯುಗದಲ್ಲಿ ವಿವಿಧ ರೀತಿಯ ಪರೀಕ್ಷೆಗಳನ್ನು ಎದುರಿಸಲು ಸಹಕಾರಿಯಾಗಲಿದೆ ಎಂದರು.
ಶಿಕ್ಷಣಕ್ಕೆ ಒತ್ತು ಕೊಟ್ಟು ಒಳ್ಳೆಯ ಹವ್ಯಾಸವನ್ನು ಬೆಳೆಸಿಕೊಂಡು ನಿಮ್ಮ ಜೀವನವನ್ನು ಸುಂದರವಾಗಿ ರೂಪಿಸಿಕೊಳ್ಳಿ. ಶಿಕ್ಷಣದ ಜೊತೆ ವೃತ್ತಿ ಕೌಶಲ್ಯ ಜೀವನ ಕೌಶಲ್ಯ ಅತ್ಯವಶ್ಯಕ. ಯಾವುದನ್ನಾದರೂ ಸಕಾರಾತ್ಮಕವಾಗಿ ಸ್ವೀಕರಿಸಿ. ಗುರು-ಹಿರಿಯರು, ತಂದೆ-ತಾಯಿಗಳನ್ನು ಗೌರವದಿಂದ ಕಾಣಿ. ಜೀವನದಲ್ಲಿ ದೌರ್ಬಲ್ಯಗಳನ್ನು ಕಡಿಮೆಮಾಡಿಕೊಂಡು ಸಾಮಥ್ರ್ಯವನ್ನು ಹೆಚ್ಚಿಸಿಕೊಂಡಾಗ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕೇವಲ ಶಿಕ್ಷಣ ಪಡೆಯುವುದು ಮುಖ್ಯವಲ್ಲ. ಮೌಲ್ಯವಿಲ್ಲದಿದ್ದರೆ ಜೀವನ ನಿರರ್ಥಕವಾಗುತ್ತದೆ. ಪರಿಸರ ಕಲುಷಿತವಾಗಿರುವಂತೆ ಮನುಷ್ಯನ ಮನಸ್ಸುಗಳು ಕಲುಷಿತಗೊಳ್ಳುತ್ತಿವೆ. ಹಾಗಾಗಿ ಶಿಕ್ಷಣದಿಂದ ಮಾತ್ರ ಸತ್ಪ್ರೆಜೆಗಳಾಗಬಹುದು ಎಂದು ತಿಳಿಸಿದರು.ಸಾಂಸ್ಕತಿಕ ಸಮಿತಿ ಸಂಚಾಲಕ ಡಾ.ಹೆಚ್.ಗುಡ್ಡದೇಶ್ವರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ಕಾರಿ ಕಲಾ ಕಾಲೇಜಿನಲ್ಲಿ ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಅದರಲ್ಲಿ ಶೇ.62 ರಷ್ಟು ವಿದ್ಯಾರ್ಥಿನಿಯರಿರುವುದು ಹೆಮ್ಮೆಯ ಸಂಗತಿ.
ಡಾಕ್ಟರೇಟ್ ಪಡೆದಿರುವ 26 ಪ್ರಾಧ್ಯಾಪಕರು, 32 ಮಂದಿ ಎಂ.ಫಿಲ್. ಪಡೆದವರು ಅತಿಥಿ ಉಪನ್ಯಾಸಕರು ಸೇರಿದಂತೆ 176 ಪ್ರಾಧ್ಯಾಪಕರುಗಳಿದ್ದಾರೆ. ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ವಿದ್ಯಾರ್ಥಿಗಳನ್ನು ತೊಡಗಿಸುವ ಮೂಲಕ ನಾಯಕತ್ವದ ಗುಣ ಬೆಳೆಸುವ ಕೆಲಸ ಮಾಡಲಾಗುತ್ತಿದೆ. ವಿವಿಧ ಯೋಜನೆಗಳಿಗೆ ಕ್ರಿಯಾ ಯೋಜನೆ ಸಿದ್ದವಾಗಿದೆ ಎಂದು ಕಾಲೇಜಿನ ಸಂಕ್ಷಿಪ್ತ ಮಾಹಿತಿಯನ್ನು ನೀಡಿದರು.ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರೊ.ಕೆ.ಪ್ರಸಾದ್, ಐ.ಕ್ಯೂ.ಎ.ಸಿ. ಸಂಚಾಲಕ ಪ್ರೊ.ಜೆ.ಡಿ.ಸುರೇಶ್ ವೇದಿಕೆಯಲ್ಲಿದ್ದರು.ಸರ್ಕಾರಿ ಕಲಾ ಕಾಲೇಜು ಪ್ರಾಂಶುಪಾಲರಾದ ಪ್ರೊ.ಟಿ.ಎಲ್.ಸುಧಾಕರ ಅಧ್ಯಕ್ಷತೆ ವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
