ಆತ್ಮಸ್ಥೈರ್ಯದಿಂದ ಪರೀಕ್ಷೆ ಬರೆಯಲು ಸಜ್ಜು ಗೊಳಿಸಿ

ದಾವಣಗೆರೆ:

     ವಿದ್ಯಾರ್ಥಿ ಜೀವನದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಎಂಬುದೊಂದು ಅತಿ ಮುಖ್ಯವಾದ ಘಟ್ಟವಾಗಿದ್ದು, ವಿದ್ಯಾರ್ಥಿಗಳು ಯಾವುದೇ ಭಯ ಮತ್ತು ಆತಂಕಗಳಿಗೆ ಒಳಗಾಗದೇ ಆತ್ಮಸ್ಥೈರ್ಯದಿಂದ ಪರೀಕ್ಷೆ ಬರೆಯುವಂತೆ ಶಿಕ್ಷಕರು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಶಿಕ್ಷಕರಿಗೆ ಕರೆ ನೀಡಿದರು.

     ನಗರದ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಶುಕ್ರವಾರ 2019-20ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಚರ್ಚಿಸಲು ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಸ್ಸೆಸ್ಸೆಲ್ಸಿ ಪರೀಕ್ಷೆ ಎಂದರೆ ವಿದ್ಯಾರ್ಥಿಗಳಲ್ಲಿ ಸಹಜವಾಗಿ ಭಯವಿರುತ್ತದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹೇಗೆ ತಯಾರಿ ನಡೆಸಬೇಕೆನ್ನುವುದನ್ನು ತಿಳಿ ಹೇಳಬೇಕು. ಮತ್ತು ಪರೀಕ್ಷೆಯನ್ನು ಯಾವುದೇ ಗೊಂದಲಗಳಿಗೆ ಒಳಗಾಗದಂತೆ ಉತ್ತರ ಬರೆಯುವಂತೆ ಧೈರ್ಯ ತುಂಬಬೇಕು ಎಂದು ಕಿವಿಮಾತು ಹೇಳಿದರು.

    ಶಿಕ್ಷಕರೆಲ್ಲರೂ ಅತ್ಯಂತ ಪ್ರಾಮಾಣಿಕತೆ ಮತ್ತು ಕಾಳಜಿಯಿಂದ ಕಾರ್ಯ ನಿರ್ವಹಿಸಬೇಕು. ನಾನೂ ಸಹ ಶಿಕ್ಷಕ ವೃತ್ತಿ ಮಾಡಿ ಬಂದಿದ್ದೇನೆ. ಶಿಕ್ಷಕ ವೃತ್ತಿಯು ಪ್ರವಿತ್ರ ವೃತ್ತಿ. ದೇವರು ವಿಶೇಷ ಪತ್ರಿಭೆಯುಳ್ಳವರಿಗೆ ಈ ವೃತ್ತಿ ನೀಡುತ್ತಾನೆ. ಶಿಕ್ಷಕ ಕೆಲಸವನ್ನು ದೇವರ ಕೆಲಸವೆಂದು ಕೊಂಡು ಅತ್ಯಂತ ಪ್ರಾಮಾಣಿಕತೆಯಿಂದ ಮತ್ತು ಖುಷಿಯಿಂದ ನಿರ್ವಹಿಸಿ ಎಂದು ತಿಳಿಸಿದರು.

    ಇದುವರೆಗೆ ನಡೆದಿರುವ ಪಿಯು ಪರೀಕ್ಷೆಗಳಲ್ಲಿ ಜಿಲ್ಲೆಯಲ್ಲಿ ಯಾವುದೇ ಕಾನೂನುಬಾಹಿರ ಮತ್ತು ಅಹಿತರಕರ ಘಟನೆಗಳು ನಡೆದಿಲ್ಲ. ಅದರಂತೆ ಈ ಪರೀಕ್ಷೆಗಳಲ್ಲಿ ಯಾವುದೇ ಘಟನೆಗಳು ನಡೆಯದಂತೆ ಪ್ರಾಮಾಣಿಕವಾಗಿ ಪರೀಕ್ಷೆ ನಡೆಸುವುದರ ಮೂಲಕ ಜಿಲ್ಲೆಗೆ ಒಳ್ಳೆಯ ಹೆಸರು ತರೋಣ ಎಂದರು.

   ಆಯಾ ವಲಯಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾತನಾಡಿ, ದಾವಣಗೆರೆ ದಕ್ಷಿಣ ವಲಯದಲ್ಲಿ ಒಟ್ಟು 21 ಪರೀಕ್ಷಾ ಕೇಂದ್ರಗಳಲ್ಲಿ 5,495 ವಿದ್ಯಾರ್ಥಿಗಳು, ದಾವಣಗೆರೆ ಉತ್ತರ ವಲಯದಲ್ಲಿ ಒಟ್ಟು 13 ಪರೀಕ್ಷಾ ಕೇಂದ್ರಗಳಲ್ಲಿ 3,255 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಿದ್ದತೆ ಮಾಡಲಾಗಿದೆ. ಹರಿಹರ ತಾಲ್ಲೂಕಿನಲ್ಲಿ 10 ಪರೀಕ್ಷಾ ಕೇಂದ್ರಗಳಲ್ಲಿ 3,163 ವಿದ್ಯಾರ್ಥಿಗಳು ಮತ್ತು ಜಗಳೂರಿನಲ್ಲಿ 9 ಪರೀಕ್ಷಾ ಕೇಂದ್ರಗಳಲ್ಲಿ 2,253 ವಿದ್ಯಾರ್ಥಿಗಳು ಮತ್ತು ಚನ್ನಗಿರಿಯಲ್ಲಿ 3,780 ವಿದ್ಯಾರ್ಥಿಗಳು, ಹೊನ್ನಾಳಿಯಲ್ಲಿ ಒಟ್ಟು 10 ಪರೀಕ್ಷಾ ಕೇಂದ್ರಗಳಿದ್ದು, 2,787 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಿದ್ದತೆ ಮಾಡಲಾಗಿದೆ. ಹಾಗೂ ಎಲ್ಲಾ ಪರೀಕ್ಷಾ ಕೇಂದ್ರಗಳಿಗೂ ಮೊಬೈಲ್ ಸ್ವಾಧೀನಾಧಕಾರಿಯನ್ನು ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು.

    ಜಿಲ್ಲಾ ನೋಡೆಲ್ ಅಧಿಕಾರಿ ವೀರಣ್ಣ ಜತ್ತಿ ಮಾತನಾಡಿ, ಸಿಸಿ ಟಿವಿ ಲಭ್ಯವಿಲ್ಲದೇ ಇರುವ ಶಾಲೆಗಳಲ್ಲಿ ಕಡ್ಡಾಯವಾಗಿ ಸಿಸಿ ಟಿವಿ ಅಳವಡಿಸಬೇಕು. ಸಿಸಿಟಿವಿ ಅಳವಡಿಸಲು ತಾಲ್ಲೂಕು ಪಂಚಾಯತ್ ವತಿಯಿಂದ ಅನುದಾನ ಪಡೆದುಕೊಂಡು ಸಿಸಿ ಟಿವಿ ಅಳವಡಿಸಬೇಕು ಎಂದರು.

    ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಗಂಗಾಧರ್ ಮಾತನಾಡಿ, ಪ್ರಪಂಚದಾದ್ಯಂತ ಕೋವಿಡ್-19 ಎಂಬ ವೈರಾಣು ಹರಡುತ್ತಿದೆ. ಈ ವೈರಾಣು ಎಂಜಲಿನ ತುಂತುರು ಹನಿಗಳ ಮೂಲಕ ಕೆಮ್ಮುವುದು ಮತ್ತು ಸೀನುವುದರಿಂದ ಹರಡುವುದರಿಂದ ವ್ಯಕ್ತಿಗಳು ಪರಸ್ಪರ ಮಾತನಾಡುವಾಗ ಎಚ್ಚರಿಕೆ ವಹಿಸಬೇಕು. ಇನ್ನೂ ಪರೀಕ್ಷಾ ಸಮಯದಲ್ಲಿ ಮಕ್ಕಳಿಗೆ ಶುದ್ದ ಕುಡಿಯುವ ನೀರು ಮತ್ತು ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.

    ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಮಾತನಾಡಿ, ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಹಾಜರಾಗುವ ಪ್ರತಿ ವಿದ್ಯಾರ್ಥಿ ಮತ್ತು ಶಿಕ್ಷಕರಿಗೆ ಸ್ಯಾನಿಟರೈಸರ್ ನೀಡಬೇಕು. ಸರ್ಕಾರ ಆದೇಶ ನೀಡಿದರೆ ಮಾಸ್ಕ್ ಧರಿಸಲು ಅವಕಾಶ ಕೊಡಬೇಕು. ಹಾಗೂ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಟಿವಿ ಅಳವಡಿಸಬೇಕು. ಅನುದಾನಕ್ಕಾಗಿ ತಾಲ್ಲೂಕು ಪಂಚಾಯತ್ ಇಓಗಳಿಗೆ ಪತ್ರ ಬರೆಯಲಾಗುವುದು ಎಂದರು.

    ಪರೀಕ್ಷಾ ಸಮಯದಲ್ಲಿ ಉತ್ತರ ಪತ್ರಿಕೆಗಳನ್ನು ಜಿಲ್ಲಾಡಳಿತ ಕಚೇರಿಗೆ ತರುವ ಸಮುಯದಲ್ಲಿ ಕಡ್ಡಾಯವಾಗಿ ಪೊಲೀಸ್ ಸಿಬ್ಬಂದಿಗಳ ಜೊತೆಯಲ್ಲಿಯೇ ತರಬೇಕು ಎಂದರು.ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಆರ್. ಪರಮೇಶ್ವರಪ್ಪ ಮಾತನಾಡಿ ಮಾ.27 ರಿಂದ ಏ 9 ರವರೆಗೆ ಪರೀಕ್ಷೆಗಳು ನಡೆಯಲಿದೆ. ಕೊರೊನಾ ಪರಿಣಾಮದಿಂದ 06ನೇ ತರಗತಿಯಿಂದ 9ನೇ ತರಗತಿಯವರೆಗೆ ಪರೀಕ್ಷೆಯನ್ನು ರದ್ದುಗೊಳಿಸಿ ರಜೆಯನ್ನು ನೀಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 435 ಶಾಲೆಗಳಿವೆ.

    148 ಸರ್ಕಾರಿ ಶಾಲೆಗಳು 171 ಅನುದಾನಿತ ಶಾಲೆ, 116 ಅನದಾನ ರಹಿತ ಶಾಲೆಗಳಿದ್ದು, ಒಟ್ಟು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಸಂಖ್ಯೆ 20,927 ಆಗಿದೆ. 10,311 ಗಂಡು ಮಕ್ಕಳು, 10,616 ಹೆಣ್ಣು ಮಕ್ಕಳಿದ್ದು, 79 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ ಎಂದರು.

    ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ(ಅಭಿವೃದ್ಧಿ) ಲಿಂಗರಾಜು, ಖಜಾನೆ ಇಲಾಖೆಯ ಉಪ ನಿರ್ದೇಶಕ ರಾಜಣ್ಣ, ಪೊಲೀಸ್ ವೃತ್ತ ನಿರೀಕ್ಷಕ ಸತೀಶ್, ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಹಾಗೂ ಎಲ್ಲಾ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು, ಮಾರ್ಗದರ್ಶಕರು, ಸಿಪಿಆರ್‍ಗಳು ಭಾಗವಹಿಸಿದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link